ಪ್ರೀತಿಯ ಹಸು ಕೊಂದ ಸೇಡಿಗೆ ವರ್ಷದ ಬಳಿಕ ಪ್ರತೀಕಾರ: ಚಿರತೆ ಕೊಂದ ಖುಷಿಯ ಬೆನ್ನಲ್ಲೇ ಕಾದಿತ್ತು ಶಾಕ್​!

Leapord
Published on

ಮುನ್ನಾರ್​: ಚಿರತೆಯನ್ನು ಕೊಂದ ಆರೋಪದಲ್ಲಿ 34 ವರ್ಷದ ವ್ಯಕ್ತಿಯನ್ನು ಕೇರಳದ ಮುನ್ನಾರ್​ನಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಕುಮಾರ್​ ಎಂದು ಗುರುತಿಸಲಾಗಿದೆ.

ವರ್ಷಗಳ ಹಿಂದೆ ತನ್ನ ಹಸುವನ್ನು ಬೇಟೆಯಾಡಿ ಕೊಂದಿದ್ದಕ್ಕೆ ಪ್ರತಿಕಾರವಾಗಿ ಚಿರತೆಯನ್ನು ಕುಮಾರ್​ ಬೇಟೆಯಾಡಿದ್ದಾನೆಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್​ 8ರಂದು ಈ ಘಟನೆ ನಡೆದಿದ್ದು, ನಾಲ್ಕು ವರ್ಷದ ಚಿರತೆಯನ್ನು ಕನ್ನಿಮಾಲಾ ಎಸ್ಟೇಟ್​ನ ಕೆಳಭಾಗದಲ್ಲಿ ಬೇಟೆಯಾಡಲಾಗಿದೆ.

ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಹಸು ಕೊಂದ ಪ್ರತಿಕಾರಕ್ಕಾಗಿ ಚಿರತೆ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹಗಲಿನ ವೇಳೆಯಲ್ಲೇ ಹಸುವಿನ ಮೇಲೆ ದಾಳಿ ಮಾಡಿ ಚಿರತೆ ಕೊಂದು ಹಾಕಿತ್ತು. ಈ ಹಸು ಕುಮಾರ್​ ಜೀವನದ ಆಧಾರವಾಗಿತ್ತು. ಹೀಗಾಗಿ ಸೇಡು ತೀರಿಸಿಕೊಂಡಿದ್ದಾನೆ.

ಚಿರತೆಯನ್ನು ಕೊಂದಿದ್ದು ಹೇಗೆ?

ಚಿರತೆಯು ಸಾಮಾನ್ಯವಾಗಿ ಓಡಾಡುತ್ತಿದ್ದ ಏರಿಯಾದಲ್ಲಿ ಕುಮಾರ್​ ಬಲೆಯನ್ನು ಅಳವಡಿಸಿದ್ದ. ಆಗಾಗ ಬಲೆಯನ್ನು ಪರಿಶೀಲಿಸುತ್ತಿದ್ದ. ಕೊನೆಗೊಂದು ದಿನ ಬಲೆಗೆ ಬಿದ್ದ ಚಿರತೆಯನ್ನು ಕುಮಾರ್​ ಚಾಕುವಿನಿಂದ ತಿವಿದು ಕೊಂದು ಹಾಕಿದ್ದಾನೆಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net