ಮಣಿಪುರ ಜನಾಂಗೀಯ ಘರ್ಷಣೆ; ಸುಪ್ರೀಂ ಕೋರ್ಟ್​ನಿಂದ ತ್ರಿಸದಸ್ಯ ಸಮಿತಿ ರಚನೆ

3 Panel Committee
Published on

ನವದೆಹಲಿ: ಮಣಿಪುರದಲ್ಲಿ ಸಂಭವಿಸಿದ್ದ ಜನಾಂಗೀಯ ಘರ್ಷಣೆಗೆ ಸಂಬಂಧಿಸಿದಂತೆ ತನಿಖೆಯ ಮೇಲ್ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ಮೂವರು ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿಯೊಂದನ್ನು ಸೋಮವಾರ ರಚಿಸಿದೆ.

ತನಿಖೆಯ ಮೇಲ್ವಿಚಾರಣೆ ನಡೆಸಲು ಸಮಿತಿ ಒಂದನ್ನೂ ನೇಮಿಸುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​, ಮನೋಜ್​ ಮಿಶ್ರಾ, ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಆದೇಶ ನೀಡಿದೆ.

ಮಣಿಪುರದಲ್ಲಿ ನಡೆದ ಜನಾಂಗೀಯ ಘರ್ಷಣೆಯ ಕುರಿತು ಸಿಬಿಐ ಹಾಗೂ ಸ್ಥಳೀಯ ಪೊಲೀಸರು ನಡೆಸುತ್ತಿರುವ ತನಿಖೆಯನ್ನೂ ಪರಿಶೀಲಿಸಲು ಸುಪ್ರೀಂ ಕೋರ್ಟ್​ ಜಮ್ಮು-ಕಾಶ್ಮೀರ ಹೈಕೋರ್ಟ್​ನ ಮಾಜಿ ನ್ಯಾಯಮೂರ್ತಿ ಗೀತಾ ಮಿತ್ತಲ್​ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಮಹಿಳಾ ನ್ಯಾಯಾಂಗ ಸಮಿತಿಯನ್ನು ರಚಿಸಿದೆ.

ಸಮಿತಿಯಲ್ಲಿ ಮಾಜಿ ನ್ಯಾಯಮೂರ್ತಿಗಳಾದ ಶಾಲಿನಿ ಜೋಶಿ(ಬಾಂಬೆ ಹೈಕೋರ್ಟ್​) ಮತ್ತು ಆಶಾ ಮೆನನ್(ದೆಹಲಿ ಹೈಕೋರ್ಟ್​)​ ಇದ್ದಾರೆ. ಮಹಿಳಾ ನ್ಯಾಯಾಂಗ ಸಮಿತಿಯೂ ಸಿಬಿಐ ಹಾಗೂ ಪೊಲೀಸರು ನಡೆಸುತ್ತಿರುವ ತನಿಖೆಯ ಪ್ರಗತಿ, ಪರಿಹಾರ ಕ್ರಮ ಹಾಗೂ ಪುನರ್ವಸತಿ ಕಲ್ಪಿಸುವ ಕೆಲಸ ಮಾಡಲಿದೆ ಎಂದು ಸುಪ್ರೀಂ ಕೋರ್ಟ್​ ತ್ರಿಸದಸ್ಯ ಪೀಠ ಹೇಳಿದೆ.

ಇದಲ್ಲದೆ ಸಿಬಿಐಗೆ ವರ್ಗಾಯಿಸದ 42 ಪ್ರಕರಣಗಳ ವಿಚಾರಣೆಯನ್ನೂ SIT ತನಿಖೆ ನಡೆಸಲಿದೆ. ಮಾಜಿ ಐಪಿಎಸ್​ ಅಧಿಕಾರಿ ದತ್ತಾತ್ರೇಯ ಪಡಸಾಲಗೀಕರ್​ ಸಿಬಿಐ ತನಿಖೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​, ಮನೋಜ್​ ಮಿಶ್ರಾ, ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net