ಉಕ್ಕಿ ಹರಿದ ತುಂಗೆ, ಪ್ರವಾಹದ ಭೀತಿ

tunga river
ಉಕ್ಕಿ ಹರಿದ ತುಂಗಾ ನದಿ
Published on

ಶಿವಮೊಗ್ಗ: ಜಿಲ್ಲಾದ್ಯಂತ ಪುನರ್ವಸು ಮಳೆ ಅಬ್ಬರ ಬುಧವಾರವೂ ಮುಂದುವರಿದಿದೆ. ತುಂಗಾ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆ ಕಂಡಿದ್ದು ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ನದಿಪಾತ್ರ ಮತ್ತು ತಗ್ಗು ಪ್ರದೇಶಗಳ ನಿವಾಸಿಗಳಿಗೆ ಎಚ್ಚರ ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಮತ್ತೊಂದೆಡೆ ನಿರಂತರ ಮಳೆ ಸುರಿಯುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ಜು.18ರಂದು ರಜೆ ಘೋಷಿಸಲಾಗಿದೆ.
ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶಿವಮೊಗ್ಗ ನಗರ ಸೇರಿ ಕೆಲವೆಡೆ ಮಳೆ ಕೊಂಚ ಬಿಡುವು ನೀಡಿತ್ತು. ಮಧ್ಯಾಹ್ನದ ಬಳಿಕ ರಾತ್ರಿವರೆಗೂ ವರುಣನ ಆರ್ಭಟ ಮುಂದುವರಿಯುತು. ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನ ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಮತ್ತೆ ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಇಲ್ಲದೆ ಮಲೆನಾಡಿಗರು ಪರದಾಟ ನಡೆಸಿದರು.
ತೀರ್ಥಹಳ್ಳಿ, ಶೃಂಗೇರಿ, ಆಗುಂಬೆ ಸುತ್ತಮುತ್ತ ಭಾರಿ ವರ್ಷಧಾರೆಯಾಗುತ್ತಿದ್ದು ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯದ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, ಡ್ಯಾಂನಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣವೂ ಕೂಡ ಹೆಚ್ಚಾಗಿದೆ.
ಬುಧವಾರ ಬೆಳಗ್ಗೆ ಜಲಾಶಯಕ್ಕೆ 64,247 ಕ್ಯೂಸೆಕ್ ನೀರಿನ ಒಳಹರಿವಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಜಯಾಶಯದಿಂದ 70,497 ಕ್ಯೂಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ. ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ನದಿಯಂಚಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
ಕೋರ್ಪಳಯ್ಯನ ಛತ್ರದ ಬಳಿಯ ಮಂಟಪ ಮುಳುಗಿದ್ದು ಅದರ ಮೇಲೆ 3 ಅಡಿಯಷ್ಟು ನೀರು ಹರಿಯುತ್ತಿದೆ. ಜಲಾಶಯದಿಂದ ಬಿಡುತ್ತಿರುವ ನೀರಿನ ಪ್ರಮಾಣ 80 ಸಾವಿರ ಕ್ಯೂಸೆಕ್ ದಾಟಿದರೆ ನಗರದ ನದಿಪಾತ್ರದ ತಗ್ಗು ಪ್ರದೇಶಗಳಲ್ಲಿನ ಜನವಸತಿ ಪ್ರದೇಶಗಳು ಜಲಾವೃತವಾಗುವ ಆತಂಕವಿದೆ. ಈಗಾಗಲೇ ಮಹಾನಗರ ಪಾಲಿಕೆ ಜಲಾವೃತ ಸಾಧ್ಯತೆಯಿರುವ ಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net