

ದೂರವಿರಿ; ನಿಮಗೆ ಬೇಕಾದ್ದನ್ನು ಬೇಯಿಸಿಕೊಂಡು ತಿಂದು ಕೊಂಡಿರಿ’ ಎಂಬ ಕರ್ಕಶ ಮಾತುಗಳು ಬರಲಾರಂಭಿಸಿದವು. ಒಟ್ಟಿನಲ್ಲಿ ಇವರಿಗೆ ದಿನಗಳ ಉದ್ದವಾಗಲು ಆರಂಭಿಸಿದವು. ಒಂದು ದಿನ ಮಗನಂತೂ ಅಪ್ಪನನ್ನು ಕೇಳಿಯೇ ಬಿಟ್ಟ. ‘ನಿಮ್ಮ ರಿಟರ್ನ್ ಟಿಕೆಟ್ ಯಾವಾಗ? ನಮ್ಮದು ಓಪನ್ ಟಿಕೆಟ್ ಕಣೋ. ಆದಷ್ಟು ಬೇಗ ನಮ್ಮನ್ನು ಭಾರತಕ್ಕೆ ಕಳುಹಿಸಿಬಿಡು’ ಎನ್ನಬೇಕಾದರೆ ಅಪ್ಪನ ಗಂಟಲು ತುಂಬಿ ಬಂತು ಅಮ್ಮನ ಕಣ್ಣಲ್ಲಿ ನೀರಾಡಿತು.
ಹೌದು: ನಮ್ಮ ಮಕ್ಕಳು ನಮ್ಮಿಂದಾಗಿ ಹುಟ್ಟಿದರು ವಿನಹ ನಮಗಾಗಿಯೇ ಹುಟ್ಟಿದರು ಎಂಬುದು ಒಂದು ಭ್ರಮೆ. ಅವರಿಗೆ ಅವರದೇ ಆದ ಆಸೆ-ಆಕಾಂಕ್ಷೆ, ಆಸಕ್ತಿ-ಅಭಿರುಚಿಗಳ ಲೋಕಗಳಿರುತ್ತವೆ. ಜತೆಯಲ್ಲಿ ತಲೆಮಾರು ಅಂತರಗಳು ಬೇರೆ. ಮಕ್ಕಳು ಹೆತ್ತವರಿಂದ ನಾನಾ ಕಾರಣಗಳಿಂದ ದೂರವಾಗುತ್ತಾರೆ. ಬಾಲ್ಯದಲ್ಲಿ ತಾವು ನೀಡುವ ಸುಂದರ ಕ್ಷಣಗಳ ಮೂಲಕ ಮಾತ್ರವೇ ಮಕ್ಕಳು ಹೆತ್ತವರ ಮೇಲಿನ ತಮ್ಮ ಋಣ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಇದು ಜಗದ ನಿಯಮ. ಈ ಸತ್ಯವನ್ನು ಅರಿತು ಬಾಳುವುದೇ ಜಾಣತನ. ಅಂತೆಯೇ ನಮ್ಮ
ಮಕ್ಕಳು ವೃದ್ಧಾಪ್ಯದಲ್ಲಿ ನಮ್ಮ ಸೇವೆ ಮಾಡಬೇಕೆಂದು ಆಶಿಸುವ ಮೊದಲು, ನಾವು ನಮ್ಮ ಹೆತ್ತವರನ್ನು ಅವರ ವೃದ್ಧಾಪ್ಯದಲ್ಲಿ ಹೇಗೆ ನೋಡಿಕೊಂಡಿದ್ದೇವೆ ಎಂಬುದನ್ನು ಕೂಡ ಮರೆಯಬಾರದು. ನಾವು ಹೆತ್ತವರ ಸೇವೆ ಮಾಡಿದ್ದರೆ ಅದನ್ನು ನೋಡಿದ ನಮ್ಮ ಮಕ್ಕಳು ಸಹ ನಮ್ಮ ಸೇವೆ ಮಾಡಲು ಮರೆಯೋದಿಲ್ಲ. ಒಂದಂತೂ ನಿಜ. ಹೆತ್ತವರ ಕಣ್ಣಲ್ಲಿ ಎರಡೇ ಬಾರಿ ನೀರು- ಒಮ್ಮೆ ಪ್ರೀತಿಯಿಂದ ಸಾಕಿ ಸಲಹಿದ ಮಗಳು ಅಳಿಯನ ಪಾಲಾದಾಗ; ಇನ್ನೊಮ್ಮೆ ವಾತ್ಸಲ್ಯದಿಂದ ಸಾಕಿ ಬೆಳೆಸಿದ ಮಗ ಸೊಸೆಯ ಪಾಲಾಗಿ ಮುಖ ತಿರುಗಿಸಿಕೊಂಡು ಹೋದಾಗ!