

ಶಿವಮೊಗ್ಗ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯು ಡಿವಿಎಸ್ (ದೇಶೀಯ ವಿದ್ಯಾಶಾಲಾ ಸಮಿತಿ) ಸಹಯೋಗದಲ್ಲಿ ಸೋಮವಾರ ನಗರದ ಡಿವಿಎಸ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಪದಬಂಧ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ ದೊರೆಯಿತು.
ವಿಭಿನ್ನ ಆಲೋಚನೆ ಮೂಲಕ ಕನ್ನಡದ ಮನಗಳ ಸೆಳೆಯುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಪದಬಂಧ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ 100ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅರ್ಧ ಗಂಟೆಯಲ್ಲೇ ಪದಬಂಧ ಭರ್ತಿ ಮಾಡಿದ ಹತ್ತು ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.
ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಪತ್ರಿಕೆಗಳಲ್ಲಿ ಪ್ರತಿ ದಿನ ಪ್ರಕಟವಾಗುವ ಪದಬಂಧ ಕೇವಲ ಒಂದು ಆಟವಲ್ಲ. ಅದು ವ್ಯಕ್ತಿತ್ವವನ್ನು ರೂಪುಗೊಳ್ಳುವಂತೆ ಮಾಡುತ್ತದೆ. ಪದಬಂಧಗಳ ನಡುವೆ ಅನೇಕ ಸಂಗತಿಗಳು ಅಡಕವಾಗಿರುತ್ತವೆ. ಅವುಗಳನ್ನು ಸರಿಯಾಗಿ ಭರ್ತಿ ಮಾಡಿದರೆ ಬುದ್ಧಿಶಕ್ತಿಯೂ ಇಮ್ಮಡಿಗೊಳ್ಳುತ್ತದೆ ಎಂದರು.
ಡಿವಿಎಸ್ ಅಧ್ಯಕ್ಷ ರುದ್ರಪ್ಪ ಕೆ.ಕೊಳಲೆ ಮಾತನಾಡಿ, ಪದಬಂಧವು ಬುದ್ಧಿ ಶಕ್ತಿ, ಜ್ಞಾಪಕ ಶಕ್ತಿ ವೃದ್ಧಿಸಲು ಸಹಕಾರಿ. 70ರ ದಶಕದಿಂದಲೂ ಪದಬಂಧ ಮತ್ತು ಸುಡೊಕು ಭರ್ತಿ ಮಾಡುತ್ತಿದ್ದೇನೆ. ಇದರಿಂದ ದೇಶದ ಇತಿಹಾಸ, ಚರಿತ್ರೆ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳು ಪಾಠ ಪ್ರವಚನಗಳ ಜತೆಗೆ ಪ್ರತಿದಿನ ಕನಿಷ್ಠ 5 ನಿಮಿಷವಾದರೂ ಪದಬಂಧ ಭರ್ತಿ ಮಾಡುವುದನ್ನೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್, ಡಿವಿಎಸ್ ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯೆ ಪೂರ್ಣಿಮಾ, ವಿಜಯವಾಣಿ ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕಿ ವಿನುತಾ ನಿರ್ವಹಿಸಿ ವಂದಿಸಿದರು.
ದಿನಪತ್ರಿಕೆ ಓದದಿದ್ದರೆ ಕನ್ನಡಕ್ಕೆ ಅನ್ಯಾಯ
ದಿನಪತ್ರಿಕೆಗಳನ್ನು ಓದದಿದ್ದರೆ ಅದು ನಾವು ಕನ್ನಡಕ್ಕೆ ಮಾಡುವ ಅನ್ಯಾಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಕರ್ನಾಟಕದಲ್ಲೇ ಕನ್ನಡ ಕಲಿಕೆ ಬಗ್ಗೆ ನಿರ್ಲಕ್ಷೃ ತಾಳಲಾಗುತ್ತಿದೆ. ಇದು ಕನ್ನಡಕ್ಕೆ ಮಾಡುವ ಅವಮಾನವಾಗಿದೆ. ಕನ್ನಡ ಒಳ್ಳೆಯ ಸ್ಥಾನ ಪಡೆಯಬೇಕಿದ್ದರೆ, ಸೃಜನಾತ್ಮಕವಾಗಬೇಕಾದರೆ ಅದು ಕನ್ನಡಿಗರಿಂದ ಮಾತ್ರ ಸಾಧ್ಯ. ನಿತ್ಯವೂ ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಓದದಿದ್ದರೆ ನಿಮಗೆ ನೀವೇ ಮಾಡಿಕೊಳ್ಳುವ ಅನ್ಯಾಯ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.
ಪದಬಂಧ ವಿಜೇತೆಯ ಉದಾತ್ತ ಗುಣ
ಕನ್ನಡ ಪದಬಂಧ ಸ್ಪರ್ಧೆಯಲ್ಲಿ ವಿವಿಧ ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸರಿ ಉತ್ತರ ಬರೆದಿದ್ದ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಟಾಪ್ 10ರಲ್ಲಿದ್ದ ಡಿವಿಎಸ್ ಕಾಲೇಜಿನ ವಿದ್ಯಾರ್ಥಿನಿ ಎಚ್.ಎಸ್.ಸಂಭ್ರಮಾ ಅವರು ನಗದು ಬಹುಮಾನ ಹಿಂದಿರುಗಿಸಿ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೀಡುವಂತೆ ‘ವಿಜಯವಾಣಿ’ಗೆ ಮನವಿ ಮಾಡಿದರು. ವಿದ್ಯಾರ್ಥಿನಿಯ ಈ ನೆರವಿನ ಉದಾತ್ತ ಗುಣ ಹಲವರ ಮೆಚ್ಚುಗೆಗೆ ಪಾತ್ರವಾಯಿತು.