ಧರ್ಮಕ್ಕೆ ಪೂರಕವಾಗಿ ನಡೆಯುವುದೇ ನಮ್ಮ ಸಂಸ್ಕೃತಿ

kudli sri
ಛಾಯಾದೇವಿ ಸಂಭಾಂಗಣ ಉದ್ಘಾಟಿಸಿದ ಬಳಿಕ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆ.ಇ.ಕಾಂತೇಶ್, ಸ.ನ.ಮೂರ್ತಿ, ವಿ.ರಾಜು, ವೆಂಕಟೇಶ್, ಚಂದ್ರಶೇಖರ್, ಚಿಕ್ಕಣ್ಣ ಮುಂತಾದವರಿದ್ದರು.
Published on

ಶಿವಮೊಗ್ಗ: ಜೀವನವೇ ಪಾಪಮಯ ಎಂಬುದು ಪರಕೀಯರ ಸಂಸ್ಕೃತಿ. ನಮ್ಮ ಸನಾತನ ಸಂಸ್ಕೃತಿ ಇದಕ್ಕೆ ತದ್ವಿರುದ್ಧ ಚಿಂತನೆಯನ್ನು ಹೊಂದಿದೆ. ಧರ್ಮಕ್ಕೆ ಪೂರಕವಾಗಿ ಅರ್ಥ ಮತ್ತು ಕಾಮವನ್ನು ಪೂರೈಸಿಕೊಳ್ಳಬೇಕೆಂಬುದು ನಮ್ಮ ಸಂಸ್ಕೃತಿಯ ಸಾರವಾಗಿದೆ ಎಂದು ಕೂಡಲಿ ಕ್ಷೇತ್ರದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ತಿಳಿಸಿದರು.

ವಿನೋಬನಗರದ ಶುಭಮಂಗಳ ಸಮುದಾಯ ಭವನದ ಪಕ್ಕದಲ್ಲಿ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್‌ನಿಂದ ನಿರ್ಮಿಸಿರುವ ಛಾಯಾದೇವಿ ಸಭಾಂಗಣವನ್ನು ಗುರುವಾರ ಉದ್ಘಾಟಿಸಿದ ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಒಂದು ಭವನವನ್ನು ಕಟ್ಟುವಾಗ ಭವನದ ಆಯದ ಒಳಗೆ ಮತ್ತು ಹೊರಗೆ ಏನೇನು ಇರಬೇಕೆಂಬ ಪರಿಕಲ್ಪನೆ ಇರುತ್ತದೆ. ಅದನ್ನು ಆರ್ಕಿಟೆಕ್ಟ್ ಸಮರ್ಪಕವಾಗಿ ನಿರ್ವಹಿಸಿದಾಗ ಯಶಸ್ವಿಯಾಗುತ್ತದೆ ಎಂದರು.

ವೈದಿಕಧರ್ಮ ವಿರೋಧಿಸಲು ಕೆಲವು ವೇದಿಕೆಗಳು ಹುಟ್ಟಿಕೊಳ್ಳುತ್ತವೆ. ಆದರೆ ವೇದಿಕೆ ಎಂಬ ಶಬ್ಧ ವೇದದಿಂದ ಹುಟ್ಟಿದ್ದು. ವೇದಿ ಎಂದರೆ ಪ್ರಮುಖ ಜಾಗ ಎಂದರ್ಥ. ಮನುಷ್ಯ ಕೀರ್ತಿ, ಹಣ, ಸಂತಾನ ಮೂರನ್ನೂ ಧರ್ಮಮಾರ್ಗದಿಂದಲೇ ಪಡೆಯಬೇಕು. ಲೋಕಪ್ರಿಯತೆ, ಆರ್ಥಿಕ ಸಬಲತೆ ಮತ್ತು ಸಂತಾನ ಮೂರನ್ನೂ ಪೂರ್ಣಗೊಳಿಸಿದ ನಂತರ ನಿವೃತ್ತಿ ಮಾರ್ಗಕ್ಕಾಗಿ ಸಮರ್ಪಕ ವೇದಿಕೆಯ ಅಗತ್ಯವಿದೆ ಎಂದರು.

ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮಾತನಾಡಿ, ದೇವಾಲಯ ಸಮಿತಿಯ ಟ್ರಸ್ಟಿಗಳ ಕೋರಿಕೆಯ ಮೇರೆಗೆ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಈ ಬಹು ಉಪಯೋಗಿ ಸಭಾಂಗಣ ಸಿದ್ಧಗೊಂಡಿದೆ. ಇದರಲ್ಲಿ ಹವಾನಿಯಂತ್ರಿತ ಸಭಾಂಗಣ, ಭೋಜನ ಶಾಲೆ, ಲಿಫ್ಟ್ ವ್ಯವಸ್ಥೆಯಿದೆ ಎಂದು ತಿಳಿಸಿದರು.

ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್‌ನ ಉಪಾಧ್ಯಕ್ಷ ವಿ.ರಾಜು, ಪ್ರಧಾನ ಕಾರ್ಯದರ್ಶಿ ಸ.ನ.ಮೂರ್ತಿ, ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಚಿಕ್ಕಣ್ಣ, ಟ್ರಸ್ಟಿಗಳಾದ ಪ್ರಭಾಕರ್, ರಮೇಶ್, ಶ್ರೀನಿವಾಸ್ ರಾವ್, ವೆಂಕಟೇಶ್, ಚಂದ್ರಶೇಖರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net