

ಕರಾಚಿ: ಕೇಮರಿ ಬಂದರಿಗೆ ಸರಕು ಹಡಗಿನಲ್ಲಿ ತರಲಾಗಿದ್ದ ತರಕಾರಿ ಕಂಟೇನರ್ನ್ನು ತೆರೆಯುತ್ತಿದ್ದಂತೆ ಸುತ್ತಮುತ್ತಲೂ ಇದ್ದವರು ಅಸ್ವಸ್ಥರಾಗಿ ಅವರಲ್ಲಿ 6 ಮಂದಿ ಮೃತಪಟ್ಟಿದ್ದು, ಹಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ನಡೆದಿದ್ದು ಕರಾಚಿ ಪರಮಾಣು ವಿದ್ಯುತ್ ನಿಗಮದ ಸಮೀಪದಲ್ಲಿ.
ಈ ತರಕಾರಿ ಕಂಟೇನರ್ನ್ನು ಹಡಗಿನಿಂದ ಇಳಿಸಿ, ಕರಾಚಿಯ ಜಾಕ್ಸನ್ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಅದನ್ನು ತೆರೆಯುತ್ತಿದ್ದಂತೆ ಹೊರಸೂಸಲ್ಪಟ್ಟ ಅಪಾಯಕಾರಿ ವಿಷಯುಕ್ತ ಅನಿಲದಿಂದ ಅಲ್ಲಿದ್ದವರೆಲ್ಲ ಉಸಿರಾಡಲಾಗದೆ ಕಷ್ಟಪಡುವಂತಾಯಿತು. ಅನೇಕರು ಪ್ರಜ್ಞೆ ಕಳೆದುಕೊಂಡರು. 6 ಮಂದಿಯ ಜೀವವೇ ಹೋಗಿದೆ. ಇನ್ನೂ 50ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ಹೊಟ್ಟೆನೋವೂ ಕಾಣಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಂಟೇನರ್ನ್ನು ತಂದ ಸರಕು ಹಡಗಿನ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ. ಬಂದರಿನ ಸಿಬ್ಬಂದಿಯಿಂದ ಕೂಡ ವಿವರವನ್ನು ಪಡೆಯುತ್ತಿದ್ದೇವೆ. ಪಾಕ್ ನೌಕಾದಳದ ಸಹಾಯವನ್ನೂ ತೆಗೆದುಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ವಿಷಯುಕ್ತ ಅನಿಲ ಹೊರಹೊಮ್ಮುತ್ತಿದ್ದಂತೆ 100ಕ್ಕೂ ಹೆಚ್ಚು ಜನ ಅಲ್ಲಿಂದ ಓಡಿಹೋಗಿದ್ದಾಗಿ ವರದಿಯಾಗಿದೆ.