

ಉತ್ತರ ಪ್ರದೇಶ: ಗೋರಖ್‌ಪುರದಲ್ಲಿ ಅತಿ ಹೆಚ್ಚು ಸಂಚಾರ ನಿಯಮ ಉಲಂಘನೆ ಮಾಡಿರುವ ಹತ್ತು ವಾಹನಗಳ ಪಟ್ಟಿಯನ್ನು ಸಂಚಾರಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅದರಂತೆ ಸಾಕಷ್ಟು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬನಿಗೆ ದಂಡ ಕಟ್ಟುವಂತೆ 70 ಬಾರಿ ಚಲನ್ ಕಳುಹಿಸಲಾಗಿದೆ. ಇದೀಗ ಈ ವ್ಯಕ್ತಿ ತನ್ನ 85,000 ರೂ. ಮೌಲ್ಯದ ಬೈಕ್ಗೆ ಒಟ್ಟು 70,500 ರೂ. ದಂಡ ಕಟ್ಟಬೇಕಿದೆ.
ಸಾಕಷ್ಟು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿರುವುದರಿಂದ ಈ ವ್ಯಕ್ತಿಗೆ ಸಂಚಾರಿ ಪೊಲೀಸರು 70 ಬಾರಿ ಚಲನ್ ಕಳುಹಿಸಿದ್ದಾರೆ. ಸ್ವಾರಸ್ಯವೆಂದರೆ ಕಳೆದ ವರ್ಷ ಈತ 37 ಬಾರಿ ದಂಡದ ಚಲನ್ ಪಡೆದುಕೊಂಡಿದ್ದ ಎಂದು ವರದಿಯಾಗಿದೆ. ನಗರದಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಇಲಾಖೆ ಕಠಿಣ ಕ್ರಮ ಜಾರಿಗೊಳಿಸಲು ನಿರ್ಧರಿಸಿದೆ. ಅದರಂತೆ ವಿವಿಧೆಡೆ ಎಐ ಕ್ಯಾಮರಾಗಳನ್ನು ಈಗಾಗಲೇ ಅಳವಡಿಸಿದ್ದು, ಸಂಚಾರಿ ನಿಯಮ ಮೀರುತ್ತಿದ್ದಂತೆ ದಂಡದ ಚಲನ್ ಸ್ವಯಂಚಾಲಿತವಾಗಿ ಜಾರಿಯಾಗುತ್ತದೆ.
ಸಾಕಷ್ಟು ಬಾರಿ ದಂಡ ಕಟ್ಟುವಂತೆ ತಪ್ಪಿತಸ್ಥನಿಗೆ ಚಲನ್ ಕಳುಹಿಸಲಾಗಿದೆ. ಈ ಬಗ್ಗೆ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಿಗದಿತ ದಿನಾಂಕದ ಒಳಗಾಗಿ ದಂಡ ಪಾವತಿಸದೇ ಹೋದಲ್ಲಿ, ಆತನ ಬೈಕ್ನ್ನು ವಶಕ್ಕೆ ಪಡೆದುಕೊಳ್ಳಲಾಗುವುದು. ಸಂಪೂರ್ಣ ದಂಡದ ಮೊತ್ತ ಪಾವತಿಸಿದ ಬಳಿಕವೇ ವಾಹನ ಬಿಟ್ಟುಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)