'ದುಡ್ಡು ಇಲ್ಲದವ್ರು ದೇವಸ್ಥಾನ ಕಟ್ಟಲು ಸಾಧ್ಯವೇ? ಇರುವಲ್ಲೇ ದೇವರ ಪೂಜಿಸಿ': ಸಿದ್ದರಾಮಯ್ಯ

cm
Published on

ಬೆಂಗಳೂರು: ದುಡ್ಡು ಇರುವ ಜನ ದೇವಸ್ಥಾನ ಕಟ್ಟುತ್ತಾರೆ. ಎಲ್ಲಿಗೆ ಬೇಕಾದರೂ ಹೋಗುತ್ತಾರೆ. ಆದರೆ ಹಣವಿಲ್ಲದ ಬಡವರು ಎಲ್ಲಿಗೆ ಹೋಗಲು ಸಾಧ್ಯ? ಇರುವಲ್ಲಿಯೇ ದೇವರ ಪೂಜೆ ಮಾಡಿ. ಸತ್ಯವೇ ದೇವರಾಗಿದ್ದು, ಸತ್ಯವನ್ನೇ ನುಡಿದು, ಬೇರೆಯವರಿಗೆ ತೊಂದರೆ ಕೊಡದೆ ದುಡಿಮೆ ಮಾಡಿ ಒಳ್ಳೆಯ ಬದುಕು ಕಟ್ಟಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಂಬಂಧ ಮಾರ್ಮಿಕವಾಗಿ ಹೇಳಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ಸವಿತಾ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಎಂ.ಎಸ್ ಮುತ್ತುರಾಜ್ ಅವರ ಮಂಗಳವಾದ್ಯ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇವರು ಇಲ್ಲ ಅಂತಾ ನಾನು ಹೇಳಲ್ಲ, ದೇವರು ಇದ್ದಾನೆ. ಆದರೆ ದೇವರು ದೇವಸ್ಥಾನದಲ್ಲಿಯೇ ಇರಲ್ಲ, ಎಲ್ಲೆಲ್ಲೂ ಇದ್ದಾನೆ. ಎಲ್ಲಿ ಇದ್ದಾನೆಯೋ ಅಲ್ಲೇ ಪೂಜೆ ಮಾಡಿ ಎಂದರು.

ಎನ್ನ ಕಾಲೇ ಕಂಬ, ಎನ್ನ ದೇಹವೇ ದೇಗುಲ, ಹೊನ್ನ ಶಿರವೇ ಕಳಸವಯ್ಯ ಎಂದು ಬಸವಣ್ಣ ಹೇಳಿದ್ದಾರೆ. ದುಡ್ಡು ಇರೋರು ದೇವಸ್ಥಾನ ಕಟ್ಟುತ್ತಾರೆ, ದುಡ್ಡು ಇಲ್ಲದವರು ನೀವು ಇರುವಲ್ಲಿಯೇ ದೇವರ ಪೂಜೆ ಮಾಡಿ ಎಂದರು.

ಧರ್ಮ, ಜಾತಿ ಹೆಸರಿನಲ್ಲಿ ಮುಸ್ಲೀಮರು, ದಲಿತರು, ಶೂದ್ರರು, ಶ್ರಮಿಕ ವರ್ಗದವರನ್ನು ದ್ವೇಷಿಸುವುದು ಅತ್ಯಂತ ಅಮಾನವೀಯ ಮತ್ತು ಕೆಟ್ಟ ನಡವಳಿಕೆ. ನಿಮ್ಮನ್ನು ಯಾವ ದೇವಸ್ಥಾನಕ್ಕೆ ಒಳಗೆ ಬಿಡುವುದಿಲ್ಲವೋ ಆ ದೇವಸ್ಥಾನಗಳಿಗೆ ಹೋಬೇಡಿ. ನೀವೇ ದೇವಸ್ಥಾನ ಕಟ್ಟಿ ನೀವೇ ಪೂಜೆ ಮಾಡಿ ಎಂದು ನಾರಾಯಣಗುರುಗಳು ಹೇಳಿದ್ದಾರೆ. ಇದನ್ನು ಪಾಲಿಸಿ ಎಂದರು.

ಮನುಷ್ಯ ಮನುಷ್ಯನನ್ನ ದ್ವೇಷಿಸದೆ ಪ್ರೀತಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯನನ್ನ ದ್ವೇಷಿಸುತ್ತಾನೆ. ಧರ್ಮ, ಜಾತಿ ಅಂತಾ ದ್ವೇಷ ಮಾಡಬಾರದು. ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಬೇರೆ ಜಾತಿ ಅಂತಾ ದ್ವೇಷ ಮಾಡಬಾರದು. ಕುವೆಂಪು ಹೇಳಿದಂತೆ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸೋಣ ಎಂದರು.

ಸಾಮಾಜಿಕ ನ್ಯಾಯವೇ ನನ್ನುಸಿರು: ನಾನು ಜೀವಮಾನ ಪೂರ್ತಿ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ರಾಜಕಾರಣ ಮಾಡ್ತೀನಿ. ನನ್ನ ಕಾರ್ಯಕ್ರಮಗಳು ಸಹ ಬಡವರ ಪರವಾಗಿ ಇರುತ್ತವೆ. ಈಗ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆ ಮನೆ ತಲುಪಿವೆ. ಬಿಜೆಪಿಯವರ ಟೀಕೆಗೆ ಜನ ಬೆಲೆ ಕೊಡಲ್ಲ. ನಾನೂ ಕೊಡಲ್ಲ. ನಾಡಿನ ಜನ ನಮ್ಮ ಜತೆಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net