

ಬಳ್ಳಾರಿ: ಕೆಲಸಕ್ಕೆ ಹೋಗೋದಾದರೆ ಮನೆ ಖಾಲಿ ಮಾಡಿ ಎಂದು ಬಾಡಿಗೆದಾರರಿಗೆ ಮಾಲೀಕರು ಒತ್ತಡ ಹೇರುತ್ತಿದ್ದಾರೆ. ಕೆಲಸಕ್ಕೆ ಹೋಗದಿದ್ರೆ ನೌಕರಿಗೆ ಕುತ್ತು, ಹೋದ್ರೆ ಮನೆ ಖಾಲಿ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ ಉದ್ಯೋಗಿಗಳು!
ಜಿಂದಾಲ್ ಸಂಸ್ಥೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ನೌಕರರಿಗೆ ಮನೆ ಬಾಡಿಗೆ ನೀಡಿರುವ ಮಾಲೀಕರೂ ಬೆಚ್ಚಿಬಿದ್ದಿದ್ದಾರೆ. ಸೋಂಕು ತಗಲುವ ಜತೆಗೆ ಇಡೀ ಮನೆ ಸೀಲ್ಡೌನ್ ಆಗಲಿದ್ದು, ಸಂಕಷ್ಟಕ್ಕೆ ಎದುರಿಸಬೇಕಾಗುತ್ತೆ ಎಂಬುದು ಮನೆ ಮಾಲೀಕರ ಆತಂಕ. ಇದರಿಂದ ನೌಕರರೂ ಸಂಕಷ್ಟಕ್ಕೀಡಾಗಿದ್ದಾರೆ. ಕೆಲಸಕ್ಕೆ ಹೋಗದಿದ್ರೆ ನೌಕರಿಗೆ ಕುತ್ತು, ಹೋದ್ರೆ ಮನೆ ಖಾಲಿ ಮಾಡಬೇಕೆಂಬ ಅಡಕತ್ತರಿಯಲ್ಲಿದ್ದಾರೆ. ಇದನ್ನೂ ಓದಿರಿ ಇವರಿಗೆ ಕಾಗೆಯಿಂದಲೇ ಅದೃಷ್ಟ! ಮನೆಯಲ್ಲೇ ಬಿಳಿಕಾಗೆ ಸಾಕ್ತಿದ್ದಾರೆ
ಕಾರ್ಖಾನೆ ಇರುವ ಸಂಡೂರು ತಾಲೂಕಿನ ಜತೆಗೆ ಬಳ್ಳಾರಿ, ಹೊಸಪೇಟೆಯಲ್ಲೂ ಉದ್ಯೋಗಿಗಳು ವಾಸವಿದ್ದಾರೆ. ಕುರುಗೋಡು, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ತಾಲೂಕಿಗೂ ಸೋಂಕಿತರ ಜಾಲ ವಿಸ್ತರಿಸಿದೆ. ಜಿಂದಾಲ್ಗೆ ಸಂಬಂಧಿಸಿ ಕರೊನಾ ಸೋಂಕಿತರ ಸಂಖ್ಯೆ 10 ದಿನದಲ್ಲಿ ಶತಕ ಪೂರೈಸಿದೆ.
ಹೊರರಾಜ್ಯದ ಬಹುತೇಕ ಕಾರ್ಮಿಕರೀಗ ತವರಿಗೆ ಹೋಗಿದ್ದಾರೆ. ಹಲವರು ಈಗಾಗಲೇ ಸೇವಾಸಿಂಧು ಮೂಲಕ ಪಾಸ್ ಪಡೆದಿದ್ದಾರೆ. ಕೆಲವರು ಬೆಂಗಳೂರು, ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ರೈಲಿನ ಮೂಲಕ ಊರಿಗೆ ಹೋಗುವವರಿದ್ದಾರೆ. ಜಾರ್ಖಂಡ್ ಮೂಲದ ನೌಕರರನ್ನು ಕರೆದೊಯ್ಯಲು ರಾಂಚಿಯಿಂದ ಬಸ್ ಬರಲಿದೆ ಎನ್ನಲಾಗಿದೆ.
ಜಿಂದಾಲ್ನಲ್ಲಿ ಕೆಲಸ ಸಿಕ್ಕರೆ ಬದುಕೇ ಪಾವನ ಎಂದುಕೊಳ್ಳುತ್ತಿದ್ದವರೇ ಇದೀಗ ವ್ಯತಿರಿಕ್ತ ಪರಿಸ್ಥಿತಿಯಲ್ಲಿದ್ದಾರೆ. ಸುಮಾರು 35 ಸಾವಿರ ನೌಕರಿರುವ ಜಿಂದಾಲ್ ಕಾರ್ಖಾನೆಯಲ್ಲಿ 10,751 ಸಿಬ್ಬಂದಿಗೆ ಜೂ.12 ರಿಂದ ಜೂ.16ರ ವರೆಗೆ ರಜೆ ನೀಡಲಾಗಿದೆ. ರಜೆ ವಿಸ್ತರಣೆ ಆಗದಿದ್ದರೆ ನೌಕರರು ಮತ್ತಷ್ಟು ಸಂಕಷ್ಟ ಎದುರಿಸುವ ಸಾಧ್ಯತೆಗಳಿವೆ.
ಸ್ವಯಂಪ್ರೇರಿತ ಲಾಕ್ಡೌನ್: ಬಳ್ಳಾರಿ ತಾಲೂಕಿನ ಕುಡತಿನಿ ಗ್ರಾಮಸ್ಥರು ಎರಡು ದಿನಗಳಿಂದ ಸ್ವಯಂ ಘೋಷಿತ ಲಾಕ್ಡೌನ್ ವಿಧಿಸಿಕೊಂಡಿದ್ದಾರೆ. ಜಿಂದಾಲ್ ಉದ್ಯೋಗಿಗಳು ಇದೇ ಗ್ರಾಮದ ಮೂಲಕ ಕೆಲಸಕ್ಕೆ ಹೋಗಬೇಕಿದ್ದು, ಇವರಿಂದ ಸೋಂಕು ಹರಡುವ ಭೀತಿಯಿಂದ ಭಾನುವಾರದಿಂದಲೇ ಒಂದು ವಾರ ಸ್ವಯಂ ಲಾಕ್ಡೌನ್ ವಿಧಿಸಿಕೊಂಡಿದ್ದಾರೆ. ಜಿಂದಾಲ್ಗೆ ಹೋಗುವ ವಾಹನಗಳನ್ನೂ ತಡೆಯುತ್ತಿದ್ದಾರೆ. ಲಾಕ್ಡೌನ್ ಪ್ರಕ್ರಿಯೆ ಕಾರ್ಖಾನೆ ಇರುವ ತೋರಣಗಲ್ ಗ್ರಾಮಕ್ಕೂ ವಿಸ್ತರಣೆಯಾಗಿದೆ. ಗ್ರಾಪಂ ನೌಕರನಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.