

ಮಹತ್ವಪೂರ್ಣವಾದ ನವರಾತ್ರಿ ಸುಸಂದರ್ಭವನ್ನು ಸಾಮಾನ್ಯವಾಗಿ ಜನರು ಯಜ್ಞ-ಯಾಗಾದಿಗಳನ್ನು ಮಾಡಲು ಬಳಸುತ್ತಾರೆ. ಏಕೆಂದರೆ, ಸುಖಜೀವನ ನಡೆಸಲು ಸಾಧ್ಯವಾಗುವಂತೆ ದೇವಾನುದೇವತೆಗಳು ನಮ್ಮ ಮೇಲೆ ಸುರಿಸುತ್ತಿರುವ ಅಪರಿಮಿತ ಅನುಗ್ರಹವರ್ಷಕ್ಕಾಗಿ ಅವರಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ದ್ಯೋತಕವಾಗಿ, ನಾವು ಯಜ್ಞಕುಂಡಕ್ಕೆ, ವಿವಿಧ ದೇವತೆಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುತ್ತ ಭಕ್ತಿಪೂರ್ವಕವಾಗಿ ವಿವಿಧ ದ್ರವ್ಯಗಳನ್ನು ಸಮರ್ಪಿಸುತ್ತೇವೆ. ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಒಂದು ಭಾಗವಾಗಿರುವ ಇಂತಹ ಆಚರಣೆಗಳು ಅರ್ಥಹೀನ ಕ್ರಿಯೆಗಳಲ್ಲ. ಇವುಗಳಿಂದ ಕಲಿಯಬೇಕಾಗಿರುವ ಅನೇಕ ವಿಷಯಗಳಿವೆ.
ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಘೊಷಿಸಿರುವಂತೆ:
ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ |
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ || 3.11 ||
‘ಯಜ್ಞಗಳ ಮೂಲಕ ದೇವತೆಗಳನ್ನು ಸಂತೃಪ್ತಿಗೊಳಿಸಬೇಕು. ಇದರಿಂದ ಸುಪ್ರೀತರಾದ ದೇವತೆಗಳು ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ. ಇಂತಹ ಪರಸ್ಪರ ಅನ್ಯೋನ್ಯತೆಯು ನಮಗೆ ಪರಮ ಶ್ರೇಯಸ್ಸನ್ನು ತರುತ್ತದೆ’.
‘ ಕ್ರಿಯೆ-ಪ್ರತಿಕ್ರಿಯೆ’ಗಳ ಅನುಲ್ಲಂಘ್ಯ ಶಾಸನದ ನಿಯಂತ್ರಣದಲ್ಲಿ ನಡೆಯುತ್ತಿರುವ ಈ ಪ್ರಪಂಚದಲ್ಲಿ ನಡೆಯುವ ಸಕಲ ಕ್ರಿಯೆಗಳು ನಮ್ಮ (ಮಾನವರ) ಹಾಗೂ ನೈಸರ್ಗಿಕ ಶಕ್ತಿಗಳನ್ನು ಪ್ರತಿನಿಧಿಸುವ ದೇವತೆಗಳ ನಡುವಿನ ಸಹಕಾರದ ಪಾಲುದಾರಿಕೆಯಾಗಿರುತ್ತವೆ. ಉದಾಹರಣೆಗೆ, ಸಕಾಲಕ್ಕೆ ಮಳೆ ಸುರಿಯದಿದ್ದರೆ ನಾವು ಮಾಡುವ ವ್ಯವಸಾಯ ಸಫಲವಾಗುವುದಿಲ್ಲ. ಅಂತೆಯೇ, ವಿವಿಧ ರಂಗಗಳಲ್ಲಿ ಮಾಡುವ ಎಲ್ಲ ಪ್ರಯತ್ನಗಳ ಯಶಸ್ಸಿಗೂ ನೈಸರ್ಗಿಕ ಶಕ್ತಿಗಳ ಸಹಕಾರ ಅತ್ಯಗತ್ಯ. ಅಗೋಚರ ನೈಸರ್ಗಿಕ ಶಕ್ತಿಗಳನ್ನು ಪ್ರತಿನಿಧಿಸುವ ದೇವತೆಗಳು ಹಾಗೂ ದೃಷ್ಟಿಗೋಚರವಾದ ಮಾನವರ ನಡುವಿನ ಸಹಕಾರದ ಉದ್ದೇಶ- ಪ್ರಪಂಚದ ಸಕಲ ಜೀವಿಗಳ ಸುಕ್ಷೇಮ. ಇಂತಹ ಅನ್ಯೋನ್ಯ ಸಹಕಾರದಿಂದ ಫಲಿಸುವ ಗಳಿಕೆಯ ಒಂದು ಪಾಲನ್ನು, ನಮ್ಮ ಪಾಲುದಾರರಾದ ದೇವತೆಗಳಿಗೂ ಕೃತಜ್ಞತೆಯಿಂದ ಸಮರ್ಪಿಸುವುದು ನ್ಯಾಯಬದ್ಧ ಕರ್ತವ್ಯವಲ್ಲವೇ?
ಕೃಷಿಪ್ರಧಾನವಾದ ಭಾರತದಲ್ಲಿ ಬಹುಪಾಲು ಜನರು ಕೃಷಿಕರಾಗಿದ್ದು, ಜೀವನ ಮತ್ತು ಜೀವನೋಪಾಧಿಗಳಲ್ಲಿ ನಿಸರ್ಗದ ಪ್ರಮುಖ ಪಾತ್ರವನ್ನು ಸಹಜವಾಗಿ ಮನಗಂಡಿದ್ದರು. ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಬೆಳೆಯನ್ನು ಬೆಳೆಯುವುದರಲ್ಲಿ ಮಳೆ, ಸೂರ್ಯ, ಭೂಮಿ ಮತ್ತು ಗಾಳಿಗಳು ವಹಿಸುವ ಮಹತ್ತರ ಪಾತ್ರವನ್ನು ಕಂಡುಕೊಂಡಿದ್ದ ಅವರಲ್ಲಿ ಅವುಗಳೆಡೆಗೆ ಕೃತಜ್ಞತೆಯು ಸಹಜವಾಗಿತ್ತು. ಅಂತೆಯೇ, ಕೃಷಿಕ್ಷೇತ್ರದಲ್ಲಿ ತಮ್ಮೊಡನೆ ದುಡಿಯುವ ಇತರ ಸಹವರ್ತಿಗಳು, ಭೂಮಿಯನ್ನು ಉಳುವ ಎತ್ತುಗಳು, ಸಸ್ಯಗಳ ಅಡ್ಡ-ಪರಾಗಸ್ಪರ್ಶಕ್ರಿಯೆಯಲ್ಲಿ (cross-pollination) ಪಾತ್ರವಹಿಸುವ ಪಕ್ಷಿ ಮತ್ತು ಇನ್ನಿತರ ಕೀಟಗಳು ಇವುಗಳಿಗೂ ಕೃತಜ್ಞತೆ ಸಲ್ಲಿಸಬೇಕಾದ ಕರ್ತವ್ಯವನ್ನು ಅವರು ಅರಿತುಕೊಂಡಿದ್ದರು. ಹೀಗೆ, ಸುಖಜೀವನಕ್ಕಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮೊಡನೆ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಯಜ್ಞಗಳು ಹಾಗೂ ಉತ್ಸವಗಳಂಥ ಆಚರಣೆಗಳು ಅಸ್ತಿತ್ವಕ್ಕೆ ಬಂದವು.
ಇದನ್ನೇ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಕೆಳಕಂಡಂತೆ ವಿವರಿಸಿದ್ದಾನೆ:
ಇಷ್ಟಾನ್ ಭೋಗಾನ್ ಹಿ ವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ |
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ || 3.12 ||
‘ಯಜ್ಞದಲ್ಲಿ ಕೃತಜ್ಞತೆಯ ಪ್ರತೀಕವಾಗಿ ಅರ್ಪಿಸುವ ಆಹುತಿಯಿಂದ ದೇವತೆಗಳು ಪ್ರಸನ್ನರಾಗುತ್ತಾರೆ (ಅದರಿಂದಾಗಿ ನಾವು ಬೇಡುವ ಇಷ್ಟಾರ್ಥಗಳನ್ನು ಅವರು ಕರುಣಿಸುತ್ತಾರೆ). ಅವರು ನೀಡಿದುದನ್ನು ನಾವು ಭುಂಜಿಸಿ, ಅದರಲ್ಲಿ ಅಲ್ಪಭಾಗ ವನ್ನಾದರೂ ಅವರಿಗೆ ಹಿಂತಿರುಗಿ ಅರ್ಪಿಸದೆ ಕೃತಘ್ನರಾದರೆ, ನಾವು ಕಳ್ಳರೇ ಸರಿ!’
ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷ್ಯೆಃ |
ಭುಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್ || 3.13 ||
‘ಯಜ್ಞದಲ್ಲಿ ದೇವತೆಗಳಿಗೆ ನೈವೇದ್ಯವಾಗಿ ಸಮರ್ಪಿಸಿ, ಉಳಿದುದನ್ನು ಅನುಭವಿಸುವ ಜನರಿಗೆ ಯಾವ ಪಾಪಗಳೂ ಅಂಟುವುದಿಲ್ಲ. ಅದರ ಬದಲಿಗೆ, ಯಾರು ತಮ್ಮ ಸ್ವಭೋಗಕ್ಕಾಗಿ ಮಾತ್ರವೇ ಪಾಕಕ್ರಿಯೆಯಲ್ಲಿ ತೊಡಗುತ್ತಾರೆಯೋ, ಅವರು ಪಾಪವನ್ನೇ ಉಣ್ಣುತ್ತಾರೆ!’
ಹೀಗೆ, ‘ಕೃತಜ್ಞತೆಯ ಸಂಸ್ಕೃತಿ’ಯು ಸನಾತನ ಧರ್ಮವು ಬೋಧಿಸುವ ಜೀವನವಿಧಾನದ ಕೇಂದ್ರಬಿಂದುವಾಗಿದೆ.
ಯಜ್ಞಕುಂಡದಲ್ಲಿ ಪ್ರಜ್ವಲಿಸುವ ಅಗ್ನಿಗೆ ತಾವು ಬೆಳೆದ ಕೃಷಿಉತ್ಪನ್ನಗಳ ಸ್ವಲ್ಪ ಭಾಗವಲ್ಲದೆ, ಜೀವನದಲ್ಲಿ ತಾವು ಉಪಯೋಗಿಸುವ ವಸ್ತ್ರ, ಲೋಹ, ಆಭರಣ, ಇತ್ಯಾದಿ ವಸ್ತುಗಳನ್ನು ಆಹುತಿಯಾಗಿ ಅರ್ಪಿಸುತ್ತಿದ್ದರು. ಅಗ್ನಿಯು ಈ ಸ್ಥೂಲ ವಸ್ತುಗಳನ್ನು ದಹಿಸಿ ಸೂಕ್ಷ್ಮರೂಪದ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಇಂತಹ ಶಕ್ತಿಯನ್ನು ಸೂಕ್ಷ್ಮರೂಪದಲ್ಲಿರುವ ವಿವಿಧ ದೇವತೆಗಳು ಸ್ವೀಕರಿಸುತ್ತಾರೆ. ಆಹುತಿಯನ್ನು ನೀಡುವಾಗ ಪಠಿಸಲ್ಪಡುವ ಮಂತ್ರಗಳು ಆಯಾ ದೇವತೆಗಳಿಗೆ ಆಹುತಿಯನ್ನು ತಲುಪಿಸುವ ಕಾರ್ಯವನ್ನು ಮಾಡುತ್ತವೆ. ಇದರಿಂದ ಸುಪ್ರೀತರಾದ ದೇವತೆಗಳು ತಮ್ಮ ಅನುಗ್ರಹ-ಆಶೀರ್ವಾದಗಳನ್ನು ಉತ್ತಮ ಹವಾಮಾನ ಮತ್ತು ಸಕಾಲಿಕ ಮಳೆಯ ರೂಪದಲ್ಲಿ ನೀಡುತ್ತಾರೆ. ಇದರ ಫಲವಾಗಿ ಲೋಕದಲ್ಲಿ ಸಮೃದ್ಧಿ ನೆಲೆಸುತ್ತದೆ.
ಭಗವದ್ಗೀತೆಯಲ್ಲಿ ಹೇಳಿರುವಂತೆ: ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ | ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ || 3.14 ||
‘ಸಕಲ ಜೀವಿಗಳು ಅನ್ನದಿಂದ ಉದ್ಭವಿಸುತ್ತವೆ. ಅನ್ನವು ಮಳೆಯಿಂದ ಉತ್ಪನ್ನವಾಗುತ್ತದೆ. ಮಳೆಯು ಯಜ್ಞದ ಫಲವಾಗಿ ಸುರಿಯುತ್ತದೆ. ಯಜ್ಞವು ಮಾನವನ ಧರ್ಮಯುತ ಕರ್ಮಗಳ ಮೂರ್ತಸ್ವರೂಪ’.
ಇಂತಹ ಪವಿತ್ರ ಆಚರಣೆಗಳಲ್ಲಿ ವಿಶ್ವಾಸವಿಲ್ಲದಿರುವ ವ್ಯಕ್ತಿಗಳು, ಯಜ್ಞಗಳೆಂದರೆ, ಜನರಿಗೆ ಅವಶ್ಯಕವಾದ ಸಂಪನ್ಮೂಲಗಳನ್ನು ಬೆಂಕಿಗೆ ಎಸೆದು ವ್ಯರ್ಥಮಾಡುವ ಮೂರ್ಖ ಕ್ರಿಯೆಗಳೆಂದು ಹೀಗೆಳೆಯುವುದುಂಟು. ಯಜ್ಞಗಳ ರಹಸ್ಯವನ್ನರಿತವರು, ಅಗ್ನಿಗೆ ಸಮರ್ಪಿಸಲ್ಪಟ್ಟ ವಸ್ತುಗಳು ಉತ್ತಮ ಭವಿಷ್ಯಕ್ಕಾಗಿ ಹೂಡುವ ಬಂಡವಾಳವೆಂದು ಬಗೆಯುತ್ತಾರೆ. ಒಬ್ಬ ರೈತನು ಕೃಷಿಯಿಂದ ತನಗೆ ದೊರೆತ ಧಾನ್ಯಗಳ ಸ್ವಲ್ಪ ಭಾಗವನ್ನು ಮತ್ತೆ ಭೂಮಿಗೆ ಚೆಲ್ಲುವುದು, ಅವುಗಳನ್ನು ವ್ಯರ್ಥ ಮಾಡಲು ಅಲ್ಲ. ಆ ಬಿತ್ತನೆಯಿಂದ ಭವಿಷ್ಯದಲ್ಲಿ ನೂರು ಪಟ್ಟು ಧಾನ್ಯಗಳನ್ನು ಗಳಿಸಬಹುದೆಂಬ ರಹಸ್ಯವನ್ನು ಅವನು ಬಲ್ಲ. ಅಂತೆಯೇ, ನಮಗೆ ಪ್ರಕೃತಿದತ್ತವಾಗಿ ದೊರೆತ ದ್ರವ್ಯಗಳಲ್ಲಿನ ಸ್ವಲ್ಪ ಪ್ರಮಾಣವನ್ನು ಯಜ್ಞದಲ್ಲಿ ಅಗ್ನಿಗೆ ಸಮರ್ಪಿಸುವ ಮೂಲಕ ಸಮೃದ್ಧಿಪೂರ್ಣ ಭವಿಷ್ಯವನ್ನು ರೂಪಿಸಬಹುದು.
ಯಜ್ಞಗಳನ್ನು ಮಾಡುವಾಗ, ಈ ವಿಶ್ವದಲ್ಲಿ ಸರ್ವವೂ ದಿವ್ಯಚೈತನ್ಯದಿಂದ ತುಂಬಿದೆ ಯೆಂಬ ಸತ್ಯವನ್ನು ನೆನಪಿನಲ್ಲಿಟ್ಟುಕೊಂಡಿರಬೇಕೆಂದು ಶ್ರೀಕೃಷ್ಣನು ಪ್ರೇರೇಪಿಸುತ್ತಾನೆ:
ಬ್ರಹ್ಮಾರ್ಪಣಂ ಬ್ರಹ್ಮ ಹವಿಬರ್Åಹ್ಮಾಗ್ನೌ ಬ್ರಹ್ಮಣಾಹುತಮ್ |
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ || 4.24 ||
‘ಭಗವತ ್ಪ›ಜ್ಞೆಯಲ್ಲಿ ಮಗ್ನರಾಗಿರುವವರಿಗೆ, ಯಜ್ಞದಲ್ಲಿ ಅರ್ಪಿಸುವ ಹವಿಸ್ಸೂ ಬ್ರಹ್ಮವೇ, ಯಜ್ಞಕುಂಡದಲ್ಲಿನ ಅಗ್ನಿಯೂ ಬ್ರಹ್ಮವೇ, ಅರ್ಪಿಸುವವನೂ ಬ್ರಹ್ಮವೇ ಹಾಗೂ ಅದನ್ನು ಸ್ವೀಕರಿಸುವವನೂ ಬ್ರಹ್ಮವೇ. ಹೀಗೆ ಎಲ್ಲವನ್ನೂ ಬ್ರಹ್ಮವೆಂದೇ ಅರಿತವನು ಈ ಜೀವನದಲ್ಲಿಯೇ ಪರಮೋಚ್ಚ ಬ್ರಹ್ಮಪದವಿಯನ್ನು ಸುಲಭವಾಗಿ ಪಡೆಯುತ್ತಾನೆ’.
ವಿಶ್ವವನ್ನು ಸೃಷ್ಟಿಸಿ ಅದನ್ನು ಆವರಿಸಿರುವ
ಪರಮ ದಿವ್ಯಪ್ರಜ್ಞೆಯನ್ನು ಸ್ತ್ರೀಶಕ್ತಿಯ ರೂಪದಲ್ಲಿ ಪ್ರತಿನಿಧಿಸುವ ಜಗನ್ಮಾತೆ ಶ್ರೀ ಲಲಿತಾ ದೇವಿಯ ಸಹಸ್ರನಾಮಗಳಲ್ಲಿ ಕೆಲವು ನಾಮಗಳು, ಯಜ್ಞಗಳನ್ನು ಪ್ರೀತಿಸುವ ಅವಳೇ ತನ್ನ ಸಂತೋಷಕ್ಕಾಗಿ (ಜನರ ಮೂಲಕ) ಯಜ್ಞಗಳನ್ನು ಮಾಡುತ್ತಾಳೆಂದು ಸೂಚಿಸುತ್ತವೆ. ಅಲ್ಲದೆ, ಸಮೃದ್ಧಿಯ ಅಧಿದೇವತೆಯಾದ ಅವಳೇ, ಜನರು ಮಾಡಿದ ಯಜ್ಞದಿಂದ ಸಂಪ್ರೀತಳಾಗಿ ಅವರಿಗೆ ಸಮೃದ್ಧಿಯ ಅನುಗ್ರಹವನ್ನು ನೀಡುತ್ತಾಳೆ.
881. ಯಜ್ಞಪ್ರಿಯಾ: ಅವಳು ಯಜ್ಞವನ್ನು, ಯಜ್ಞದ ಆಹುತಿಗಳನ್ನು ಸ್ವೀಕರಿಸಿ ಆಸ್ವಾದಿಸುತ್ತಾಳೆ.
882. ಯಜ್ಞ ಕರ್ತಿ: ಯಜ್ಞವನ್ನು ಮಾಡಲು ನಮ್ಮನ್ನು ಪ್ರೇರೇಪಿಸುವ ಶಕ್ತಿ ಅವಳೇ.
883. ಯಜಮಾನ ಸ್ವರೂಪಿಸ್ವರೂಪಿಣೀ: ಅವಳು ಯಜ್ಞದ ಯಜಮಾನಿಯಾಗಿದ್ದಾಳೆ.
884. ಧರ್ವಧಾರಾ: ಎಲ್ಲ ರೀತಿಯ ಧರ್ಮಗಳಿಗೆ ಅವಳೇ ಆಧಾರವಾಗಿದ್ದಾಳೆ.
885. ಧನಾಧ್ಯಕ್ಷಾ: ಅವಳು ಧನಸಂಪತ್ತಿನ ಅಧಿದೇವತೆಯಾಗಿದ್ದಾಳೆ.
886. ಧನಧಾನ್ಯ ವಿವರ್ಧಿನೀ: ಸಂಪತ್ತು, ಆಹಾರ ಸಮೃದ್ಧಿಗೆ ಕಾರಣೀಭೂತಳಾಗಿದ್ದಾಳೆ.
ಹೀಗೆ, ಎಲ್ಲದರಲ್ಲಿಯೂ ಕಣ್ಣಿಗೆ ಕಾಣದ ವಿಶ್ವಾಧಾರ ದಿವ್ಯಚೈತನ್ಯವನ್ನು ಗುರುತಿಸುವ, ‘ವಿನಯ ಮತ್ತು ಕೃತಜ್ಞತೆ’ಗಳ ಸಂಸ್ಕೃತಿಯೇ ಸನಾತನ ಧರ್ಮದ ಅಂತರಾಳವಾಗಿದೆ.
ಶ್ರೀಕೃಷ್ಣನು ಗೀತೆಯಲ್ಲಿ ಸಾರಿರುವಂತೆ, ನಮ್ಮ ಪ್ರತಿನಿತ್ಯದ ಜೀವನವೇ ಯಜ್ಞವಾಗಬೇಕು ಹಾಗೂ ನಮ್ಮ ಪ್ರತಿ ಯೋಚನೆ, ವಾಕ್ಕು ಮತ್ತು ಕೃತಿಗಳು ಯಜ್ಞದಲ್ಲಿ ಭಗವಂತನಿಗೆ ಅರ್ಪಿಸುವ ಆಹುತಿಯಾಗಿ ಪರಿವರ್ತನೆಗೊಳ್ಳಬೇಕು.
ಹಲವಾರು ಯಜ್ಞಗಳ ಪೈಕಿ, ಪಿತೃಯಜ್ಞ (ನಮ್ಮ ಪಿತೃಗಳಿಗೆ ಕೃತಜ್ಞತಾಪೂರ್ವಕವಾಗಿ ಸಲ್ಲಿಸುವ ಸೇವೆಗಳು), ದೈವಯಜ್ಞ (ಭಗವಂತನಿಗೆ ಸಲ್ಲಿಸುವ ಪೂಜೆ-ಆರಾಧನೆಗಳು) ಪ್ರಮುಖವಾದವುಗಳೆಂದು ಪರಿಗಣಿಸಲ್ಪಟ್ಟಿವೆ. ಆದರೆ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾದ ಮಾನವರ ಹಾಗೂ ಇತರ ಜೀವಿಗಳ ಅವಶ್ಯಕತೆಗಳನ್ನು ಪೂರೈಸಿ, ಅವರ ದುಃಖವನ್ನು ನೀಗುವ ‘ಭೂತ ಯಜ್ಞ’ವೇ, ಸರ್ವಶ್ರೇಷ್ಠ ಯಜ್ಞವಾಗಿದೆ. ಏಕೆಂದರೆ ಈ ಯಜ್ಞದಲ್ಲಿ, ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ಮತ್ತು ವಸ್ತ್ರಹೀನರಿಗೆ ವಸ್ತ್ರಗಳನ್ನು ನೀಡುವುದು, ಸೂರಿಲ್ಲದವರಿಗೆ ಆಶ್ರಯ ಒದಗಿಸುವುದು, ಆರೋಗ್ಯವಿಲ್ಲದವರಿಗೆ ಔಷಧ ಉಪಚಾರ, ಶಿಕ್ಷಣಾವಕಾಶಗಳಿಲ್ಲದವರಿಗೆ ಶಿಕ್ಷಣ ಒದಗಿಸುವುದು ಅಥವಾ ದುಃಖದಲ್ಲಿರುವವರಿಗೆ ಸಾಂತ್ವನ ಹೇಳುವುದು ಇವೆಲ್ಲವನ್ನೂ ನಮ್ಮ ಜೀವನಯಜ್ಞದಲ್ಲಿ ಆಹುತಿಗಳೆಂದು ಪರಿಗಣಿಸಬಹುದು. ಇಂಥ ಸೇವೆ ಮೂಲಕ ನಮ್ಮ ಜೀವನವನ್ನೇ ಯಜ್ಞವನ್ನಾಗಿ ಪರಿವರ್ತಿಸಬಹುದು.
ನಮ್ಮ ಸೇವಾಸಂಸ್ಥೆಗಳ ಯೋಜನೆಗಳಾದ ‘ಅನ್ನಪೂರ್ಣ’ ಕಾರ್ಯಕ್ರಮದಡಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಪೌಷ್ಟಿಕಯುಕ್ತ ಉಪಹಾರ ನೀಡುವ ಮೂಲಕ, 5000 ಗ್ರಾಮೀಣ ವಿದ್ಯಾರ್ಥಿಗಳಿಗೆ ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲಗಳ ಆಶ್ರಯದಲ್ಲಿ ಶಾಲಾಮಟ್ಟದಿಂದ ವಿಶ್ವವಿದ್ಯಾಲಯದ ತನಕ ಸಂಪೂರ್ಣ ಉಚಿತ ಭೋಜನ-ವಸತಿಯೊಂದಿಗೆ ಶಿಕ್ಷಣ ಒದಗಿಸಲಾಗುತ್ತಿದೆ ಹಾಗೂ ಶ್ರೀಸತ್ಯಸಾಯಿ ಸಂಜೀವಿನಿ ಆಸ್ಪತ್ರೆಗಳ ಆಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಾಥಮಿಕ ಹಂತದಿಂದ ತೃತೀಯ ಹಂತದವರೆಗಿನ ಆರೋಗ್ಯ ಸೇವೆಯನ್ನು ಶುಲ್ಕಮುಕ್ತವಾಗಿ ನೀಡುವ ಮೂಲಕ, ಪವಿತ್ರವಾದ ವೈಶ್ವಾನರ ಯಜ್ಞ, ಸರಸ್ವತಿ ಹೋಮ ಹಾಗೂ ಧನ್ವಂತರಿ ಯಜ್ಞಗಳನ್ನು ನಡೆಸುತ್ತಿದ್ದೇವೆ. ಈ ಯಜ್ಞಗಳಲ್ಲಿ ನಿರತರಾದ ಸಹಸ್ರಾರು ಸಜ್ಜನರು ತಮ್ಮ ಜೀವನಗಳನ್ನೇ ಯಜ್ಞಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)