ಶಿಕ್ಷಕರಲ್ಲಿ ದೇವರು ಕಾಣುವ ಸಂಸ್ಕೃತಿ ನಮ್ಮದು

15sor1
ಸೊರಬದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಬಲ್ಕಿಷ್ ಬಾನು, ಜಯಶೀಲ ಗೌಡ, ಮಂಜುಳಾ ಹೆಗಡಾಳ್ ಇತರರಿದ್ದರು.
Published on

ಸೊರಬ: ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಲ್ಲ ಶಿಕ್ಷಕರಲ್ಲಿ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ರಂಗ ಮಂದಿರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಕ್ಷರ ಕಲಿಸುವ ಗುರುವಿಗೆ ಭಾರತೀಯ ಪರಂಪರೆಯಲ್ಲಿ ವಿಶೇಷ ಸ್ಥಾನಮಾನವಿದೆ. ಶಿಕ್ಷಕರ ಅನುಪಸ್ಥಿತಿಯ ಸಮಾಜವನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಅಪಾಯದ ಸ್ಥಿತಿ ತಲುಪಲು ಬಿಡದಂತೆ ಎಚ್ಚರ ವಹಿಸಬೇಕಿದ್ದು, 660 ಕಿ.ಮೀ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜನರು ನೆಮ್ಮದಿಯಿಂದ ಬದುಕಬೇಕಾದರೆ ಸಂವಿಧಾನ ಉಳಿಸುವುದು ಮುಖ್ಯ. ದೇಶದಲ್ಲಿ ರಾಜಕೀಯ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆ ಸರಿಪಡಿಸುವ ಜತೆಗೆ ಮುಂದಿನ ಪೀಳಿಗೆಗೆ ಸಂವಿಧಾನದ ಮಹತ್ವ ತಿಳಿಸಲು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಬೋಧಿಸಲಾಗುತ್ತಿದೆ ಎಂದರು.

ವಿಪಕ್ಷಗಳು ಗ್ಯಾರಂಟಿ ಯೋಜನೆ ನಿಲ್ಲಿಸಲಾಗುತ್ತದೆ ಎಂದು ಅಪಪ್ರಚಾರ ಮಾಡಿದ್ದರು. ಗ್ಯಾರಂಟಿ ಯೋಜನೆ ನಿಲ್ಲಿಸಲಿಲ್ಲ. ಜತೆಗೆ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಅನುಷ್ಠಾನಗೊಳಿಸಲಾಗಿದೆ. 2016ರಿಂದ 2020ರವರೆಗೆ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಆದೇಶಿಸಲಾಗಿದೆ.ಮಧು ಬಂಗಾರಪ್ಪಶಿಕ್ಷಣ ಸಚಿವ

ಅಜೀಂ ಪ್ರೇಮ್‌ಜೀ ಫೌಂಡೇಷನ್ ಸಹಯೋಗದಲ್ಲಿ 1.591 ಕೋಟಿ ರೂ. ವೆಚ್ಚದಲ್ಲಿ ಮೂರು ವರ್ಷ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಸೆ.25ರಿಂದ ಯಾದಗಿರಿಯಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕರು, ನಿವೃತ ಶಿಕ್ಷರಾದ ಪದ್ಮಾವತಿ, ಮೋಹನ್ ದಾಸ್ ಸೇರಿ ಅನೇಕರನ್ನು ಸನ್ಮಾನಿಸಲಾಯಿತು.

ಎಂಎಲ್‌ಸಿ ಬಲ್ಕಿಷ್ ಬಾನು, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಜಯಶೀಲ ಗೌಡ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಬಿಇಒ ಪುಷ್ಪಾ, ನಿವೃತ್ತ ಬಿಇಒ ಸತ್ಯನಾರಾಯಣ, ಕೆ.ಆರ್.ಬಿಂಬಾ, ಮಂಜುನಾಥ್, ಡಾ. ಪ್ರದೀಪಕುಮಾರ್ ಕೆ.ವಿ.ಗೌಡ, ಕೆ.ಪಿ.ರುದ್ರಗೌಡ, ಎಂ.ಡಿ.ಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net