

Overcrowded Bus: ಭಾನುವಾರ (ಮೇ.11) ಶ್ರೀಲಂಕಾದಲ್ಲಿ ಸೀಮಿತ ಆಸನ ಮೀರಿ ಹೆಚ್ಚುವರಿ ಬೌದ್ಧ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ 15 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ದಶಕಗಳಲ್ಲೇ ದೇಶದಲ್ಲಿ ನಡೆದ ಅತ್ಯಂತ ಭೀಕರ ರಸ್ತೆ ಅಪಘಾತಗಳಲ್ಲಿ ಇದು ಒಂದಾಗಿದೆ. ಕೋಟ್ಮಲೆಯ ಮಧ್ಯ ಗುಡ್ಡಗಾಡು ಪ್ರದೇಶದ ಮೂಲಕ ಪ್ರಯಾಣಿಸುತ್ತಿದ್ದ ಸರ್ಕಾರಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಮುಂಜಾನೆ ಕಮರಿಗೆ ಉರುಳಿ ಬಿದ್ದಿದೆ. ಸುಮಾರು 70 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸಾರಿಗೆ ಬಸ್, ಸಾಮರ್ಥ್ಯಕ್ಕಿಂತ 20ಕ್ಕೂ ಹೆಚ್ಚು ಜನರನ್ನು ಒಳಗೊಂಡಿದ್ದೇ ಈ ಅಪಘಾತಕ್ಕೆ ಕಾರಣವಾಗಿರಬಹುದು. ಪ್ರಸ್ತುತ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಸ್ ದ್ವೀಪದ ದಕ್ಷಿಣ ಭಾಗದಲ್ಲಿರುವ ಕತರಗಮ ಎಂಬ ಯಾತ್ರಾ ಸ್ಥಳದಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಕೇಂದ್ರ ನಗರವಾದ ಕುರುನಗರಕ್ಕೆ ಪ್ರಯಾಣಿಸುತ್ತಿತ್ತು ಎಂದು ವರದಿಯಾಗಿದೆ,(ಏಜೆನ್ಸೀಸ್).