

ಬೆಂಗಳೂರು: ರಾಜ್ಯದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾಬೀತುಪಡಿಸುವ ಸ್ಮಾರಕಗಳ ರಕ್ಷಣೆ ಹಾಗೂ ಹೆಮ್ಮೆಯ ಹೆಗ್ಗುರುತು ಸಾರಲು ರಾಜ್ಯ ಸರ್ಕಾರ ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿದೆ. ಸಂರಕ್ಷಿತ ಸ್ಮಾರಕಗಳ ರಕ್ಷಣೆಗೆ ಉದ್ಯಮಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಕಾರ ಪಡೆಯಲು ಮುಂದಾಗಿದೆ.
ಸಾರ್ವಜನಿಕರು, ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಮಾರಕಗಳು, ಪ್ರಾಚ್ಯಾವಶೇಷಗಳ ಸಂರಕ್ಷಣೆಗೆ ದತ್ತು ಸ್ವೀಕರಿಸುವ ವಿಭಿನ್ನ ಪರಿಕಲ್ಪನೆಯನ್ನು ಜಾರಿಗೊಳಿಸಲಿದೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ‘ನಮ್ಮ ಸ್ಮಾರಕ’ ಡಿಜಿಟಲ್ ವೇದಿಕೆ ಅನಾವರಣಗೊಳಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನಮ್ಮ ಸ್ಮಾರಕ, ನಮ್ಮ ಗುರುತು, ನಮ್ಮ ಹೆಮ್ಮೆ ಕುರಿತು ಸಂವಾದವೂ ನಡೆಯಲಿದೆ. ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ವಿಶೇಷ ಆಹ್ವಾನಿತರಾಗಿ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಪಾಲ್ಗೊಳ್ಳುವರು.
ರಾಜ್ಯದಲ್ಲಿರುವ ಎಲ್ಲ ಸ್ಮಾರಕಗಳು ಹಾಗೂ ಪ್ರಾಚ್ಯಾವಶೇಷಗಳ ಸಂರಕ್ಷಣೆ ನಿಟ್ಟಿನಲ್ಲಿ ವಿದ್ವಾಂಸರು, ಪ್ರವಾಸಿಗರು, ಸಾರ್ವಜನಿಕರಿಗೆ ಆಸಕ್ತಿ ಉಂಟು ಮಾಡುವ ಸ್ಥಳಗಳನ್ನಾಗಿ ಪರಿವರ್ತಿಸಲು ‘ಸ್ಮಾರಕ ದತ್ತು ಸ್ವೀಕಾರ’ ಯೋಜನೆಯ ಉದ್ದೇಶ.
ಯೋಜನೆ ಪರಿಣಾಮಕಾರಿ ಅನುಷ್ಠಾನ, ಎಲ್ಲರೂ ಸುಲಭವಾಗಿ ಭಾಗವಹಿಸುವಂತಾಗಲು ‘ನಮ್ಮ ಸ್ಮಾರಕ’ ಡಿಜಿಟಲ್ ವೇದಿಕೆ ಸ್ಥಾಪಿಸಿದ್ದು, ಇದಕ್ಕಾಗಿ ಕಲ್ಕೀ (Culkey) ಫೌಂಡೇಷನ್ ಜತೆಗೆ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ.
ರಾಜ್ಯದಲ್ಲಿರುವ 800ಕ್ಕೂ ಹೆಚ್ಚು ಸಂರಕ್ಷಿತ ಸ್ಮಾರಕಗಳ ಪೈಕಿ 280 ಸ್ಮಾರಕಗಳನ್ನು ಆಯ್ಕೆ ಮಾಡಿಕೊಂಡು ಈ ಡಿಜಿಟಲ್ ವೇದಿಕೆಯಲ್ಲಿ ಅಳವಡಿಸಲಾಗಿದೆ. ಆಸಕ್ತರು ಯೋಜನೆಗೆ ಕೈ ಜೋಡಿಸಿ ಸಹಕರಿಸಲಿದ್ದಾರೆ ಎಂಬ ವಿಶ್ವಾಸ ಸರ್ಕಾರದ್ದಾಗಿದೆ.
ಯೋಜನೆಯಡಿ ವಿಜಯನಗರದ ತಾಜ್‌ಬಾವಡಿ ಸ್ಮಾರಕವನ್ನು ವರ್ಲ್ಡ್ ಮಾನ್ಯುಮೆಂಟ್ ಂಡ್ ಇಂಡಿಯಾ ಅಸೋಸಿಯೇಷನ್, ಕೊಪ್ಪಳ ಜಿಲ್ಲೆ ಆನೆಗೊಂದಿಯ ಗಗನ್ ಮಹಲ್ ಸ್ಮಾರಕವನ್ನು ಡೆಕನ್ ಹೆರಿಟೇಜ್ ಫೌಂಡೇಷನ್ ಇಂಡಿಯಾ ಜತೆಗೆ ಒಡಂಬಡಿಕೆಯಾಗಿದೆ.
ಅದೇ ರೀತಿ ಬೆಂಗಳೂರು ನಗರದಲ್ಲಿರುವ ವೆಂಕಟಪ್ಪ ಗ್ಯಾಲರಿ ನವೀಕರಣಕ್ಕೆ ಬ್ರಿಗೇಡ್ ೌಂಡೇಷನ್ ಸಂಸ್ಥೆಯೊಂದಿಗೆ ಒಡಂಬಡಿಕೆಯಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.