ದೇಶದ ರಕ್ಷಣೆ, ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಸಿದ್ಧ : ಕೇಂದ್ರ ಸಚಿವ ಡಾ.ಎಸ್.ಜೈಶಂಕರ್

jaishankar
Published on

ಬೆಂಗಳೂರು: ಕಷ್ಟದಲ್ಲಿ ಸಿಲುಕಿರುವವರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ಸರ್ಕಾರವು ದೇಶದ ರಕ್ಷಣೆ ಮತ್ತು ಅಭಿವೃದ್ಧಿಗೆ ಸದಾ ಸಿದ್ಧ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಹೇಳಿದರು.

ಪಿಇಎಸ್ ವಿಶ್ವವಿದ್ಯಾಲಯ ಆಯೋಜಿಸಿರುವ ನಾಲ್ಕು ದಿನಗಳ ವಿಚಾರ ಸಂಕಿರಣದಲ್ಲಿ ತಾವು ಬರೆದ ಪುಸ್ತಕ ‘ವೈ ಭಾರತ್ ಮ್ಯಾಟರ್ಸ್‌’ ಎಂಬ ಪುಸ್ತಕ ಬಿಡುಗಡೆ ಮತ್ತು ಸಂಸದ ತೇಜಸ್ವಿ ಸೂರ್ಯ ಜತೆಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋವಿಡ್ ಬಂದಾಗ, ಯುಕ್ರೇನ್ ಯುದ್ಧವಾದಾಗ, ಇತ್ತೀಚಿಗೆ ಉತ್ತರಾಖಂಡದ ಸುರಂಗದಲ್ಲಿ ಕಾರ್ಮಿಕರು ಸಿಲುಕಿದಾಗ ಎಲ್ಲ ಸಮಯದಲ್ಲೂ ನಮ್ಮ ಸರ್ಕಾರ ಸಾಮರ್ಥ್ಯ ಮೀರಿ ಕೆಲಸ ಮಾಡಿದೆ. ಸಾವಿರಾರೂ ಜನರು ಬದುಕು ಉಳಿಸಿದೆ. ಜನರು ನಮ್ಮಿಂದ ನಿರೀಕ್ಷೆ ಮಾಡಿದ್ದನ್ನು ನಾವು ಅವರಿಗೆ ನೀಡಿದ್ದೇವೆ. ಎಂತಹ ಕಷ್ಟದ ಸನ್ನಿವೇಶ ಎದುರಾದರೂ ಸರ್ಕಾರ ನಿಮ್ಮ ಜತೆಗಿದೆ ಎಂಬ ಧೈರ್ಯ ನಿಮ್ಮಲ್ಲಿರಲಿ ಎಂದರು.

ತಂತ್ರಜ್ಞಾನ ಬದಲಾದಂತೆ ದೇಶದಲ್ಲಿ ಸಾಕಷ್ಟು ಬದಲಾವಣೆ ಕೂಡ ಆಗಿದೆ. ಜನರ ಜೀವನ ಶೈಲಿ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಂಡ ‘ಮೇಕ್ ಇನ್ ಇಂಡಿಯಾ’ ಕನಸು ಸಕಾರಗೊಂಡಿದೆ. ಇದು ಸಾಧ್ಯವೇ ಇಲ್ಲವೆಂದು ಎಷ್ಟೋ ಜನರು ಮೂಗು ಮುರಿದರು. ಆದರೂ, ಇದನ್ನು ಮೋದಿ ಅವರು ಸಾಧಿಸಿ ತೋರಿಸಿದರು. ಇದರ ಲವಾಗಿ ನಮ್ಮಲ್ಲಿ ದೇಶದಲ್ಲಿಂದು ಸೆಮಿಕಂಡಕ್ಟರ್ ಚಿಪ್‌ಗಳ ಉತ್ಪಾದನೆ ನಡೆಯುತ್ತಿದೆ. ಸ್ವದೇಶಿ ನಿರ್ಮಿತ ‘ತೇಜಸ್’ ಲಘು ಯುದ್ಧ ವಿಮಾನ ಇತರೆ ದೇಶಕ್ಕೆ ಮಾದರಿಯಾಗಿದೆ. ಇದರ ಮೇಲೆ ಇತರರಿಗೆ ನಂಬಿಕೆ ಮೂಡಿಸಬೇಕೆಂಬ ಉದ್ದೇಶದಿಂದಲೇ ಮೋದಿ ಅವರು ಹಾರಾಟ ನಡೆಸಿದ್ದಾರೆ ಎಂದು ತಿಳಿಸಿದರು.

ಸುಮ್ಮನೆ ಬಿಡಲು ಸಾಧ್ಯವೇ?
ನಿಮ್ಮ ಮನೆಯ ಬಾಗಿಲು ತೆರೆದಿದೆ ಎಂಬ ಕಾರಣಕ್ಕೆ ಅತಿಕ್ರಮ ಪ್ರವೇಶ ಮಾಡಲು ನೀವು ಬಿಡುತ್ತೀರಾ? ಎಂದು ಜೈಶಂಕರ್ ವಿದ್ಯಾರ್ಥಿಗಳನ್ನೇ ಪ್ರಶ್ನಿಸಿದರು. ವಿದ್ಯಾರ್ಥಿ ಒರ್ವ ಹೊರ ರಾಜ್ಯದವರು ನಮ್ಮ ಸಲುಗೆ ಪಡೆದು, ನಮ್ಮ ಮೇಲೆ ಸವಾರಿ ಮಾಡಿದರೆ ನೀವೇನು ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಮ್ಮ ಮನೆ ಬಾಗಿಲು ತೆರೆದಿಟ್ಟ ಕಾರಣಕ್ಕೆ, ಹೊರಗಿನವರು ನಿಮ್ಮ ಮನೆಗೆ ನುಗ್ಗಲು ಪ್ರಯತ್ನಿಸಿದರೆ, ನೀವು ಸುಮ್ಮನೆ ಇರುತ್ತೀರಾ?. ಅದೇ ರೀತಿ ನಾವು ಸಹ. ಹೊರ ರಾಜ್ಯದೊಂದಿಗೆ ಸ್ನೇಹ ಇದೆ ಎಂಬ ಕಾರಣಕ್ಕೆ ಅವರು ಅತಿಕ್ರಮ ಪ್ರವೇಶ ಮಾಡಿದರೇ ಸುಮ್ಮನೆ ಬಿಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ದೇಶದಲ್ಲಿ ಮೀಸಲಾತಿ ತೆಗೆದು ಹಾಕಲು ಸಾಧ್ಯವಿಲ್ಲವೇ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ ‘ಬಾಸ್’ ಉತ್ತರ ನೀಡಬೇಕಷ್ಟೇ ಎಂದು ಸುಮ್ಮನಾದರು. ಈ ಕಾರ್ಯಕ್ರಮದಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ, ಸಮ ಕುಲಾಧಿಪತಿ ಜವಹಾರ್ ದೊರೆಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net