ಆಕ್ಸಿಜನ್ ಸಿಲಿಂಡರ್‌ಗಳ ವಶ : ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಬಿಡದಿಯಲ್ಲಿ ಕಾರ್ಖಾನೆಗಳ ಮೇಲೆ ಅಧಿಕಾರಿಗಳ ದಾಳಿ

3 bidadi photo 1
Published on

ಬಿಡದಿ :  ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಂಪನಿಗಳ ಮೇಲೆ ಅಪರ ಜಿಲ್ಲಾಧಿಕಾರಿ ಜವರೇಗೌಡ, ತಹಸೀಲ್ದಾರ್ ನರಸಿಂಹಮೂರ್ತಿ ಮತ್ತು ಕೈಗಾರಿಕಾ ಇಲಾಖೆಯ ಸಹಾಯಕ ಜಂಟಿ ನಿರ್ದೇಶಕ ಶಿವಲಿಂಗಯ್ಯ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ದಿಢೀರ್ ದಾಳಿ ನಡೆಸಿ, ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಮಾಡಿದ್ದ ಆಕ್ಸಿಜನ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ.

ಶ್ಯಾನುಮಂಗಲ ರಸ್ತೆಯಲ್ಲಿರುವ ಬೆನ್‌ಟ್ಲೇ ಇಂಡಿಯಾ ಆಕ್ಸಿಜನ್ ಘಟಕಕ್ಕೆ ತಹಸೀಲ್ದಾರ್ ನರಸಿಂಹಮೂರ್ತಿ ಭೇಟಿ ನೀಡಿ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಪರಿಶೀಲಿಸಿದ ನಂತರ, ಎರಡು ತಂಡಗಳನ್ನು ರಚನೆ ಮಾಡಿ ವಿವಿಧ ಕಂಪನಿಗಳಲ್ಲಿ ಕಾರ್ಯಾಚರಣೆ ನಡೆಸಿದರು.

ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಆಮ್ಲಜನಕ ಸಮಸ್ಯೆಯಿಂದ ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಮಾಡಿರುವ ಸಿಲಿಂಡರ್‌ಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆಯಲು ಮುಂದಾಗಿದೆ.

ವಿವಿಧ ಕಾರ್ಖಾನೆಗಳಲ್ಲಿ ಅವಶ್ಯಕತೆಗಿಂತ ಹೆಚ್ಚು ಸಿಲಿಂಡರ್‌ಗಳು ಮತ್ತು ಖಾಲಿ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿರುವುದರನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು, ಕರೊನಾ ಸಂಕಷ್ಟದ ಸಮಯದಲ್ಲಿ ಸೋಂಕಿತರು ಎದುರಿಸುತ್ತಿರುವ ಆಮ್ಲಜನಕ ಕೊರತೆಯನ್ನು ಕಂಪನಿ ಸಿಇಒಗಳಿಗೆ ಮನವರಿಕೆ ಮಾಡಿ ಸಿಲಿಂಡರ್‌ಗಳನ್ನು ಜಿಲ್ಲಾಡಳಿತದ ವಶಕ್ಕೆ ಪಡೆದರು.

ಅಪರ ಜಿಲ್ಲಾಧಿಕಾರಿ ಜವರೇಗೌಡ, ತಹಸೀಲ್ದಾರ್ ನರಸಿಂಹಮೂರ್ತಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶೇಖರ್‌ಗಡ್ಡದ್, ಕಾರ್ಮಿಕ ನಿರೀಕ್ಷಕ ಯತೀಶ್‌ಕುಮಾರ್, ಡಿವೈಎಸ್‌ಪಿ ಮೋಹನ್‌ಕುಮಾರ್, ಬಿಡದಿ ಆರಕ್ಷಕ ವೃತ್ತ ನಿರೀಕ್ಷಕ ಪ್ರಕಾಶ್, ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್‌ಕುಮಾರ್, ಸಬ್‌ಇನ್ಸ್‌ಪೆಕ್ಟರ್‌ಗಳಾದ ಭಾಸ್ಕರ್, ಹೇಮಂತ್, ಉಪ ತಹಸೀಲ್ದಾರ್ ಮಂಜುನಾಥ್, ರಾಜಸ್ವ ನಿರೀಕ್ಷಕ ಪ್ರಸನ್ನಕುಮಾರ್ ಮತ್ತಿತರರು ಇದ್ದರು.

75ಕ್ಕೂ ಹೆಚ್ಚು ಸಿಲಿಂಡರ್ ವಶ

ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿರುವ ಪಿನ್‌ಕಾರ್ಪ್, ಪ್ರೋಮಾಕ್ ಇಂಜಿನಿಯರಿಂಗ್, ಬೊಷೊಕು, ಟೊಯೋಟಾ ಕಿರ್ಲೋಸ್ಕರ್, ಹಿಂದುಸ್ಥಾನ್ ಕೋಕಕೋಲಾ, ಎಸ್‌ವಿ ಸ್ಟೀಲ್, ಸ್ವರೂಪ್ ಸ್ಟೀಲ್, ಕಾನ್ಫಿಡೆಂಟಲ್ ಎಕ್ಯುಪ್‌ಮೆಂಟ್, ಪಾರ‌್ಗೋ ಪ್ರೋ, ಎಂಎಸ್ ಸ್ಟೀಲ್, ಫೆದರ್‌ಲೈಟ್, ಮದರ್‌ಸನ್, ಕ್ಲಾಸಿಕ್ ಟೆಕ್ನಾಲಜಿ, ಸ್ಟವ್ ಕ್ರಾಫ್ಟ್ ಸೇರಿದಂತೆ 15ಕ್ಕೂ ಹೆಚ್ಚು ಕಂಪನಿಗಳಿಗೆ ಅಧಿಕಾರಿ ಗಳ ತಂಡ ಭೇಟಿ ನೀಡಿ 75ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಪಡೆದಿವೆ.

ಜಿಲ್ಲಾಧಿಕಾರಿ ನಿರ್ದೇಶನದಂತೆ ಬಿಡದಿ ಕೈಗಾರಿಕಾ ಪ್ರದೇಶದ ವಿವಿಧ ಕಂಪನಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಕಂಪನಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್‌ಗಳ ದಾಸ್ತಾನು ಮತ್ತು ಖಾಲಿ ಉಳಿದಿರುವ ಸಿಲಿಂಡರ್‌ಗಳನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗಿದೆ. ಇದರಿಂದ ಲಭ್ಯವಾಗಿರುವ ಸಿಲಿಂಡರ್‌ಗಳಿಗೆ ಬೆನ್‌ಟ್ಲೇ ಇಂಡಿಯಾ ಆಕ್ಸಿಜನ್ ಘಟಕದಲ್ಲಿ ಮರು ಭರ್ತಿ ಮಾಡಿಸಿ, ಕೋವಿಡ್ ಕೇರ್ ಸೆಂಟರ್‌ಗಳಿಗೆ ಪೂರೈಕೆ ಮಾಡಲಾಗುತ್ತದೆ. ನರಸಿಂಹಮೂರ್ತಿ ತಹಸೀಲ್ದಾರ್, ರಾಮನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net