ಮದುವೆಗೆ ಬಂದ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಿ 100ಕ್ಕೂ ಹೆಚ್ಚು ಸಾವು

nigeria boat
ಸಾಂದರ್ಭಿಕ ಚಿತ್ರ
Published on

ನೈಜೀರಿಯಾ: ಮದುವೆ ಬಂದ ಅತಿಥಿಗಳನ್ನು ಸಾಗಿಸುತ್ತಿದ್ದ ದೋಣಿಯೊಂದು ನದಿಯಲ್ಲಿ ಮಗುಚಿ ಬಿದ್ದು 100ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಭೀಕರ ಘಟನೆ ನೈಜೀರಿಯಾದ ಕ್ವಾರಾ ಪ್ರದೇಶದ ಬಳಿ ನಡೆದಿದೆ.

ದೋಣಿಯು ನದಿ ಮಾರ್ಗವಾಗಿ ನೈಜರ್ ರಾಜ್ಯದಲ್ಲಿನ ಮದುವೆ ಮನೆಯಿಂದ ಕ್ವಾರಾಗೆ ಜನರನ್ನು ವಾಪಸ್ಸು ಕರೆದೊಯ್ಯುತ್ತಿದ್ದ ವೇಳೆ ಮಗುಚಿ ಬಿದ್ದಿದೆ. ದೋಣಿ ಅಪಘಾತದಲ್ಲಿ ಇದುವರೆಗೆ ಸುಮಾರು 100 ಜನರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದೇವೆ. ರಕ್ಷಣಾಕಾರ್ಯ ಪ್ರಗತಿಯಲ್ಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕ್ವಾರಾ ರಾಜ್ಯ ಪೊಲೀಸ್ ವಕ್ತಾರ ಒಕಾಸನ್ಮಿ ಹೇಳಿದ್ದಾರೆ.

ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಬೋಟ್​ಗೆ ಹತ್ತಿಸಿದ್ದು ಹಾಗೂ ಸುರಕ್ಷತಾ ಕಾರ್ಯ ವಿಧಾನ ಕಡೆಗಣಿಸಿದ್ದು ಈ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದ್ದು, ಕಳಪೆ ರಸ್ತೆ ಸಮಸ್ಯೆಯಿಂದಾಗಿ ನೈಜೀರಿಯಾ ಜನರು ನದಿ ಮಾರ್ಗವನ್ನು ಆಶ್ರಯಿಸಿದ್ದಾರೆ. ಸುಲಿಗೆ, ಅಪಹರಣ ಹಾಗೂ ದರೋಡೆಯು ಇಲ್ಲಿನ ಹೆದ್ದಾರಿಗಳಲ್ಲಿ ಪ್ರಮುಖ ಸಮಸ್ಯೆಯಾಗಿದ್ದು, ಸಾರಿಗೆ ಮತ್ತು ವ್ಯಾಪಾರಕ್ಕಾಗಿ ದೋಣಿ ಪ್ರಯಾಣವು ಉತ್ತಮ ಎಂಬ ಭಾವನೆ ನೈಜೀರಿಯಾದಲ್ಲಿ ಸಾಮಾನ್ಯವಾಗಿದೆ.

ಕಳೆದ ತಿಂಗಳು, ವಾಯುವ್ಯ ಸೊಕೊಟೊ ರಾಜ್ಯದಲ್ಲಿ ಉರುವಲು ಸಂಗ್ರಹಿಸಲು ಹೋಗುತ್ತಿದ್ದ​ ದೋಣಿ ಮುಳುಗಿ 15 ಮಕ್ಕಳು ಮೃತಪಟ್ಟು, 25 ಜನ ನಾಪತ್ತೆಯಾಗಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net