

ಅಕ್ಟೋಬರ್ 27, 2022. ಕಾಶ್ಮೀರದಲ್ಲಿ ಪಾಕಿಸ್ತಾನಿ ದಾಳಿಕೋರರನ್ನು ಸದೆಬಡಿಯಲು ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿದ 75ನೆಯ ವಾರ್ಷಿಕೋತ್ಸವದ ದಿನ. ಅಂದು ಶ್ರೀನಗರದಲ್ಲಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಹೇಳಿದ್ದು ಹೀಗೆ- ‘ಆಗಸ್ಟ್ 5, 2019ರಂದು ನಾವು ಆರಂಭಿಸಿದ ಕಾರ್ಯಯೋಜನೆ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶ ಭಾರತದೊಂದಿಗೆ ವಿಲೀನಗೊಳ್ಳುವುದರೊಂದಿಗೆ ಪೂರ್ಣಗೊಳ್ಳುತ್ತದೆ. ಇನ್ನು ನಮ್ಮ ನಡಿಗೆ ಉತ್ತರದ ಕಡೆಗೆ!’. ಪಾಕಿಸ್ತಾನದ ದುರಾಕ್ರಮಣ ಮತ್ತು ಪ್ರಧಾನಮಂತ್ರಿ ಜವಾಹರ್ಲಾಲ್ ನೆಹರೂ ಅವರ ಬೇಜವಾಬ್ದಾರ ನಡೆಯಿಂದ 1947-48ರಲ್ಲಿ ನಾವು ಕಳೆದುಕೊಂಡ ಸುಮಾರು 96,000 ಚದರ ಕಿಲೋಮೀಟರ್ಗಳಷ್ಟು (ಕರ್ನಾಟಕದ ಅರ್ಧದಷ್ಟು!) ವಿಶಾಲ ಪ್ರದೇಶವನ್ನು ಮರಳಿ ನಮ್ಮದಾಗಿಸಿಕೊಳ್ಳುವ ಭಾರತೀಯರ ಕನಸನ್ನು ರಾಜಕೀಯ ನಾಯಕತ್ವ ಹೀಗೆ ಧ್ವನಿಸಿದ್ದಕ್ಕೆ ಸೇನಾ ನಾಯಕತ್ವವೂ ಧ್ವನಿ ಸೇರಿಸಿತು. ಚಿನಾರ್ ಕೋರ್ ಕಮಾಂಡರ್ ಲೆ.ಜ. ಅಮರ್ದೀಪ್ ಸಿಂಗ್ ಓಔಜ್ಲಾ ‘ಪಾಕ್ ಆಕ್ರಮಿತ ಕಾಶ್ಮೀರವನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಲು ತಯಾರಾಗಿದ್ದೇವೆ. ಅದಕ್ಕಾಗಿ ಸರ್ಕಾರದ ಆಜ್ಞೆಗಾಗಿ ಕಾಯುತ್ತಿದ್ದೇವೆ’ ಎಂದು ಘೊಷಿಸಿದರು.
ಭಾರತದಲ್ಲಿ ಪ್ರಕಟವಾಗುವ ಭೂಪಟಗಳಲ್ಲಿ ದೇಶದ ಶಿರೋಭಾಗದಂತಿರುವ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯ ಅಥವಾ ಈಗಿನ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ಗಳು ವಾಸ್ತವವಾಗಿ ಇಡಿಯಾಗಿ ಭಾರತದ ವಶದಲ್ಲಿಲ್ಲ. ಸುಮಾರು 96,000 ಚ.ಕಿ.ಮೀ ಪ್ರದೇಶ ಪಾಕಿಸ್ತಾನದ ಹಿಡಿತದಲ್ಲಿದೆ ಮತ್ತು ಸುಮಾರು 38,000 ಚ.ಕಿ.ಮೀ. ವಿಸ್ತೀರ್ಣದ ಅಕ್ಸಾಯ್ ಚಿನ್ ಚೀನಾದ ವಶದಲ್ಲಿದೆ. ಜತೆಗೆ ಪಾಕಿಸ್ತಾನ ಒಪ್ಪಿಸಿದ 5,200 ಚ.ಕಿ.ಮೀ ವಿಸ್ತೀರ್ಣದ ಶಕ್ಸ್ಗಮ್ ಕಣಿವೆ ಸಹ ಚೀನಾದ ವಶದಲ್ಲೇ ಇದೆ. ನಿಜವಾಗಿ ಇಂದು ನಮ್ಮ ಕೈಯಲ್ಲಿರುವುದು 42,241 ಚ.ಕಿ.ಮೀ ವಿಸ್ತೀರ್ಣದ ಜಮ್ಮು ಮತ್ತು ಕಾಶ್ಮೀರ ಮತ್ತು 59,146 ಚ.ಕಿ.ಮೀ. ವಿಸ್ತೀರ್ಣದ ಲಡಾಖ್ ಕೇಂದ್ರಾಡಳಿತ ಪ್ರದೇಶ ಮಾತ್ರ. 1947-48ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮತ್ತು 1962ರ ಯುದ್ಧದ ಪರಿಣಾಮವಾಗಿ ಚೀನಾಕ್ಕೆ ನಾವು ಕಳೆದುಕೊಂಡ ಒಟ್ಟಾರೆ ಸುಮಾರು 1,39,000 ಚ.ಕಿ.ಮೀ ಪ್ರದೇಶವನ್ನು ಮರಳಿ ನಮ್ಮದಾಗಿಸಿಕೊಳ್ಳುವುದು ನಾವು ಭಾರತೀಯರ ಮರೆಯಲಾಗದ ಕನಸಾಗಿದೆ. ಚೀನಾದ ವಶದಲ್ಲಿರುವ ಪ್ರದೇಶವನ್ನು ಮತ್ತೆ ಪಡೆದುಕೊಳ್ಳುವುದು ಹಲವು ಸಂಕೀರ್ಣ ಕಾರಣಗಳಿಂದಾಗಿ ಸದ್ಯಕ್ಕೆ ನಮಗೆ ಸಾಧ್ಯವಾಗುತ್ತಿಲ್ಲ. ಆದರೆ ಪಾಕಿಸ್ತಾನದ ವಶದಲ್ಲಿರುವ ಪ್ರದೇಶಗಳನ್ನು ಮರಳಿ ನಮ್ಮ ಧ್ವಜದಡಿ ತರುವ ಕಾಲ ಪಕ್ವವಾಗಿರುವಂತೆ ಕಾಣುತ್ತಿದೆ.
ವಾಸ್ತವವಾಗಿ ಪಾಕಿಸ್ತಾನದ ವಶದಲ್ಲಿರುವ ಪ್ರದೇಶದ ಮೇಲೆ ಕಾನೂನಾತ್ಮಕವಾಗಿ ಆ ದೇಶಕ್ಕೆ ಯಾವ ಹಕ್ಕೂ ಇಲ್ಲ. ನಾವು ಒಟ್ಟಾರೆ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ಅಥವಾ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಓಜೆಕೆ) ಎಂದು ಕರೆಯುವ ಪ್ರದೇಶವನ್ನು ಪಾಕಿಸ್ತಾನ ಎರಡು ಪ್ರತ್ಯೇಕ ರಾಜಕೀಯ ಘಟಕಗಳನ್ನಾಗಿ ರೂಪಿಸಿಕೊಂಡಿದೆ. ನಮ್ಮ ಜಮ್ಮು ಮತ್ತು ಕಾಶ್ಮೀರ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಡುವೆ ಸಿಲುಕಿಕೊಂಡಿರುವ ಒಂದು ಬಾಗಿಸಿದ ಬೆರಳಿನಾಕಾರದ, ಕೇವಲ 13,297 ಚ.ಕಿ.ಮೀ. ವಿಸ್ತಾರದ ಪ್ರದೇಶವನ್ನು ತಾನು ಭಾರತದಿಂದ 1947-48ರ ಯುದ್ಧದಲ್ಲಿ ವಿಮೋಚನೆಗೊಳಿಸಿರುವುದಾಗಿ ಹೇಳಿಕೊಳ್ಳುವ ಪಾಕಿಸ್ತಾನ ಅದಕ್ಕೆ ‘ಆಜಾದ್ ಕಾಶ್ಮೀರ’ ಅಂದರೆ ಸ್ವತಂತ್ರ ಕಾಶ್ಮೀರ ಎಂದು ಹೆಸರಿಟ್ಟು ಅಲ್ಲೊಂದು ಕೃತಕ ಸರ್ಕಾರಿ ವ್ಯವಸ್ಥೆಯನ್ನೂ ಸೃಷ್ಟಿಸಿದೆ. ಆದರೆ ಆ ಪ್ರದೇಶ ಮಹಾರಾಜ ಹರಿಸಿಂಗ್ ಅಕ್ಟೋಬರ್ 26,1947ರಂದು ಅಧಿಕೃತವಾಗಿ ಸಹಿಹಾಕಿದ ವಿಲೀನ ಪತ್ರ (ಐಠಠ್ಟಿ್ಠಛ್ಞಿಠಿ ಟ್ಛ ಅ್ಚಠಠಜಿಟ್ಞ) ಪ್ರಕಾರ ಭಾರತಕ್ಕೆ ಸೇರಿದ್ದು.
ತಥಾಕಥಿತ ಆಜಾದ್ ಕಾಶ್ಮೀರ ಮತ್ತು ನಮ್ಮ ಜಮ್ಮು ಮತ್ತು ಕಾಶ್ಮೀರದ ಉತ್ತರದಲ್ಲಿರುವ, ನಾವು ಪಾಕ್ ಆಕ್ರಮಿತ ಕಾಶ್ಮೀರದ ಭಾಗವೆಂದೇ ಪರಿಗಣಿಸುವ ಗಿಲ್ಗಿಟ್-ಬಾಲ್ಟಿಸ್ತಾನ್ ಅನ್ನು ಪಾಕಿಸ್ತಾನ ಕಾಶ್ಮೀರದ ಭಾಗ ಎಂದು ಹೇಳದೇ ಅದು ತನ್ನ ದೇಶದ್ದೇ ಅಧಿಕೃತ ಭಾಗ ಎಂದು ಹೇಳಿಕೊಳ್ಳುತ್ತದೆ! ಅದರದ್ದೊಂದು ಸಂಚು ಹಾಗೂ ಕೃತ್ರಿಮತೆಯ ಕಥೆ.
ಪಾಮೀರ್ನಾಚೆಗೆ ರಶಿಯನ್ನರ ಚಟುವಟಿಕೆಗಳನ್ನು ಗಮನಿಸಲು ಮಹಾರಾಜರ ಜಮ್ಮು ಮತ್ತು ಕಾಶ್ಮೀರ ಸಂಸ್ಥಾನದ ವಾಯವ್ಯ ಭಾಗದಲ್ಲಿ ಗಿಲ್ಗಿಟ್ ಪಟ್ಟಣ ಮತ್ತದರ ಸುತ್ತಲಿನ ಒಂದು ಪುಟ್ಟ ಪ್ರದೇಶವನ್ನು ಭಾರತದಲ್ಲಿದ್ದ ಬ್ರಿಟಿಷ್ ವಹಾಹತುಶಾಹಿ ಸರ್ಕಾರ ತನ್ನ ಸೇನಾಹಿಡಿತಕ್ಕೆ ತೆಗೆದುಕೊಂಡು ಅಲ್ಲಿ ಗಿಲ್ಗಿಟ್ ಸ್ಕೌಟ್ಸ್ ಎಂಬ ಸೇನಾತುಕಡಿಯನ್ನಿರಿಸಿತ್ತು. ಆದರೆ ರಾಜಕೀಯವಾಗಿ ಆ ಪ್ರದೇಶ ಮಹಾರಾಜರ ಕಾಶ್ಮೀರ ಸಂಸ್ಥಾನದ್ದೇ ಭಾಗವಾಗಿತ್ತು. ಆಗಸ್ಟ್ 15, 1947ರಂದು ಭಾರತೀಯ ಉಪಖಂಡದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತ ಅಂತ್ಯಗೊಂಡ ತಕ್ಷಣ ಗಿಲ್ಗಿಟ್ ಪ್ರದೇಶದ ಮೇಲೆ ಬ್ರಿಟಿಷ್ ಸರ್ಕಾರ ಹೊಂದಿದ್ದ ಸೇನಾಹಿಡಿತವೂ ಅಂತ್ಯಗೊಂಡಿತು. ಆದರೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಅಕ್ಟೋಬರ್ 27, 1947ರಂದು ಯುದ್ಧ ಆರಂಭವಾದಾಗ ಗಿಲ್ಗಿಟ್ ಸ್ಕೌಟ್ಸ್ನ ಮುಖ್ಯಸ್ಥ ವಿಲಿಯಂ ಎ. ಬೌನ್ ಗಿಲ್ಗಿಟ್ನಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿದ. ಹಾಗೆ ಮಾಡಲು ಅವನಿಗೆ ಕಾನೂನಿನ ಪ್ರಕಾರ ಅಧಿಕಾರವಿರಲಿಲ್ಲ. ಆದರೆ ಅದನ್ನವನು ಮಾಡಿದ್ದು ಲಂಡನ್ನಲ್ಲಿದ್ದ ಬ್ರಿಟಿಷ್ ಸಾಮ್ರಾಜ್ಯಶಾಹಿ ಸರ್ಕಾರದ ಆದೇಶದ ಮೇರೆಗೆ.
ಅರಬ್ಬಿ ಸಮುದ್ರಕ್ಕೆ ರಶಿಯನ್ನರು ಸಂಪರ್ಕ ಹೊಂದುವುದನ್ನು ತಡೆಯುವ ಉದ್ದೇಶದಿಂದಲೇ ಬ್ರಿಟಿಷರು 20ನೆಯ ಶತಮಾನದ ಆರಂಭದಲ್ಲಿ ಪಾಕಿಸ್ತಾನದ ಸೃಷ್ಟಿಗೆ ಸಂಚು ರೂಪಿಸಿದರು. ಅಫ್ಘಾನಿಸ್ತಾನ ಮತ್ತು ಅರಬ್ಬಿ ಸಮುದ್ರದ ನಡುವೆ ತಮ್ಮ ಮಾತು ಕೇಳುವ ಪುಟ್ಟ ರಾಷ್ಟವೊಂದು ಅಸ್ತಿತ್ವದಲ್ಲಿದ್ದರೆ ಅಲ್ಲಿ ತಮ್ಮ ಸೇನಾ ಪ್ರಭಾವವನ್ನು ನಿರ್ವಿುಸಿಕೊಂಡು ರಶಿಯನ್ನರು ಇತ್ತ ಕಾಲುಹಾಕದಂತೆ ತಡೆಯಬಹುದು ಎನ್ನುವುದು ಬ್ರಿಟಿಷರ ಲೆಕ್ಕಾಚಾರವಾಗಿತ್ತು. ಆ ಪ್ರಕಾರ ಪಾಕಿಸ್ತಾನವೂ ಸೃಷ್ಟಿಯಾಯಿತು. ಆದರೆ ಕಾಶ್ಮೀರ ಇಡಿಯಾಗಿ ಭಾರತದ ವಶಕ್ಕೆ ಬಿದ್ದರೆ ಅಫ್ಘಾನಿಸ್ತಾನದ ತೆಳು ವಾಖಾನ್ ಕಾರಿಡಾರ್ ಮೂಲಕ ಹಿಂದಿನ ಸೋವಿಯೆತ್ ಯೂನಿಯನ್ ಮತ್ತು ಸ್ವತಂತ್ರ ಭಾರತದ ನಡುವೆ ಸಂಪರ್ಕ ಉಂಟಾಗಬಹುದು, ಆ ಮೂಲಕ ರಶಿಯನ್ನರು ಅರಬ್ಬಿ ಸಮುದ್ರಕ್ಕೂ ಕಾಲಿಡುವಂತಾಗಬಹುದು ಎಂದು ಶಂಕಿಸಿದ ಬ್ರಿಟಿಷರು ಭಾರತ ಮತ್ತು ಸೋವಿಯೆತ್ ಯೂನಿಯನ್ ನಡುವೆ ಹತ್ತಿರದ ಭೂಸಂಪರ್ಕವನ್ನು ತಡೆಯಲು ಸುಲಭ ಮಾರ್ಗ ಗಿಲ್ಗಿಟ್ ಅನ್ನು ಪಾಕಿಸ್ತಾನಕ್ಕೆ ಕೊಟ್ಟುಬಿಡುವುದು ಎಂದು ರ್ತಸಿದರು. ಹೀಗಾಗಿ ಗಿಲ್ಗಿಟ್ನಲ್ಲಿ ನವೆಂಬರ್ 2, 1947ರಂದು ಪಾಕಿಸ್ತಾನಿ ಧ್ವಜ ಹಾರಾಡಿದ್ದು.
ನಂತರ ಮುಂದಿನ ಹದಿನಾಲ್ಕು ತಿಂಗಳುಗಳ ಪ್ರಥಮ ಕಾಶ್ಮೀರ ಯುದ್ಧದಲ್ಲಿ ಪಾಕಿಸ್ತಾನ ಗಿಲ್ಗಿಟ್ನ ಪೂರ್ವಕ್ಕಿದ್ದ ಬಾಲ್ಟಿಸ್ತಾನ್ ಮತ್ತು ಹುಂಝಾ, ದಕ್ಷಿಣಕ್ಕಿದ್ದ ಪಾರ್ವತಿ ಬೆಟ್ಟಸಾಲು, ಸ್ಕಾರದು ಪಟ್ಟಣ, ನೀಲಂ ಕಣಿವೆ ಮತ್ತು ಕಾರ್ಗಿಲ್ ಉನ್ನತ ಪ್ರದೇಶಗಳನ್ನೂ ಆಕ್ರಮಿಸಿಕೊಂಡು ಅದರಲ್ಲವನ್ನೂ ಗಿಲ್ಗಿಟ್ಗೇ ಸೇರಿಸಿ ತನ್ನ ಅಧಿಕೃತ ಪ್ರದೇಶ ಎಂದು ಹೇಳಿಕೊಳ್ಳತೊಡಗಿತು. ಭಾರತೀಯ ಸೇನೆ ಉದ್ದೇಶಿಸಿದ್ದಂತೆ ಕಿಶನ್ ಗಂಗಾ ನದಿಯ ಮೇಲಿನ ಸೇತುವೆ ನಾಶಗೊಳಿಸಲ್ಪಟ್ಟಿದ್ದರೆ ಪಾಕಿಗಳು ಮೇಲೆ ಹೇಳಿದ ಪ್ರದೇಶಗಳಿಗೆ ಪ್ರವೇಶಿಸಲು ಸಾಧ್ಯವೇ ಇರುತ್ತಿರಲಿಲ್ಲ. ಆದರೆ ನಮ್ಮ ಸೇನೆಯ ಯೋಜನೆಗೆ ಅಡ್ಡಗಾಲಿಟ್ಟು ನಿಂತ ಜವಾಹರಲಾಲ್ ನೆಹರೂ ಕಿಶನ್ ಗಂಗಾ ಸೇತುವೆ ಉಳಿಯುವಂತೆ, ಆ ಮೂಲಕ ಪಾಕಿಗಳು ನಿರಾಯಾಸವಾಗಿ ಇತ್ತು ಬರಲು ಸಾಧ್ಯವಾಗುವಂತೆ ಮಾಡಿದರು.
ಹಾಗೆ ಪಾಕಿಸ್ತಾನ ಆಕ್ರಮಿಸಿಕೊಂಡ ಪ್ರದೇಶಗಳಲ್ಲಿ ಕಾರ್ಗಿಲ್ ಉನ್ನತ ಪ್ರದೇಶಗಳನ್ನು ಮಾತ್ರ 1971ರಲ್ಲಿ ನಮ್ಮ ಸೇನೆ ಮರುವಶಪಡಿಸಿಕೊಂಡಿತು. ಉಳಿದೆಲ್ಲಾ ಪ್ರದೇಶಗಳನ್ನು ಪಾಕಿಸ್ತಾನ ಮೊದಲಿಗೆ ‘ನಾರ್ದರ್ನ್ ಟೆರಿಟರೀಸ್’ ಎಂದು ಹೆಸರಿಟ್ಟಿತ್ತು. ಈ ಶತಮಾನದ ಮೊದಲ ದಶಕದಲ್ಲಿ ಆ ಹೆಸರನ್ನು ಗಿಲ್ಗಿಟ್-ಬಾಲ್ಟಿಸ್ತಾನ್ ಎಂದು ಬದಲಾಯಿಸಿತು. ಆದರೆ ಆ ಪ್ರದೇಶ ತನ್ನದೇ ಅಧಿಕೃತ ಪ್ರದೇಶ ಎಂದು ಪಾಕಿಸ್ತಾನಿ ಸರ್ಕಾರ ಹೇಳಿದ್ದನ್ನು ಆ ದೇಶದ ಸವೋಚ್ಚ ನ್ಯಾಯಾಲಯವೇ ತಿರಸ್ಕರಿಸಿ, ಆ ನೆಲ ಕಾಶ್ಮೀರದ್ದೇ ಭಾಗ ಎಂದು ತೀರ್ಪು ನೀಡಿತ್ತು. ಅಂದರೆ ಭಾರತದ ನಿಲುವಿಗೆ ಬಲ ಬಂದಂತಾಯಿತು.
ಇಂದು ನಮ್ಮಲ್ಲಿ ದೇಶಹಿತಕ್ಕೆ ಪ್ರಾಮುಖ್ಯತೆ ನೀಡುವ ಸರ್ಕಾರವಿದೆ ಮತ್ತದು ಕಳೆದುಹೋದ ಪ್ರದೇಶಗಳೆಲ್ಲವನ್ನೂ ತಾಯ್ನಾಡಿನೊಂದಿಗೆ ಒಗ್ಗೂಡಿಸುವ ಸಂಕಲ್ಪ ಹೊಂದಿದೆ. ಅದಕ್ಕನುಗುಣವಾಗುವಂತೆ ಪಾಕಿಸ್ತಾನ ಇಂದು ಆರ್ಥಿಕವಾಗಿ ದುಃಸ್ಥಿತಿಯಲ್ಲಿದೆ ಮತ್ತು ಅದರಿಂದಾಗಿ ಅದರ ಸೇನಾಶಕ್ತಿಯೂ ಧಕ್ಕೆಗೊಳಗಾಗಿದೆ. ಹೀಗಾಗಿ ಸೇನಾ ಕ್ರಮದ ಮೂಲಕ ಕಾಶ್ಮೀರ ಸಮಸ್ಯೆಯನ್ನು ತನ್ನ ಪರವಾಗಿ ಬಗೆಹರಿಸಿಕೊಳ್ಳುವ ಭಾರತದ ಆಕಾಂಕ್ಷೆ ಬಲಗೊಂಡಿದೆ.
ಭಾರತದ ಯೋಜನೆಗೆ ಇಂದಿನ ಅಮೆರಿಕ ಸಹ ಬೆಂಬಲವಾಗಿ ನಿಂತಿದೆ. ಇದರ ಕಾರಣ ಆಸಕ್ತಿಕರ. ಅರಬ್ಬಿ ಸಮುದ್ರಕ್ಕೆ ರಶಿಯನ್ನರು ಬರುವುದನ್ನು ತಡೆಯಲು ಬ್ರಿಟಿಷರು ಪಾಕಿಸ್ತಾನವನ್ನು ಸೃಷ್ಟಿಸಿದರು. ಆದರೆ ಇಂದು ಈ ವಲಯದಲ್ಲಿ ಬ್ರಿಟನ್ ನಾಪತ್ತೆಯಾಗಿದೆ ಮತ್ತು ಅಮೆರಿಕಾ ಇಲ್ಲಿ ಪ್ರಮುಖ ಸೇನಾಶಕ್ತಿಯಾಗಿ ನೆಲೆಯೂರಿದೆ. ಆದರೆ ಹಿಂದೆ ಬ್ರಿಟನ್ ಎದುರಿಸಿದ್ದ ಸಮಸ್ಯೆಯೇ ಇನ್ನೊಂದು ರೂಪದಲ್ಲಿ ಅಮೆರಿಕಾದ ಮುಂದೆ ಎದ್ದುನಿಂತಿದೆ. ಪಾಕಿಸ್ತಾನದ ಮೂಲಕ ಚೀನಾ ಅರಬ್ಬಿ ಸಮುದ್ರದತ್ತ ದಾರಿ ಹುಡುಕಿಕೊಂಡಿದೆ!
ಗಿಲ್ಗಿಟ್-ಬಾಲ್ಟಿಸ್ತಾನವೂ ಸೇರಿದಂತೆ ಇಡೀ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ವಶಕ್ಕೆ ತಂದರೆ ಅಲ್ಲಿಗೆ ಚೀನಾ ಮತ್ತು ಪಾಕಿಸ್ತಾನಗಳ ನಡುವೆ ಭೂಸಂಪರ್ಕ ಕತ್ತರಿಸಿಹೋಗುತ್ತದೆ, ಅರಬ್ಬಿ ಸಮುದ್ರ ಚೀನಾದಿಂದ ದೂರದೂರ ಹೊರಟುಹೋಗುತ್ತದೆ!
ಇಂದು ಪಾಕಿಸ್ತಾನದ ಮೇಲೆ ಭಾರತ ಒಡ್ಡಿರುವ ಸೇನಾ ಹಾಗೂ ರಾಜತಾಂತ್ರಿಕ ಒತ್ತಡ ಅಭೂತಪೂರ್ವವಾದದ್ದು. ಸಾಂಪ್ರದಾಯಿಕ ಯುದ್ಧದಲ್ಲಿ ಸೆಣಸಲು ಆ ದೇಶಕ್ಕೆ ಏಳು ಅಥವಾ ಹೆಚ್ಚೆಂದರೆ ಹತ್ತು ದಿನಗಳಿಗಿಂತ ಹೆಚ್ಚುಕಾಲ ಸಾಧ್ಯವಾಗುವುದಿಲ್ಲ. ಜತೆಗೆ, ಅದರ ಅಣ್ವಸ್ತ್ರಗಳನ್ನು ಎರಡು ವರ್ಷಗಳ ಹಿಂದೆಯೇ ಅಮೆರಿಕಾ ಸೌದಿ ಅರೇಬಿಯಾಗೆ ಸಾಗಿಸಿರಬಹುದಾದ ಸೂಚನೆ ದಟ್ಟವಾಗಿದೆ. ಒಂದುವೇಳೆ ಪಾಕಿಸ್ತಾನದ ಕೈಯಲ್ಲಿ ಕೆಲವಾದರೂ ಅಣ್ವಸ್ತ್ರಗಳು ಉಳಿದಿದ್ದರೂ ಅವುಗಳನ್ನು ಬಳಸಲು ಅದಕ್ಕೆ ಅಮೆರಿಕಾ, ರಶಿಯಾ ಮತ್ತು ಫ್ರಾನ್ಸ್ನಂತಹ ಜವಾಬ್ದಾರಿಯುತ ರಾಷ್ಟ್ರಗಳು ಅವಕಾಶ ನೀಡುವುದಿಲ್ಲ. ಪಾಕಿಸ್ತಾನ ಹುಚ್ಚುಹತಾಶೆ ತೋಡಿ ಅಣ್ವಸ್ತ್ರ ದಾಳಿಗೆ ಮುಂದಾದರೂ ಅದರ ಯಾವುದೇ ಕ್ಷಿಪಣಿಗಳು ಅಥವಾ ಯುದ್ಧವಿಮಾನಗಳನ್ನು ತಡೆಯುವ ಸಾಮರ್ಥ್ಯ ಭಾರತ ವಾಯು ರಕ್ಷಣಾ ವ್ಯವಸ್ಥೆಗಿದೆ. ಒಟ್ಟಾರೆ ಅರ್ಥವೆಂದರೆ, ‘ಅಮೆರಿಕಾದ ಸೇನಾಸಖ್ಯದಿಂದಾಗಿ ಕಾಶ್ಮೀರ ಸಮಸ್ಯೆಯನ್ನು ತನ್ನ ಪರವಾಗಿ ಪರಿಹರಿಸಿಕೊಳ್ಳುವ ಸಾಮರ್ಥ್ಯ ಪಾಕಿಸ್ತಾನಕ್ಕಿದೆ’ ಎಂದು 1956ರಲ್ಲಿ ಅಂದಿನ ಪಾಕ್ ಪ್ರಧಾನಿ ಮಹಮದ್ ಖಾನ್ ನೂನ್ ಹೇಳಿದ್ದು ಸಂಪೂರ್ಣ ಬದಲಾಗಿ ಇಂದು ಅದೇ ಅಮೆರಿಕಾದ ಬೆಂಬಲದಿಂದ ಕಾಶ್ಮೀರ ಸಮಸ್ಯೆಯನ್ನು ತನ್ನ ಪರವಾಗಿ ಪರಿಹರಿಸಿಕೊಳ್ಳುವ ಸ್ಥಿತಿಯಲ್ಲಿ ಭಾರತ ಇದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)