

ಸರಗೂರು : ಪ್ರಚಾರದ ಕೊರತೆಯಿಂದ ಬುಧವಾರ ನಡೆದ ಲೋಕಾಯುಕ್ತರಿಂದ ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಕರ್ನಾಟಕ ಲೋಕಾಯುಕ್ತ ಇನ್‌ಸ್ಪೆಕ್ಟರ್ ಅಶೋಕ್‌ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಸಾರ್ವಜನಿಕ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಸಾರ್ವಜನಿಕರು ಮಾತ್ರ ಭಾಗಿಯಾಗಿದ್ದರು. ಇದರಿಂದಾಗಿ ವಿವಿಧ ಇಲಾಖೆಗಳಿಗೆ ಕೇವಲ 29 ಅರ್ಜಿಗಳು ಸಲ್ಲಿಕೆಯಾದವು. ಇದರಿಂದ ಬೇಸರಗೊಂಡ ಸಾರ್ವಜನಿಕರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೂರು ಸ್ವೀಕಾರ ಕಾರ್ಯಕ್ರಮದ ಆರಂಭದಲ್ಲಿ ಕೇವಲ 8 ರಿಂದ 10 ಜನ ಬಂದಿದ್ದರು. ಇನ್ನುಳಿದಂತೆ ಅಧಿಕಾರಿಗಳೇ ಹೆಚ್ಚು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಹಾಕಲಾದ ಕುರ್ಚಿಗಳು ಖಾಲಿಯಾಗಿದ್ದವು. ಬೆಳಗ್ಗೆ 11ಕ್ಕೆ ಆರಂಭವಾದ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಗಲಾಟೆ, ಗದ್ದಲದ ನಡುವೆಯೇ ಮುಕ್ತಾಯವಾಯಿತು.
ಕಂದಾಯ ಇಲಾಖೆ ಆಡಳಿತಾಧಿಕಾರಿಗಳು ಕಾಡಂಚಿನ ಗ್ರಾಮಗಳ ಜನರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಸಾರ್ವಜನಿಕರು ಕುಂದು ಕೊರತೆಗಳ ಸಭೆ ಮಾಡಬೇಕಾದ ತಾಲೂಕು ಆಡಳಿತ ಅಧಿಕಾರಿಗಳ ಸಭೆ ನಡೆಸುತ್ತಿದೆ ಎಂದು ಆರೋಪಿಸಿದ ಸಂಘ, ಸಂಸ್ಥೆಗಳ ಮುಖಂಡರು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ತಹಸೀಲ್ದಾರ್ ರುಖಿಯಾ ಬೇಗಂ ಕಾರ್ಯಕ್ರಮ ಕುರಿತು ಪ್ರಚಾರ ಮಾಡುವಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು ಎಂದು ಸಮಜಾಯಿಷಿ ನೀಡಿದರು.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್ ಮಾತನಾಡಿ, ಅಧಿಕಾರಿಗಳು ಸಾರ್ವಜನಿಕರ ಕೆಲಸಗಳಿಗೆ ಯಾವುದೇ ರೀತಿಯ ಬೇಡಿಕೆಗಳನ್ನು ಇಡಬಾರದು. ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡುವುದು, ಲಂಚಕ್ಕೆ ಬೇಡಿಕೆ ಇಡುವುದು ಅಪರಾಧ. ಸರ್ಕಾರಿ ಇಲಾಖೆಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಮನುಗನಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಂಕೆ ರಮೇಶ್ ಮಾತನಾಡಿ, ಜಮೀನಿನ ಮಾಲೀಕ ಸ್ವಾಧೀನದಲ್ಲಿ ಇದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಬದುಕಿರುವ ವ್ಯಕ್ತಿಗೆ ಮರಣ ಹೊಂದಿದ್ದಾನೆ ಎಂದು ಪತ್ರ ನೀಡಿ ಬೇರೆಯವರಿಗೆ ನಾಲ್ಕು ಎಕರೆ ಜಮೀನನ್ನು ಖಾತೆ ಮಾಡಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್ ಅಶೋಕ್‌ಕುಮಾರ್, ತಹಸೀಲ್ದಾರ್ ಮತ್ತು ಆರ್‌ಐ ಹಾಗೂ ವಿಎ ಅಧಿಕಾರಿಗಳು ಸೂಕ್ತ ಕ್ರಮಕ್ಕಾಗಿ ಮೇಲಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಸರಗೂರು ಪಟ್ಟಣದ ಸಣ್ಣ ಸ್ವಾಮಿ, ಕೂಡಗಿ ಗೋವಿಂದರಾಜು, ಯಶವಂತಪುರ ಶಿವಲಿಂಗಯ್ಯ, ಹೂವಿನಕೊಳ ಮಹೇಶ್, ಇಟ್ನ ರಾಜಣ್ಣ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಸೇರಿದಂತೆ ಇನ್ನಿತರರು ಮನೆ ಮಂಜೂರು, ನಿವೇಶನ ಹಂಚಿಕೆ ವಿವಾದ, ಸಾಗುವಳಿ ಪತ್ರ ವಿತರಣೆ, ಜಮೀನು ಅಳತೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಿದರು.
ಕಂದಾಯ ಇಲಾಖೆ 16, ಸರ್ವೇ ಇಲಾಖೆ 5, ಪಟ್ಟಣ ಪಂಚಾಯಿತಿಗೆ 2, ಅರಣ್ಯ ಇಲಾಖೆ 1, ತಾಲೂಕು ಪಂಚಾಯಿತಿ 4, ಗ್ರಾಪಂಗೆ ಸಂಬಂಧಪಟ್ಟಂತೆ 1 ಅರ್ಜಿ ಸಲ್ಲಿಕೆಯಾದವು.
ತಹಸೀಲ್ದಾರ್ ರುಕೀಯಾ ಬೇಗಂ, ಲೋಕಾಯುಕ್ತ ಇನ್‌ಸ್ಪೆಕ್ಟರ್ ರೂಪಶ್ರೀ, ಸಿಬ್ಬಂದಿ ವೀಣಾ, ಗೋಪಿ, ಮೋಹನ್ ಗೌಡ, ತ್ರಿವೇಣಿ, ಲೋಕೇಶ್ ರಾಜ್ ಅರಸ್, ನೇತ್ರಾವತಿ, ಪರಶುರಾಮ್ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.