ಪಾದಯಾತ್ರೆ ನಂತರ ಹಲವು ನಾಯಕರಪ್ರಕರಣ ಬಯಲಿಗೆ: ಚಲುವರಾಯಸ್ವಾಮಿ

N.Chaluvarayaswomey
Published on

ಬೆಂಗಳೂರು:
ಪಾದಯಾತ್ರೆ ಮುಗಿದ ಮೇಲೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಪ್ರಕರಣ ಹೊರಬರುತ್ತದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರ್ಯಾರ ಮೇಲೆ ಕೇಸ್ ಇದೆಯೋ ಅದೆಲ್ಲ 100% ಹೊರಬರುತ್ತದೆ ನೋಡಿ ಎಂದರು.
ಬಿಜೆಪಿ ಮತ್ತು ಜೆಡಿಎಸ್‌ನವರು ವಿಷಯವೇ ಇಲ್ಲದೇ ಪಾದಯಾತ್ರೆ ಮಾಡಿದ್ದಾರೆ. ಕೆಲವು ಪ್ರಶ್ನೆಗಳನ್ನು ಬಿಜೆಪಿ ಮುಂದೆ ಇಟ್ಟಿದ್ದೇವೆ. ಅದಕ್ಕೂ ಇನ್ನೂ ಉತ್ತರ ಬಂದಿಲ್ಲ ಎಂದರು.
ನಾವು ಬಿಡಿದಿ ಚನ್ನಪಟ್ಟಣ ರಾಮನಗರದಲ್ಲಿ ಈಗಾಗಲೇ ಸಮಾವೇಶ ಮಾಡಿ ಮುಗಿಸಿದ್ದೇವೆ. ಮೈಸೂರಿನ ಸಮಾವೇಶದಲ್ಲಿ ಹಲವು ವಿಷಯ ಪ್ರಸ್ತಾಪ ಮಾಡಲಾಗುವುದು ಎಂದರು.
ಕೇಂದ್ರದ ಮುಂದೆ ಕೇಳಬೇಕಾದ ಸೌಲಭ್ಯದ ಬಗ್ಗೆ ಬಿಜೆಪಿ ಮೌನವಾಗಿದೆ. ಆದರೆ, ಇಲ್ಲಿ ಮಾತ್ರ ರೋಷಾವೇಶದಿಂದ ಪಾದಯಾತ್ರೆ ಮಾಡುತ್ತಿರುವುದು ಅಚ್ಚರಿಯಾಗಿದೆ ಎಂದರು.
ಮುಡಾದಲ್ಲಿ ಅವರು ಕುಟುಂಬದವರು ಜಮೀನು ಪಡೆದಿದ್ದರೆ ಅವರೇ ಜವಾಬ್ದಾರಿ. ಸಿಎಂ ಜವಬ್ದಾರಿ ಹೇಗಾಗುತ್ತದೆ? ಅಣ್ಣ-ತಮ್ಮಂದಿರ ಆಸ್ತಿ ತೆಗೆದುಕೊಂಡಿದ್ದಾರೆ, ಅದಕ್ಕೆ ಕುಮಾರಸ್ವಾಮಿ ಅವರೇ ಜವಾಬ್ದಾರಿ. ಆದರೆ ವಿಷಯ ಬಿಟ್ಟು ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಬಗ್ಗೆ ಮಾತಾಡಿಲ್ಲ ಅಂದರೆ ನಿದ್ದೆ ಬರಲ್ಲ ಅನ್ಸುತ್ತೆ ಎಂದರು.
ಮುಡಾ ಹಗರಣ ಎಂದು ಇವರು ಹೇಳುತ್ತಿದ್ದಾರೆ. ಆದರೆ ಅದು ಹಗರಣವೇ ಅಲ್ಲ. ರಾಜ್ಯಪಾಲರ ನಿರ್ಧಾರದ ಮೇಲೆ ನಮಗೆ ಯಾವ ನೀರಿಕ್ಷೆಗಳು ಇಲ್ಲ ಎಂದರು.
ಶಿಕ್ಷೆ ಕೊಡಬೇಕು ಅಂದರೆ ಅಂದಿನ ಮುಡಾ ಅಧ್ಯಕ್ಷರ ಮೇಲೂ ಕ್ರಮ ಆಗಬೇಕು ಅಲ್ಲವೇ? ಎಂದು ಕೇಳಿದರು.
ಪಾದಯಾತ್ರೆ ತಪ್ಪು ಅಂತ ಹೇಳ್ತಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರ್ತಿಲ್ಲ ಎಂದು ಪಾದಯಾತ್ರೆ ಮಾಡಬೇಕಿತ್ತು. ಅದನ್ನು ಇವರು ಕೇಂದ್ರಕ್ಕೆ ಹೋಗಿ ಕೇಳಲು ಸಿದ್ಧರಿಲ್ಲ ಎಂದರು.
ಕುಮಾರಸ್ವಾಮಿ ಲೋಕಾಯುಕ್ತ ಪ್ರಕರಣ ಬಾಕಿ ಇದೆ. ಇನ್ನೂ ಒಂದಿಷ್ಟು ಪ್ರಕರಣ ಹೊರಬರುತ್ತದೆ, ನೋಡ್ತಾ ಇರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net