ಪಿರಿಯಾಪಟ್ಟಣದಲ್ಲಿ ಆಕ್ರೋಶ

ಪಿರಿಯಾಪಟ್ಟಣದಲ್ಲಿ ಆಕ್ರೋಶ
Published on

ಪಿರಿಯಾಪಟ್ಟಣ: ರಾಜ್ಯ ಸರ್ಕಾರದ ತೈಲ ಬೆಲೆ ಏರಿಕೆ ಕ್ರಮ ಖಂಡಿಸಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡ ತಾಲೂಕು ಬಿಜೆಪಿ ಘಟಕದ ಪದಾಧಿಕಾರಿಗಳು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಚ್.ಸಿ.ಬಸವರಾಜು ಮಾತನಾಡಿ, ಸರ್ಕಾರವು ಬಿಟ್ಟಿ ಭಾಗ್ಯಗಳನ್ನು ನೀಡುವ ಸಲುವಾಗಿ ನೋಂದಣಿ ಶುಲ್ಕ, ಮದ್ಯ ದರ, ಭೂ ದಾಖಲಾತಿಗಳನ್ನು ಪಡೆಯುವ ದರ ಸೇರಿದಂತೆ ವಿವಿಧ ದರಗಳನ್ನು ಹೆಚ್ಚಿಸಿ ಜನರ ಶೋಷಣೆ ಮಾಡುತ್ತಿದ್ದು, ಇದೀಗ ತೈಲ ದರಗಳನ್ನು ಹೆಚ್ಚಿಸುವ ಮೂಲಕ ಜನ ವಿರೋಧಿ ಧೋರಣೆಯನ್ನು ತೋರುತ್ತಿದೆ. ಕೂಡಲೇ ಎಲ್ಲ ದರಗಳನ್ನು ಇಳಿಕೆ ಮಾಡಬೇಕು ಇಲ್ಲದಿದ್ದರೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ ಮಾತನಾಡಿ, ರಾಜ್ಯ ಸರ್ಕಾರವು ತನ್ನ ಉಳಿವಿಗಾಗಿ ಭ್ರಷ್ಟಾಚಾರದ ಹಾದಿಯನ್ನು ಹಿಡಿದಿದ್ದು, ಕೆಲವು ಇಲಾಖೆಗಳಲ್ಲಿನ ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ವಿಪರ್ಯಾಸ. ತೈಲಬೆಲೆ ಏರಿಕೆಯಿಂದಾಗಿ ಅಗತ್ಯ ಪದಾರ್ಥಗಳ ಬೆಲೆ ಹೆಚ್ಚಳವಾಗಿದ್ದು, ಸಾರ್ವಜನಿಕರು ಜೀವನ ನಡೆಸುವುದೇ ಕಷ್ಟವಾಗಲಿದೆ. ಗ್ಯಾರಂಟಿ ಭಾಗ್ಯಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.

ಮುಖಂಡ ಆರ್.ಟಿ.ಸತೀಶ್ ಮಾತನಾಡಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಮೂರು ವರ್ಷಗಳಿಂದ ಸಹಾಯಧನ ದೊರಕಿಲ್ಲ ಎಂದು ದೂರಿದರು. ಸರ್ಕಾರವು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೆಲೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಲಾಯಿತು. ಪ್ರಮುಖರಾದ ಎಂ.ಎಂ.ರಾಜೇಗೌಡ, ಬೆಮ್ಮತ್ತಿ ಚಂದ್ರು, ಟಿ.ರಮೇಶ್, ನಿರ್ಮಲಾ, ನೇಮಿಚಂದ್, ಬೆಮ್ಮತ್ತಿ ಕೃಷ್ಣ, ರಾಜೇಗೌಡ, ವೀರಭದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net