

ನವದೆಹಲಿ: ದೇಶದಲ್ಲಿ ಕರೊನಾ ಆರ್ಭಟ ಮುಂದುವರಿಯುತ್ತಲೇ ಇದ್ದು, ಪ್ರತಿದಿನ ದಾಖಲೆ ಪ್ರಮಾಣದಲ್ಲಿ ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ನಾಲ್ಕು ದಿನಗಳಿಂದ ನಿತ್ಯ 40 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಇದು 50 ಸಾವಿರದ ಗಡಿ ದಾಟುವ ಸಾಧ್ಯತೆ ಇದೆ. ಆದಾಗ್ಯೂ ದೇಶದಲ್ಲಿ ಸೋಂಕಿತರ ಮರಣ ಪ್ರಮಾಣ ಶೇಕಡ 2.38ಕ್ಕೆ ಕುಸಿದಿದ್ದು, ಗುಣಮುಖರ ಪ್ರಮಾಣ ಶೇಕಡ 63.34ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13.13 ಲಕ್ಷಕ್ಕೇರಿದೆ. ಮೃತರ ಸಂಖ್ಯೆ 30,900ಕ್ಕಿಂತ ಅಧಿಕವಾಗಿದೆ. ಈವರೆಗೆ 8.32 ಲಕ್ಷ ರೋಗಿಗಳು ಗುಣಮುಖರಾಗಿದ್ದು, ಇನ್ನೂ 4.49 ಲಕ್ಷ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಆಂಧ್ರಪ್ರದೇಶದಲ್ಲಿ ಶುಕ್ರವಾರ 8 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಕೇಸ್ಗಳು ಬೆಳಕಿಗೆ ಬರುತ್ತಿದ್ದು, ಅಲ್ಲಿನ ಸೋಂಕಿತರ ಸಂಖ್ಯೆ ಮೂರೂವರೆ ಲಕ್ಷಕ್ಕೂ ಅಧಿಕವಾಗಿದೆ. ತಮಿಳುನಾಡಿನಲ್ಲಿ 1.99 ಲಕ್ಷ, ದೆಹಲಿಯಲ್ಲಿ 1.27 ಲಕ್ಷ, ಕರ್ನಾಟಕದಲ್ಲಿ 85 ಸಾವಿರ, ಆಂಧ್ರಪ್ರದೇಶದಲ್ಲಿ 80 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಮೃತರ ಸಂಖ್ಯೆಯಲ್ಲೂ ಮಹಾರಾಷ್ಟ್ರ ಮುಂದಿದ್ದು, 13 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ತಮಿಳುನಾಡು ಮತ್ತು ದೆಹಲಿಯಲ್ಲಿ ತಲಾ 3 ಸಾವಿರಕ್ಕೂ ಅಧಿಕ, ಗುಜರಾತ್ನಲ್ಲಿ 2,200, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಜಾಗತಿಕವಾಗಿ ಕರೊನಾಗೆ ಬಲಿಯಾದವರ ಸಂಖ್ಯೆ 6.37 ಲಕ್ಷಕ್ಕೇರಿದ್ದು, ಈವರೆಗೆ 1.57 ಕೋಟಿಗೂ ಅಧಿಕ ಪ್ರಕರಣಗಳು ವರದಿಯಾಗಿವೆ. ಸೋಂಕಿಗೆ ಹೆಚ್ಚು ಬಾಧಿತವಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ, ಬ್ರೆಜಿಲ್ ಹಾಗೂ ಭಾರತ ಪ್ರಮುಖ ಮೂರು ಸ್ಥಾನಗಳಲ್ಲಿವೆ.
ಕೊವ್ಯಾಕ್ಸಿನ್ನ ಮೊದಲ ಡೋಸ್
ಸ್ವದೇಶಿ ನಿರ್ವಿುತ ಕರೊನಾ ಲಸಿಕೆ ಕೊವ್ಯಾಕ್ಸಿನ್ನ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿರುವ ಏಮ್್ಸ, 30 ವರ್ಷದ ವ್ಯಕ್ತಿಯೊಬ್ಬರಿಗೆ ಕೊವ್ಯಾಕ್ಸಿನ್ನ ಮೊದಲ ಡೋಸ್ ನೀಡಿರುವುದಾಗಿ ಮಾಹಿತಿ ನೀಡಿದೆ. ಎರಡು ವಾರಗಳ ಕಾಲ ಆ ವ್ಯಕ್ತಿಯ ಮೇಲೆ ನಿಗಾವಹಿಸಲಾಗುತ್ತಿದ್ದು, ಬಳಿಕ ಎರಡನೇ ಡೋಸ್ ನೀಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ದೆಹಲಿ ಸೇರಿ ದೇಶದ ಒಟ್ಟು 12 ಕಡೆಗಳಲ್ಲಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗುತ್ತಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿ ಬಿಡುಗಡೆ
ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತ ವಿಷಯವನ್ನು ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಥೀಮ್ ಆಗಿ ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮಗಳನ್ನು ಹೇಗೆ ಆಯೋಜಿಸಬೇಕು ಎಂಬ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ನೀಡಿದೆ. ಸ್ವಾತಂತ್ರ್ಯ ದಿನಾಚರಣೆ ಮೂಲಕ ಆತ್ಮನಿರ್ಭರ ಭಾರತ ಮಿಷನ್ನ ವಿಷಯವನ್ನು ದೇಶದ ಜನತೆಗೆ ಮುಟ್ಟಿಸಬೇಕು. ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಪಾಲ್ಗೊಳ್ಳುವಂತಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಡಿಜಿಟಲ್ ವೇದಿಕೆಗಳನ್ನು ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ಹೆಚ್ಚಿನ ಜನರನ್ನು ತಲುಪಬಹುದು. ಕರೊನಾ ವಿರುದ್ಧದ ಹೋರಾಟವನ್ನು ಸ್ಮರಿಸುವ ಮತ್ತು ಜನರಲ್ಲಿ ಒಗ್ಗಟ್ಟು ಮತ್ತು ಧೈರ್ಯ ಮೂಡಿಸುವಂತ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಲಾಗಿದೆ.