

ಬೆಂಗಳೂರು: ಅಪಾರ ಅಭಿಮಾನಿಗಳನ್ನು ಅಗಲಿರುವ ಅಪ್ಪು ಸ್ಮರಣಾರ್ಥ ಮತ್ತೊಂದು ಕಾರ್ಯವನ್ನು ಸರ್ಕಾರ ಮಾಡಿದೆ. ರಾಜಧಾನಿಯ ಪ್ರಮುಖ ರಸ್ತೆಯೊಂದಕ್ಕೆ ‘ಕರ್ನಾಟಕ ರತ್ನ ಪುನೀತ್ ರಾಜಕುಮಾರ್’ ಹೆಸರನ್ನಿಡಲು ಸರ್ಕಾರ ನಿರ್ಧರಿಸಿದ್ದು, ನಾಳೆಯೇ ನಾಮಕರಣ ನಡೆಯಲಿದೆ.
ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಹಾಗೂ ನಾಯಂಡಹಳ್ಳಿ ಜಂಕ್ಷನ್ ನಡುವಿನ ಹೊರವರ್ತುಲ ರಸ್ತೆಗೆ ‘ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್’ ರಸ್ತೆ ಎಂದು ನಾಳೆ ನಾಮಕರಣ ಮಾಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಫೆ.7ರ ಸಂಜೆ 6ರ ಸುಮಾರಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ರಸ್ತೆಯ ನಾಮಫಲಕ ಉದ್ಘಾಟಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸೆಂಚುರಿ ಸ್ಟಾರ್ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ನಲ್ಲಿ ನಡೆಯಲಿದ್ದು, ಅದರ ಲಾಂಛನದ ಅನಾವರಣ ಕೂಡ ಈ ರಸ್ತೆ ನಾಮಕರಣ ಸಂದರ್ಭದಲ್ಲೇ ನಡೆಯಲಿದೆ ಎಂದು ಅಶೋಕ ತಿಳಿಸಿದರು. ರಾಜ್ಯ ಸರ್ಕಾರ ಈ ಚಿತ್ರೋತ್ಸವಕ್ಕೆ ಈಗಾಗಲೇ 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ನಟ ಚಿರಂಜೀವಿ, ನಟಿ ರೇಖಾ ಮುಂತಾದವರಿಂದ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ ಹೆಚ್ಚಿನ ಅನುದಾನಕ್ಕಾಗಿ ಸಿಎಂ ಅವರನ್ನು ಕೋರಲಾಗುವುದು ಎಂದೂ ಅವರು ತಿಳಿಸಿದರು.