ಮಾವಿನ ತೋಟದಲ್ಲಿ ಬಾವಲಿಗಳ ಹೆಣದ ರಾಶಿ: ಇನ್ನೇನು ಕಾದಿದೆಯೋ ಆಪತ್ತು!

bats
Published on

ಗೋರ‌ಖ್‌ಪುರ (ಉತ್ತರ ಪ್ರದೇಶ): ಇಡೀ ವಿಶ್ವದಲ್ಲಿ ಈಗ ಕರೊನಾ ವೈರಸ್​ ಭೀತಿ. ಈ ವೈರಸ್​ ವಿಶ್ವವನ್ನೇ ಹರಡಲು ಕಾರಣ ಏನು ಎಂಬ ಗುಟ್ಟು ಮಾತ್ರ ಇನ್ನೂ ಬಹಿರಂಗವಾಗದಿದ್ದರೂ, ವೈರಸ್​ನ ತವರು ಚೀನಾದ ಬಾವಲಿಗಳಿಂದಲೇ ಈ ವೈರಸ್​ ಹರಡಿದೆ ಎಂಬ ವಾದಗಳೂ ಇವೆ.

ಅದೇನೇ ಇರಲಿ. ಕರೊನಾ ವೈರಸ್​ ಅಲ್ಲದಿದ್ದರೂ ಬಾವಲಿಗಳಿಂದ ಹರಡಿದ್ದ ನಿಫಾ ವೈರಸ್​ ಕೂಡ ಭಾರತ ಸೇರಿದಂತೆ ಅನೇಕ ದೇಶಗಳನ್ನು ಕಂಗೆಡಿಸಿದ್ದಂತೂ ನಿಜ. ಇದೀಗ ಉತ್ತರ ಪ್ರದೇಶದ ಗೋರಖ್​ಪುರದ ಮಾವಿನ ತೋಟದಲ್ಲಿ ಬಾವಲಿಗಳ ರಾಶಿ ರಾಶಿ ಹೆಣಗಳು ಕಂಡುಬಂದಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಗೋರ‌ಖ್‌ಪುರ ಜಿಲ್ಲೆಯ ಬೆಲ್ಘಾಟ್ ಪ್ರದೇಶದಲ್ಲಿ ಧ್ರುವ ನಾರಾಯಣ್ ಸಿಂಗ್ ಎನ್ನುವವರ ಮಾವಿನ ತೋಟದಲ್ಲಿ ಬಾವಲಿಗಳು ಸತ್ತುಬಿದ್ದಿರುವುದು ಕಂಡುಬಂದಿದೆ. ಇದರ ಸಂಖ್ಯೆ 300ಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಸದ್ಯ ಇವುಗಳ ಸಾವಿಗೆ ಕಾರಣ ಇನ್ನೂ ದೃಢಪಟ್ಟಿಲ್ಲ. ಮಾವಿನ ತೋಟಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಸಾವಿನ ನಿಖರ ಕಾರಣವನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಇವುಗಳ ಮರಣೋತ್ತರ ಪರೀಕ್ಷೆಯ ಬಳಿಕ ಕಾರಣ ತಿಳಿಯಲು ಸಾಧ್ಯ ಎಂದಿದ್ದಾರೆ.

ಇದು ಯಾವುದೇ ರೋಗದ ಲಕ್ಷಣ ಇರಲಿಕ್ಕಿಲ್ಲ ಎಂದು ಕೆಲವು ಪರಿಸರ ತಜ್ಱರು ಅಭಿಪ್ರಾಯಪಟ್ಟಿದ್ದಾರೆ. ಉಷ್ಣಾಂಶ ಹಾಗೂ ನೀರಿನ ಕೊರತೆಯಿಂದಾಗಿ ಬಾವಲಿ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎನ್ನುವುದು ಅವರ ವಾದ. ಮಾವಿನ ತೋಟಕ್ಕೆ ಬಳಸಿರುವ ಕೀಟನಾಶಕಗಳ ಸೇವನೆಯಿಂದಲೂ ಹೀಗಾಗಿರಲು ಸಾಧ್ಯ ಎಂದು ಅಂಜಾಜಿಸಲಾಗಿದೆ.

ಫಂಗಸ್‌ನಿಂದ ಉಂಟಾಗುವ ವೈಟ್-ನಾಸ್ ಸಿಂಡ್ರೋಮ್ ಎಂಬ ರೋಗದಿಂದಾಗಿ ಬಾವಲಿಗಳ ಸಾಮೂಹಿತ ಸಾವಿಗೆ ಕಾರಣವಾಗಿರಬಹುದು ಎಂದು ಗೋರಖ್‌ಪುರ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಿಎಚ್ ಪಾಠಕ್ ಅಭಿಪ್ರಾಯಪಟ್ಟಿದ್ದಾರೆ. ಇಂತಹ ರೋಗಗಳು ವಿದೇಶಗಳಲ್ಲಿಯೂ ವರದಿಯಾಗಿವೆ. ಇದು ಅಮೆರಿಕದಲ್ಲೂ ಅಪಾಯಕಾರಿಯಾಗಿ ಹರಡಿತ್ತು ಎಂದು ಅವರು ವಿವರಣೆ ನೀಡಿದ್ದಾರೆ.

ಅದೇನೇ ಇದ್ದರೂ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸತ್ಯ ಹೊರಬರಬೇಕಿದೆ. ಆದರೆ ಬಾವಲಿಗಳ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಸುದ್ದಿ ಹರಿದಾಡುತ್ತಿರುವ ಕಾರಣ, ಎಲ್ಲೆಡೆ ಭೀತಿ ಸೃಷ್ಟಿಯಾಗಿದೆ. ಜನರು ತಮ್ಮದೇ ಆದ ರೀತಿಯಲ್ಲಿ ಸಾವಿನ ವಿಶ್ಲೇಷಣೆ ಮಾಡುತ್ತಿರುವುದು ಇನ್ನಷ್ಟು ಆಂತಕಕ್ಕೆ ಕಾರಣವಾಗಿದೆ. ಈ ಪರಿಯಲ್ಲಿ ಒಂದೇ ಬಾರಿ ಬಾವಲಿಗಳು ಮೃತಪಟ್ಟಿರುವುದನ್ನು ಎಲ್ಲಿಯೂ ನೋಡಿಲ್ಲ ಎಂಬ ಆತಂಕ ಜನರದ್ದು.

ಬರೈಲಿಯಲ್ಲಿರುವ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ (ಐವಿಆರ್‌ಐ) ಬಾವಲಿಗಳ ಶವ ಪರೀಕ್ಷೆಯನ್ನು ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net