ಕಂದಾಯ ಇಲಾಖೆ ನ್ಯೂನತೆಗೆ ಆಕ್ರೋಶ: ಡಿಸಿ ಕಚೇರಿ ಎದುರು ಪ್ರತಿಭಟನೆ

protest
ಪ್ರತಿಭಟನಾಕಾರರನ್ನು ಉದ್ದೇಶಿಸಿ ತೀ.ನ.ಶ್ರೀನಿವಾಸ್ ಮಾತನಾಡಿದರು.
Published on

ಶಿವಮೊಗ್ಗ: ನೀರಾವರಿ ಯೋಜನೆಗಾಗಿ ಸ್ಥಳಾಂತರಗೊಂಡವರಿಗೆ ಉಪವಿಭಾಗಾಧಿಕಾರಿ ಕಚೇರಿಯಿಂದ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ತುಂಗಾ-ಭದ್ರಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು.

ಕಂದಾಯ ಇಲಾಖೆ ನ್ಯೂನತೆಯ ವಿರುದ್ಧ ಸಿಡಿದೆದ್ದ ಸಂತ್ರಸ್ತರು ಒಂದು ಹಂತದಲ್ಲಿ ರಕ್ಷಣಾ ವ್ಯವಸ್ಥೆಯನ್ನು ಭಗ್ನಗೊಳಿಸಿ ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಬ್ಯಾರಿಕೇಡ್‌ಗಳನ್ನು ಹಾರಿ ಪ್ರವೇಶ ದ್ವಾರ ತಲುಪಿದರು. ಪ್ರತಿಭಟನಾಕರರನ್ನು ಹಗುರವಾಗಿ ಪರಿಗಣಿಸಿದ್ದ ಭದ್ರತಾ ಸಿಬ್ಬಂದಿ ಸನ್ನಿವೇಶ ನಿಯಂತ್ರಿಸಲು ಪರದಾಡಬೇಕಾಯಿತು.

ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರವನ್ನು ಬಂದ್ ಮಾಡಿದ ಸಿಬ್ಬಂದಿ ಪ್ರತಿಭಟನಾಕಾರರು ಒಳನುಗ್ಗದಂತೆ ತಡೆದರು. ಇಷ್ಟಕ್ಕೂ ಬಗ್ಗದ ಸಂತ್ರಸ್ತರು ಡಿಸಿ ಕಚೇರಿ ಎದುರೇ ಮಧ್ಯಾಹ್ನದ ಊಟ ಸಿದ್ಧಪಡಿಸಿ, ಅಲ್ಲಿಯೇ ಊಟ ಮಾಡಿದರು. ಮೂರ‌್ನಾಲ್ಕು ತಾಸು ಡಿಸಿ ಕಚೇರಿ ಅಕ್ಷರಶಃ ರಣಾಂಗಣದಂತೆ ಕಂಡು ಬಂದಿತು.

ಜಿಲ್ಲಾಧಿಕಾರಿಯೇ ಬಂದು ನಮ್ಮ ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಾಕರರು ಪಟ್ಟು ಹಿಡಿದರು. ಡಿಸಿ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರಿಂದ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಹವಾಲು ಸ್ವೀಕರಿಸಲು ಮುಂದೆ ಬಂದರು. ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.

ಅರಣ್ಯ ಇಲಾಖೆ ಅಧಿಕಾರಿ ಮತ್ತು ಉಪವಿಭಾಗಾಧಿಕಾರಿ ಸ್ಥಳಕ್ಕೆ ಬಂದು ಸಮಜಾಯಿಷಿ ನೀಡಬೇಕು. ಅಲ್ಲಿಯವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಉಪವಿಭಾಗಾಧಿಕಾರಿ ಸತ್ಯನಾರಾಯಣ ಸ್ಥಳಕ್ಕೆ ಬಂದು ಸಂತ್ರಸ್ತರನ್ನು ಸಮಧಾನಪಡಿಸಿ ವಸ್ತುಸ್ಥಿತಿ ವಿವರಿಸಿದರು.

ಆರಂಭದಲ್ಲಿ ಯಾವುದಕ್ಕೂ ಬಗ್ಗದ ಪ್ರತಿಭಟನಾಕಾರರು ಅಂತಿಮವಾಗಿ ತಮ್ಮ ಪಟ್ಟು ಸಡಿಲಿಸಿ ಜಿಲ್ಲಾಡಳಿತಕ್ಕೆ ಖಡಕ್ ಎಚ್ಚರಿಕೆ ನೀಡಿದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ನೋಟಿಸ್ ಜಾರಿ ಮಾಡಬಾರದು ಎಂದು ಸಂದೇಶ ರವಾನಿಸಿದರು.

ತೀ.ನ.ಶ್ರೀನಿವಾಸ್, ಹರೀಶ್, ಶ್ರೀಕಾಂತ್, ಜಗದೀಶ್, ಜಯವೇಲು, ಮುನಿಸ್ವಾಮಿ, ಮಂಜುನಾಥ್, ಚೆಲುವರಾಯ, ಮಂಜುಳಾ, ಚೆಲುವಮ್ಮ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net