ವಿಮಾನ ನಿಲ್ದಾಣದಲ್ಲಿ ಇಬ್ಬರು ಸ್ಮಗ್ಲರ್​ಗಳ ಬಂಧನ; 6,500ಕ್ಕೂ ಹೆಚ್ಚು ಜೀವಂತ ಆಮೆಗಳು ಪತ್ತೆ

Red-eared slider
Published on

ತಮಿಳುನಾಡು: ಕಸ್ಟಮ್ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು ವಿಶೇಷ ಜಾತಿಯ 6,850 ಜೀವಂತ ಆಮೆ(Red-eared slider)ಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳು ಕೌಲಾಲಂಪುರದಿಂದ ತಮಿಳುನಾಡಿನ ತಿರುಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಿರುಚ್ಚಿಯ ಕಸ್ಟಮ್ಸ್ ಅಧಿಕಾರಿಗಳು ಗುಪ್ತಚರ ಮಾಹಿತಿ ಮೇರೆಗೆ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಇಬ್ಬರು ಪ್ರಯಾಣಿಕರನ್ನು ತಡೆದು, ಲಗೇಜ್​ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸ್ಟ್ರಾಲರ್ ಬ್ಯಾಗ್‌ನೊಳಗೆ ಸಣ್ಣ ಪೆಟ್ಟಿಗೆಗಳಲ್ಲಿ ಜೀವಂತ ಆಮೆಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಓರ್ವ ಬಂಧಿತನಿಂದ 57,441 ರೂ. ಮೌಲ್ಯದ ವಿದೇಶಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪರವಾನಗಿ ಇಲ್ಲದೆ ಜೀವಂತ ಆಮೆಗಳನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಯತ್ನಿಸಲಾಗಿದೆ. ಸದ್ಯ ಕೆಂಪು ಇಯರ್ಡ್ ಸ್ಲೈಡರ್ ಆಮೆಗಳನ್ನು ಅವುಗಳ ಮೂಲ ದೇಶಕ್ಕೆ ರವಾನಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಸ್ಟಮ್ಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಕಸ್ಟಮ್ಸ್ ಆಕ್ಟ್, 1962ರ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಲಯಕ್ಕೆ ಹಾಜರು ಪಡಿಸಲಾಗುವುದು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net