ಆಸೀಸ್​ ನೆಲದಲ್ಲಿ ಟೆಸ್ಟ್​ ತ್ರಿಶತಕ ಬಾರಿಸಿದ್ದ ಮೊದಲ ಬ್ಯಾಟರ್ ಬಾಬ್ ಕೌಪರ್ ನಿಧನ | Bob Cowper

ವಿಜಯವಾಣಿ - 2025-05-11T125716.609
Published on

Bob Cowper: ಆಸ್ಟ್ರೇಲಿಯಾ ಮಣ್ಣಿನಲ್ಲಿ ಟೆಸ್ಟ್ ಫಾರ್ಮೆಟ್​ನಡಿ ತ್ರಿಶತಕ ಬಾರಿಸಿದ್ದ ಮೊದಲ ಬ್ಯಾಟ್ಸ್‌ಮನ್ ಬಾಬ್ ಕೌಪರ್ (84) ಇಂದು (ಮೇ.11) ಕೊನೆಯುಸಿರೆಳೆದರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಪತ್ನಿ ಡೇಲ್ ಮತ್ತು ಪುತ್ರಿಯರಾದ ಒಲಿವಿಯಾ ಹಾಗೂ ಸೆರಾ ಅವರನ್ನು ಅಗಲಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುತ್ತಿದ್ದ ಬಾಬ್​, ತಮ್ಮ ಸೊಗಸಾದ ಸ್ಟ್ರೋಕ್ ಮತ್ತು ತಾಳ್ಮೆಯ ಆಟಕ್ಕೆ ಹೆಸರುವಾಸಿಯಾಗಿದ್ದರು. ಆಸ್ಟ್ರೇಲಿಯಾ ಪರ ಬೃಹತ್​ ಸ್ಕೋರ್‌ಗಳನ್ನು ಗಳಿಸುವ ಆಟಗಾರರಾಗಿ ಗುರುತಿಸಿಕೊಂಡಿದ್ದ ಅವರು ಒಟ್ಟು 27 ಟೆಸ್ಟ್‌ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

28ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ

ಅವರ ಬ್ಯಾಟಿಂಗ್ ಕರಿಯರ್​ನಲ್ಲಿ ಮಹತ್ವದ ಕ್ಷಣವೆಂದರೆ 1966ರಲ್ಲಿ ಎಂಸಿಜಿಯಲ್ಲಿ ಇಂಗ್ಲೆಂಡ್ ವಿರುದ್ಧ 307 ರನ್ ಗಳಿಸಿದ್ದು. ಅಂದು ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ದಾಖಲಾದ ಬೃಹತ್ ಸ್ಕೋರ್​ ಹಾಗೂ ಮೊದಲ ತ್ರಿಶತಕ ಇಂದಿಗೂ ಅವರ ಹೆಸರಿನಲ್ಲೇ ಇದೆ. 1964ರಿಂದ 1968 ರವರೆಗೆ ಬಾಬ್​ ಆಡಿದ 27 ಟೆಸ್ಟ್‌ಗಳಲ್ಲಿ, ಐದು ಶತಕಗಳು ಸೇರಿದಂತೆ 48.16 ಸರಾಸರಿಯಲ್ಲಿ 2,061 ರನ್‌ಗಳನ್ನು ಗಳಿಸಿದ್ದಾರೆ. 28ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ಬೈ ಹೇಳಿದ ಅವರು, ತಮ್ಮ ನಿರ್ಧಾರದಿಂದ ಕ್ರಿಕೆಟ್​ ಲೋಕಕ್ಕೆ ಅಚ್ಚರಿ ಮೂಡಿಸಿದರು.

ದಿಗ್ಗಜ ಕ್ರಿಕೆಟಿಗನನ್ನು ಕಳೆದುಕೊಂಡ ಆಸೀಸ್​ ಕ್ರಿಕೆಟ್​ ಬಳಗ ಕಂಬನಿ ಮಿಡಿದಿದ್ದು, ಬಾಬ್ ಕೌಪರ್​ ಕುಟುಂಬಕ್ಕೆ ಸಂತಾಪ ಸೂಚಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net