

ಮುಂಬೈ: ದೇಶದಲ್ಲಿ ಅತ್ಯಂತ ಹೆಚ್ಚು ಕರೊನಾ ಸೋಂಕಿತರು ಇರುವುದು ಮಹಾರಾಷ್ಟ್ರದಲ್ಲಿ. ಅದರಲ್ಲೂ ಮುಂಬೈ, ಪುಣೆಯಲ್ಲಿಯೇ ಅಧಿಕ ಸೋಂಕಿತರು ಇದ್ದಾರೆ.
ಅದರಲ್ಲೂ ಈ ಕೊವಿಡ್-19ಕ್ಕೆ ತುತ್ತಾಗುತ್ತಿರುವ ಪೊಲೀಸರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಮಹಾರಾಷ್ಟ್ರದಲ್ಲಿ 700ಕ್ಕೂ ಅಧಿಕ ಪೊಲೀಸರಿಗೆ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಈಗ ಒಟ್ಟಾರೆ 648 ಸಕ್ರಿಯ ಕೇಸ್ಗಳು ಇವೆ ಎಂದು ರಾಜ್ಯ ಪೊಲೀಸ್ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಯಲ್ಲೇ ಬರೋಬ್ಬರಿ 157 ಪೊಲೀಸರಲ್ಲಿ ಕರೊನಾ ಕಾಣಿಸಿಕೊಂಡಿದೆ.
ಹಾಗೇ ದೇಶದಲ್ಲಿ ಲಾಕ್ಡೌನ್ ಮೊದಲು ಪ್ರಾರಂಭವಾಗಿದ್ದು ಮಾರ್ಚ್ 25ರಂದು. ಅಂದಿನಿಂದ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಅತಿ ಹೆಚ್ಚು ಹಲ್ಲೆಯಾಗಿದೆ. ಮಾ.25ರಿಂದಲೂ ಇಲ್ಲಿಯವರೆಗೆ ಪೊಲೀಸರ ಮೇಲೆ ನಡೆದ ಹಲ್ಲೆಯ ಒಟ್ಟು 194 ಪ್ರಕರಣಗಳು ದಾಖಲಾಗಿವೆ. ಅದಕ್ಕೆ ಸಂಬಂಧಪಟ್ಟಂತೆ 689 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ 20,000ದೆಡೆಗೆ ಸೋಂಕಿತರ ಸಂಖ್ಯೆ ಏರುತ್ತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೂ ಕೂಡ ನಮ್ಮಿಂದ ಸೋಂಕು ಹರಡುವ ಸರಪಣಿಯನ್ನು ಕತ್ತರಿಸಿ, ವೈರಸ್ ನಿಯಂತ್ರಣ ಮಾಡುವುದು ಕಷ್ಟವಾಗುತ್ತಿದೆ ಎಂದು ಒಪ್ಪಿಕೊಂಡು ಕೈ ಚೆಲ್ಲಿ ಕುಳಿತಿದ್ದಾರೆ.
ಹಾಗೇ ನಮಗೆ ಲಾಕ್ಡೌನ್ನ್ನು ತುಂಬ ದಿನಗಳ ಕಾಲ ಮುಂದುವರಿಸಲಾಗುವುದಿಲ್ಲ. ಆದಷ್ಟು ಬೇಗ ಸೋಂಕು ನಿಯಂತ್ರಣವಾಗಿ, ಲಾಕ್ಡೌನ್ನಿಂದ ಹೊರಬರಬೇಕು ಎಂದರೆ, ಕೆಲವು ಶಿಸ್ತು, ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲೇಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಲೇಬೇಕು ಎಂದಿದ್ದಾರೆ. (ಏಜೆನ್ಸೀಸ್)