ಹೊರ ರಾಜ್ಯದ ಡ್ರಗ್ಸ್ ಪೆಡ್ಲರ್ ಸೆರೆ

arrested
Published on

ಬೆಂಗಳೂರು: ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಹೊರ ರಾಜ್ಯದ ಡ್ರಗ್ಸ್ ಪೆಡ್ಲರ್‌ನನ್ನು ಸಂಪಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಜಯರಾಮ್ ದೇವಾಸಿ(೩೭) ಬಂಧಿತ. ಆರೋಪಿಯಿಂದ ೨.೮೦ ಲಕ್ಷ ರೂ. ಮೌಲ್ಯದ ೧ ಕೆ.ಜಿ. ೮೫೦ ಗ್ರಾಂ ತೂಕದ ಅಫೀಮು, ತೂಕದ ಯಂತ್ರ ಹಾಗೂ ಚೀಲವನ್ನು ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಮಿಷನ್ ರಸ್ತೆಯ ಶ್ರೀನಿವಾಸ ಕಾನಿ ಕಡೆಯಿಂದ ಸಿಕೆಸಿ ಗಾರ್ಡನ್ ಕಡೆಗೆ ಹೋಗುವ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಾದಕವಸ್ತು ಅಫೀಮನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸಾಕ್ಷಿ ಸಮೇತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಜಯರಾಮ್ ನಗರದ ಯಲಹಂಕದಲ್ಲಿ ನೆಲೆಸಿದ್ದ. ಕಳೆದ ಆರು ತಿಂಗಳಿಂದ ರಾಜಸ್ಥಾನ ಜೋಧಪುರ ಜಿಲ್ಲೆಯಲ್ಲಿ ಪರಿಚಿತ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಅಫೀಮು ಖರೀದಿಸಿ ಬೆಂಗಳೂರಿಗೆ ತಂದು ೨೫, ೫೦, ೧೦೦ ಗ್ರಾಂನಂತೆ ಪೊಟ್ಟಣ ಮಾಡಿ ಗ್ರಾಹಕರನ್ನು ಹುಡುಕಿ ದುಬಾರಿ ದರಕ್ಕೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net