

ನವದೆಹಲಿ : ಕರೊನಾ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ಎದುರಿಸುತ್ತಿರುವ ದೆಹಲಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಗಳ ಕಾಳದಂಧೆ ನಡೆಸುತ್ತಿದ್ದ ನಾಲ್ಕು ಜನ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಕಾನ್ಸಂಟ್ರೇಟರ್ಗಳನ್ನು ತಲಾ 70 ಸಾವಿರ ರೂ.ಗಳಿಗೆ ಮಾರುತ್ತಾ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಒಟ್ಟು 419 ಉಪಕರಣಗಳನ್ನು ದೆಹಲಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ದೆಹಲಿ ಪೊಲೀಸ್ ಸಿಬ್ಬಂದಿಯು ನಗರದ ಲೋಧಿ ಕಾಲೊನಿಯಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ನೆಗೆ ಜು ರೆಸ್ಟೊರೆಂಟ್ ಅಂಡ್ ಬಾರ್ನಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿದೆ. ಪರಿಶೀಲಿಸಿದಾಗ, ಒಬ್ಬ ವ್ಯಕ್ತಿ ಲ್ಯಾಪ್ಟಾಪ್ ಹಿಡಿದು ಆನ್ಲೈನ್ ಪೋರ್ಟಲ್ ಮೂಲಕ ಆಕ್ಸಿಜನ್ ಕಾನ್ಸಂಟ್ರೇಟರ್ಗಳಿಗೆ ಆರ್ಡರ್ ಪಡೆಯುತ್ತಿದ್ದುದು ಕಂಡಿದೆ.
ರೆಸ್ಟೊರೆಂಟ್ನ ಶೋಧ ನಡೆಸಿದಾಗ 9 ಲೀಟರ್ ಮತ್ತು 5 ಲೀಟರ್ ಸಾಮರ್ಥ್ಯದ ಕಾನ್ಸಂಟ್ರೇಟರ್ಗಳಿರುವ 32 ಬಾಕ್ಸ್ಗಳು, ಥರ್ಮಲ್ ಸ್ಕಾನರ್ ಮತ್ತು ಎನ್-95 ಮಾಸ್ಕ್ಗಳ ಎರಡು ಬಾಕ್ಸ್ಗಳು ಸಿಕ್ಕಿವೆ ಎನ್ನಲಾಗಿದೆ. ನವ್ನೀತ್ ಕಾಲ್ರ ಎಂಬುವರು ರೆಸ್ಟೋರೆಂಟ್ನ ಮಾಲೀಕರೆಂದು ತಿಳಿದುಬಂದಿದೆ. ಈ ಕೃತ್ಯದಲ್ಲಿ ತೊಡಗಿದ್ದ ದೆಹಲಿ ನಿವಾಸಿಗಳಾದ ಗೌರವ್ ಸಿಂಗ್, ಸತೀಶ್ ಸೇಠಿ, ವಿಕ್ರಾಂತ್ ಮತ್ತು ಹಿತೇಶ್ ಎಂಬ ನಾಲ್ಕು ಜನರನ್ನು ದೆಹಲಿ ಪೊಲೀಸರು ಬಂಧಿಸಿ, ಮೊಕದ್ದಮೆ ದಾಖಲಿಸಿದ್ದಾರೆ.
ಆರೋಪಿಗಳ ವಿಚಾರಣೆ ನಡೆಸಿದಾಗ ಮಂಡಿ ಗ್ರಾಮದ ಖುಲ್ಲರ್ ಫಾರ್ಮ್ನಲ್ಲಿ ಅವರದೊಂದು ವೇರ್ಹೌಸ್ ಇರುವುದು ತಿಳಿದುಬಂದಿದ್ದು, ಅಲ್ಲಿಯೂ ಪೊಲೀಸರು ಶೋಧ ನಡೆಸಿದ್ದಾರೆ. ಈ ವೇಳೆ ದುಬಾರಿ ಬೆಲೆಗೆ ಮಾರಾಟ ಮಾಡುವುದಕ್ಕೆ ಶೇಖರಿಸಿಟ್ಟಿದ್ದ ಇನ್ನೂ 387 ಉಪಕರಣಗಳು ಲಭಿಸಿದವು. ಉಪಕರಣಗಳ ಅಸಲಿ ಬೆಲೆಗೆ ಎಷ್ಟೋ ಪಟ್ಟು ಹೆಚ್ಚಾಗಿ, ತಲಾ 70,000 ರೂ.ಗಳಿಗೆ, ಇನ್ವಾಯ್ಸ್ ಬರೆದು ಮಾರುತ್ತಿದ್ದರು ಎನ್ನಲಾಗಿದೆ. (ಏಜೆನ್ಸೀಸ್)