

South Films: ಇತರೆ ಚಿತ್ರರಂಗದ ಸಿನಿಮಾಗಳಿಗಿಂತ ತೆಲುಗು ಚಿತ್ರಗಳೇ ಉತ್ತರ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ದಕ್ಷಿಣ ಭಾಗಕ್ಕೆ ಹೋಲಿಸಿ ಹೇಳುವುದಾದರೆ ಉತ್ತರ ಭಾರತದಲ್ಲಿಯೇ ನಮ್ಮ ಸಿನಿಮಾಗಳು ಅತೀ ಹೆಚ್ಚು ಕಲೆಕ್ಷನ್ ಮಾಡಿವೆ ಎಂದು ಆಂಧ್ರಪ್ರದೇಶದ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಅಧ್ಯಕ್ಷರಾದ ಕೇತಿರೆಡ್ಡಿ ಜಗದೀಶ್ವರ್ ರೆಡ್ಡಿ ಹೇಳಿದ್ದಾರೆ.
ಸೌತ್-ನಾರ್ತ್ ಸಿನಿಮಾಗಳ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಚಿತ್ರೋದ್ಯಮದಲ್ಲಿ ದಕ್ಷಿಣ ಮತ್ತು ಉತ್ತರ ಎಂದು ಬೇಧಿಸುವುದು ತಪ್ಪು. ಚಿತ್ರರಂಗಕ್ಕೆ ತಾರತಮ್ಯ ಮಾಡುವುದು ಸರಿಯಲ್ಲ ಹಾಗೂ ಒಪ್ಪುವಂತದಲ್ಲ. ನಾವು ಹೆಚ್ಚಿನ ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಿಸುತ್ತಿದ್ದೇವೆ. ದಕ್ಷಿಣ ಭಾರತದ ಚಿತ್ರಗಳು ಉತ್ತರ ಭಾರತದಲ್ಲಿ ಹೆಚ್ಚು ಕಲೆಕ್ಷನ್ ಪಡೆಯುತ್ತಿವೆ. ಉದಾಹರಣೆಗೆ, ಇತ್ತೀಚೆಗಷ್ಟೇ ತೆರೆಕಂಡ 'ಪುಷ್ಪ 2' ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದೆ" ಎಂದರು.
"ಭಾರತದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳನ್ನು ಹೊಂದಿರುವ ರಾಜ್ಯ ಆಂಧ್ರಪ್ರದೇಶ. ದೇಶದ ಒಟ್ಟು 6,877 ಚಿತ್ರಮಂದಿರಗಳಲ್ಲಿ ಆಂಧ್ರ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ. ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳು ಅಂದರೆ 1,097 ಇವೆ. ನಮ್ಮ ನಂತರ ತಮಿಳುನಾಡಿನಲ್ಲಿ 943, ಕರ್ನಾಟಕದಲ್ಲಿ 719, ಮಹಾರಾಷ್ಟ್ರದಲ್ಲಿ 703 ಮತ್ತು ತೆಲಂಗಾಣದಲ್ಲಿ 485 ಚಿತ್ರಮಂದಿರಗಳಿವೆ" ಎಂದು ಹೇಳಿದರು.
"ದಕ್ಷಿಣದ ನಾಲ್ಕು ರಾಜ್ಯಗಳು ಮಾತ್ರ ಮೊದಲ ಐದು ಸ್ಥಾನ ಪಡೆದಿರುವುದು ಗಮನಾರ್ಹ. ದಕ್ಷಿಣದಲ್ಲಿ ಸುಮಾರು 3,700 ಥಿಯೇಟರ್‌ಗಳಿದ್ದರೂ, 3,200 ಚಿತ್ರಮಂದಿರಗಳನ್ನು ಹೊಂದಿರುವ ಉತ್ತರದಲ್ಲಿ ಅತಿ ಹೆಚ್ಚು ಕಲೆಕ್ಷನ್ ಆಗಿದೆ. ಇದನ್ನು ನಾವು ಗಮನಿಸಬೇಕು. ಸಿನಿಮಾ ಇಂಡಸ್ಟ್ರಿ ಎಂದರೆ ಪ್ರೇಕ್ಷಕರನ್ನು ರಂಜಿಸುವುದೇ ಆಗಿದೆ. ಇಲ್ಲಿ ದಕ್ಷಿಣ ಮತ್ತು ಉತ್ತರದಿಂದ ಪ್ರತ್ಯೇಕವಾಗಿ ನೋಡಬಾರದು. ಎಲ್ಲಾ ದಕ್ಷಿಣ ಮತ್ತು ಉತ್ತರ ಸಿನಿಮಾಗಳು ಭಾರತೀಯ ಚಲನಚಿತ್ರೋದ್ಯಮದ ಭಾಗವಾಗಿದೆ ಎಂಬುದನ್ನು ಮಾತ್ರ ಗುರುತಿಸಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ,(ಏಜೆನ್ಸೀಸ್).