ಭಾವಗಳ ಪ್ರತಿಬಿಂಬ ನಮ್ಮ ರಂಗಭೂಮಿ

gudi
ಶಿಕಾರಿಪುರದಲ್ಲಿ ರಂಗ ಪ್ರದರ್ಶನ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಎಸ್.ಎಚ್.ಮಂಜುನಾಥ್ ಉದ್ಘಾಟಿಸಿದರು. ಪ್ರಸನ್ನ ಡಿ.ಸಾಗರ್, ಕೆ.ಎಸ್.ಹುಚ್ರಾಯಪ್ಪ, ಬಿ.ಎಲ್.ರಾಜು, ಇಕ್ಬಾಲ್, ಅಕ್ಷತಾ ಪಾಂಡವಪುರ ಇತರರಿದ್ದರು.
Published on

ಶಿಕಾರಿಪುರ: ಸಿನಿಮಾ, ಟಿವಿ, ಮೊಬೈಲ್ ಸೇರಿ ಇತರ ಸಂಗತಿಗಳ ಪರಿಣಾಮ ನಮ್ಮ ರಂಗಭೂಮಿ ದಿನೇದಿನೆ ಸೊರಗುತ್ತಿದೆ. ರಂಗಭೂಮಿ ನಮ್ಮ ಮಣ್ಣಿನ ಸೊಗಡು, ಭಾವಗಳ ಪ್ರತಿಬಿಂಬ. ಕಲೆ, ಸಂಸ್ಕಾರ, ಸಂಸ್ಕೃತಿ ಉಳಿಯಬೇಕಾದರೆ ರಂಗ ಚಟುವಟಿಕೆಗಳು ನಿರಂತರ ನಡೆಯಬೇಕು ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ ಹೇಳಿದರು.

ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರ, ಸ್ನೇಹ ರಂಗ, ಬಾಪೂಜಿ ವಿದ್ಯಾಸಂಸ್ಥೆ, ಸುವ್ವಿ ಪಬ್ಲಿಕೇಷನ್, ಜನಸ್ಪಂದನ ಟ್ರಸ್ಟ್‌ನಿಂದ ಆಪ್ತರಂಗ ಪ್ರಯೋಗ ಶೀರ್ಷಿಕೆಯ ಲೀಕ್‌ಔಟ್ ನಾಟಕದ ರಂಗ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಗುಡಿ ಸಾಂಸ್ಕೃತಿಕ ಕೇಂದ್ರ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಅವರ ಸೇವೆ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಸ್ನೇಹ ರಂಗದ ಅಧ್ಯಕ್ಷ ಎಸ್.ಎಚ್.ಮಂಜುನಾಥ್ ಮಾತನಾಡಿ, ಬದಲಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಟಿವಿ, ಮೊಬೈಲ್ ಹಾವಳಿಯಿಂದ ಒಂಟಿತನ ಜನರನ್ನು ಕಾಡುತ್ತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಹಿರಿಯರು ಜನಪದ ಕಲಾ ಪ್ರಕಾರಗಳೊಂದಿಗೆ ನಾಟಕಗಳನ್ನು ರೂಢಿಸಿಕೊಂಡು ಬಂದಿದ್ದರು. ಆದರೆ ಅವು ಮರೆಯಾಗುತ್ತಿವೆ ಎಂದರು.
ಗುಡಿ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಅವರ ಅವಧಿಯಲ್ಲಿ ರಂಗಾಯಣ ಉನ್ನತ ಮಟ್ಟಕ್ಕೆ ಬೆಳೆದು ಯಶಸ್ಸನ್ನು ಕಾಣಬೇಕು. ನಾಟಕ ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ಗಮನಹರಿಸಿ ಅನುದಾನ ನೀಡಬೇಕು ಎಂದು ತಿಳಿಸಿದರು.
ಚಲನಚಿತ್ರ ನಟಿ, ರಂಗ ಕಲಾವಿದೆ ಅಕ್ಷತಾ ಪಾಂಡವಪುರ ನಾಟಕ ಪ್ರದರ್ಶಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಬಿ.ಪಾಪಯ್ಯ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು, ಪ್ರಕಾಶಕ ಸುನಿಲ್‌ಕುಮಾರ್, ವಕೀಲ ಎಂ.ಎಚ್.ಸತ್ಯನಾರಾಯಣ, ಕೆಂಗಟ್ಟೆ ಲಕ್ಷ್ಮಣ, ಡಾ. ಈಶ್ವರ, ಲೋಕೇಶ್ ಮಕರಿ, ಜಿಯಾವುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net