ಯುಪಿಎಸ್ಸಿ ಕರ್ನಾಟಕಕ್ಕೆ ಖುಷಿ 40ಕ್ಕೂ ಹೆಚ್ಚು ಕನ್ನಡಿಗ ಅಭ್ಯರ್ಥಿಗಳು ಆಯ್ಕೆ

UPSC
Published on

ನವದೆಹಲಿ/ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಸೇವೆಗಳಿಗಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ದೇಶಾದ್ಯಂತ 829 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ಕನ್ನಡಿಗರಿರುವುದು ರಾಜ್ಯದ ಹಿರಿಮೆ ಹೆಚ್ಚಿಸಿದೆ. ಹರಿಯಾಣದ ರೈತನ ಪುತ್ರ ಪ್ರದೀಪ್ ಸಿಂಗ್ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದರೆ, ಐದನೇ ರ್ಯಾಂಕ್ ಪಡೆದಿರುವ ಬೆಂಗಳೂರಿನ ಸಿ.ಎಸ್. ಜಯದೇವ್ ಕರ್ನಾಟಕದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಒಟ್ಟಾರೆ 1000 ರ್ಯಾಂಕ್​ಗಳ ಪಟ್ಟಿಯಲ್ಲಿ ರಾಜ್ಯದ 40 ಮಂದಿ ಸ್ಥಾನ ಪಡೆದಿದ್ದಾರೆ. ಸಿ.ಎಸ್. ಜಯದೇವ್ 5, ಪ್ರಿಯಾಂಕಾ 68, ಚಿಕ್ಕಮಗಳೂರಿನ ಬಿ.ಯಶಸ್ವಿನಿ 71ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಅಭ್ಯರ್ಥಿಗಳ ಯಶಸ್ಸಿನ ಪ್ರಮಾಣ ಹೆಚ್ಚಳವಾಗಿದೆ. ಕಳೆದ ವರ್ಷ 23 ಅಭ್ಯರ್ಥಿಗಳಷ್ಟೇ ತೇರ್ಗಡೆಯಾಗಿದ್ದರು. 2019ರಲ್ಲಿ ಮೊದಲ ಬಾರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಾರಿಗೆ ಬಂದ ಇಡಬ್ಲು್ಯಎಸ್ ಕೋಟಾದಲ್ಲಿ 78 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.

ಸಾಮಾನ್ಯ ವಿಭಾಗದಿಂದ 304, ಒಬಿಸಿ 251, ಪರಿಶಿಷ್ಟ ಜಾತಿ 129 ಹಾಗೂ ಪರಿಶಿಷ್ಟ ಪಂಗಡದ 67 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. 11 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. 2019ರ ಸೆಪ್ಟೆಂಬರ್​ನಲ್ಲಿ ನಡೆದ ಪರೀಕ್ಷೆಯ ಮತ್ತು 2020ರ ಫೆಬ್ರವರಿಯಿಂದ ಆಗಸ್ಟ್​ವರೆಗೆ ನಡೆದ ಸಂದರ್ಶನದ ಆಧಾರದ ಮೇಲೆ ಫಲಿತಾಂಶ ಪ್ರಕಟವಾಗಿದೆ.

ಬಾಲನಟಿ ಕೀರ್ತನಾ (167ನೇ ರ್ಯಾಂಕ್)

ಯುಪಿಎಸ್​ಸಿನಲ್ಲಿ 167ನೇ ರ್ಯಾಂಕ್ ಪಡೆದಿರುವ ಕೀರ್ತನಾ ಕನ್ನಡ ಸಿನಿಮಾಗಳಲ್ಲಿ ಬಾಲನಟಿ ಯಾಗಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಮತ್ತು ಮಾಲಶ್ರೀ ನಟಿಸಿರುವ ಗಂಗ ಯಮುನಾ ಚಿತ್ರದಲ್ಲಿ ಅವರಿಬ್ಬರ ಮಗಳಾಗಿ ನಟಿಸಿದ್ದಾರೆ. ದೇವರಾಜ್ ಅಭಿನಯದ ಸಿಂಹಾದ್ರಿ ಸಿನಿಮಾದಲ್ಲಿ ನಟಿಸಿದ್ದಾರೆ. ಸಿತಾರ, ಕಲ್ಯಾಣ ಕುಮಾರ್ ಇತರ ಜತೆಗೆ ಕೆಲಸ ಮಾಡಿದ್ದಾರೆ.

ತಂದೆಯ ಕನಸು ನನಸು ಮಾಡಿದ ತೃಪ್ತಿ ನನಗಿದೆ. ಆದರೆ, ಈ ಖುಷಿಯನ್ನು ಹಂಚಿಕೊಳ್ಳಲು ಅವರು ನಮ್ಮ ಜೊತೆಯಲ್ಲಿಲ್ಲ. ಆದರೂ, ಅವರ ಕನಸು ನನಸಾಯ್ತು ಎಂಬುದೇ ದೊಡ್ಡ ಖುಷಿ ಎಂದು 167ನೇ ರ್ಯಾಂಕ್ ಪಡೆದಿರುವ ಕೀರ್ತನಾ ಹೇಳಿದ್ದಾರೆ. ನಾಗರಭಾವಿಯಲ್ಲಿರುವ ಕೀರ್ತನಾ 2015ರಲ್ಲಿ ತಹಶೀಲ್ದಾರ್ ಆಗಿ ಆಯ್ಕೆಯಾಗಿದ್ದರು. ಇದೀಗ ಬಿಬಿಎಂಪಿ ವಿಶೇಷ ಅಧಿಕಾರಿಯಾಗಿ ಕರೊನಾ ನೋಡಲ್ ಅಧಿಕಾರಿಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಸಾರ್ವಜನಿಕ ವಲಯದ ಕೆಲಸ ಇಷ್ಟವಾದ್ದರಿಂದಲೇ ಪರೀಕ್ಷೆ ತೆಗೆದುಕೊಂಡೆ. ಬೆಂಗಳೂರು ರಾಷ್ಟ್ರೀಯ ಶಾಲೆಯಲ್ಲಿ ಓದುವಾಗ ಯುಪಿಎಸ್​ಸಿ ಬಗ್ಗೆ ಒಲವು ಹೆಚ್ಚಿತು. | ಜಯದೇವ್ 5ನೇ ರ್ಯಾಂಕ್

ಸಮುತ್ಕರ್ಷದ ಅಭ್ಯರ್ಥಿಗೆ 71ನೇ ರ್ಯಾಂಕ್

ರಾಜ್ಯದಿಂದ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಮೂರನೇ ಸ್ಥಾನದಲ್ಲಿರುವ ಬಿ. ಯಶಸ್ವಿನಿ(71ನೇ ರ್ಯಾಂಕ್) ಸೇರಿ ಸಮುತ್ಕರ್ಷ ಐಎಎಸ್ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಮಾಡಿದ 22 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಮುತ್ಕರ್ಷದಿಂದ ಕನಿಷ್ಠ ದರದಲ್ಲಿ ತರಬೇತಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಸಂದರ್ಶನ ತರಬೇತಿ ಹಾಗೂ ಅಧ್ಯಯನ ಕೇಂದ್ರ ನಡೆಯುತ್ತಿದೆ.

ಅಂಧತ್ವಕ್ಕೆ ಸವಾಲು

ಬೆಂಗಳೂರಿನ ಅಂಧ ಅಭ್ಯರ್ಥಿ ಮೇಘನಾ 465ನೇ ರ್ಯಾಂಕ್ ಪಡೆದಿದ್ದಾರೆ. 10ನೇ ತರಗತಿ ಬಳಿಕ ದೃಷ್ಟಿದೋಷದಿಂದ ಬಳಲುತ್ತಿರುವ ಮೇಘನಾ ಛಲ ಬಿಡದೆ ವ್ಯಾಸಂಗ ಮುಂದುವರಿಸಿ ಕಂಪ್ಯೂಟರ್ ಜಾವಾ ಕೋರ್ಸ್ ಮಾಡಿದ್ದರು. ಸುರಾನಾ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ.

ರಾಜ್ಯದಿಂದ ಆಯ್ಕೆಯಾದವರು

ಎಚ್.ಎನ್.ಮಿಥುನ್​ -359, ವೆಂಕಟರಾಮನ್ ಕಾವಡಿಕೆರೆ -363, ಎಚ್.ಆರ್.ಕೌಶಿಕ್​ -380, ಬಿ.ಆರ್.ವರುಣ್ -395, ಆರ್.ಮಂಜುನಾಥ್-406, ಬಿ.ಸಿ.ಹರೀಶ್​ -409, ಜಗದೀಶ್ ಅಡಹಳ್ಳಿ -440, ಎಚ್.ಬಿ.ವಿವೇಕ್​ -444, ಆನಂದ್ ಕಲ್ಲಾದಗಿ -446, ಮೊಹಮ್ಮದ್ ನದಿಮುದ್ದೀನ್​ -461, ಕೆ.ಟಿ.ಮೇಘನಾ -465, ಸೈಯದ್ ಜಾಹಿದ್ ಅಲಿ476, ಎನ್.ವಿವೇಕ್ ರೆಡ್ಡಿ -485, ಎಂ.ಡಿ.ಕಮ್ಮಾರುದ್ಧಿನ್ ಖಾನ್​ -511, ವರುಣ್ ಕೆ.ಗೌಡ -528, ಫ್ರಫುಲ್ ದೇಸಾಯಿ- 532(ಬೆಳಗಾವಿ), ಎನ್.ರಾಘವೇಂದ್ರ -536, ಕೆ.ಆರ್.ಭರತ್​ -545, ಪೃಥ್ವಿ ಎಸ್.ಹುಲ್ಲತ್ತಿ 582, ಆರ್.ಸುಹಾಸ್​- 583, ಅಭಿಲಾಶ್ ಶಶಿಕಾಂತ್ ಬಡ್ಡೂರ್​- 591, ಎಚ್.ಜಿ.ದರ್ಶನ್ ಕುಮಾರ್ -594, ಸವಿತಾ ಗೊತ್ಯಾಲ್- 626, ಪ್ರಜ್ವಲ್​- 636, ರಮೇಶ್​ -646, ಗಜಾನನ ಬಾಲೆ- 663, ಪ್ರಿಯಾಂಕ ಕಾಂಬ್ಳಿ 670, ಎ.ಎಂ.ಚೈತ್ರಾ -713, ಜಿ.ಎಸ್.ಚಂದನ್​-777, ಎ.ಪಿ.ಮಂಜೇಶ್ ಕುಮಾರ್-800ನೇ ರ್ಯಾಂಕ್ ಪಡೆದಿದ್ದಾರೆ.

ಐಎಎಸ್ ಅಧಿಕಾರಿಯಾಗ ಬೇಕೆಂಬ ಕನಸು ನನಸಾಗಿದೆ. ಮೊದಲಿಗನಾಗಿರುವುದು ಅಚ್ಚರಿ ತಂದಿದೆ. ಶೋಷಿತರಿಗಾಗಿ ಕೆಲಸ ಮಾಡುವುದು ನನ್ನ ಹಂಬಲ. | ಪ್ರದೀಪ್ ಸಿಂಗ್ ಮೊದಲ ರ್ಯಾಂಕ್ ಪಡೆದ ಅಭ್ಯರ್ಥಿ

ದೇಶದ ಟಾಪರ್ಸ್

1.ಪ್ರದೀಪ್ ಸಿಂಗ್- ಮೊದಲ ರ್ಯಾಂಕ್-ಹರಿಯಾಣ

2.ಜತಿನ್ ಕಿಶೋರ್-2ನೇ ರ್ಯಾಂಕ್-ದೆಹಲಿ

3.ಪ್ರತಿಭಾ ವರ್ವ-3ನೇ ರ್ಯಾಂಕ್ ಉತ್ತರ ಪ್ರದೇಶ

ಐಆರ್​ಎಸ್ ಕಾಯಕ

ಪ್ರದೀಪ್ ಮತ್ತು ಪ್ರತಿಭಾ ಭಾರತೀಯ ಕಂದಾಯ ಸೇವೆ (ಐಆರ್​ಎಸ್) ಮತ್ತು ಜಿತಿನ್ ಭಾರತೀಯ ಆರ್ಥಿಕ ಸೇವೆ (ಐಇಎಸ್) ಅಧಿಕಾರಿಗಳಾಗಿ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net