

ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಭಕ್ತರ ಆರಾಧ್ಯ ದೇವತೆ ಏಳುಕೊಳ್ಳದ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸಿದ್ಧಗೊಂಡ ಸುಮಾರು 300 ಕೋಟಿ ರೂ. ವೆಚ್ಚದ ಪ್ರಾಜೆಕ್ಟ್! ಮೊದಲ ಬಾರಿಗೆ ಭಕ್ತರಿಂದಲೇ ದೇಣಿಗೆ ಸಂಗ್ರಹಿಸಿ ಅಭಿವೃದ್ಧಿಗೆ ಹೊಸದಾಗಿ ಯೋಜನೆ ಹಾಕಿಕೊಂಡ ಸರ್ಕಾರ.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರವೇಶ ರಾಜ್ಯಗಳ ಲಕ್ಷಾಂತರ ಭಕ್ತರ ಸಮೂಹ, ವಾರ್ಷಿಕ ಸುಮಾರು 450 ಕೋಟಿ ರೂ. ಆದಾಯ ಹೊಂದಿರುವ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಅಲ್ಲದೆ, ದೇವಸ್ಥಾನ ಸುತ್ತಲಿನ ನೂರಾರು ಎಕರೆ ಭೂಮಿ ಸಂರಕ್ಷಣೆ, ಬಳಕೆ ಇಲ್ಲದೆ ದುರ್ಬಳಕೆ ಆಗುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕ್ರಮ ವಹಿಸಿದ್ದು, ದೇವಸ್ಥಾನದ ಸಮಗ್ರ ಅಭಿವೃದ್ಧಿ ಜವಾಬ್ದಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುತ್ತಿರುವುದು ವಿಶೇಷವಾಗಿದೆ.
ಸರ್ಕಾರವು ಸವದತ್ತಿ ಯಲ್ಲಮ್ಮ ಶ್ರೀಕ್ಷೇತ್ರವನ್ನು ಸಾಮಾಜಿಕ, ಸಾಂಸ್ಕ್ರತಿಕ,ಧಾರ್ಮಿಕ ಹಾಗೂ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚನೆ ಮಾಡಿದೆ. ಮತ್ತೊಂದೆಡೆ ಭಕ್ತರು, ಉದ್ಯಮಿಗಳು, ಹಾಲಿ, ಮಾಜಿ ಶಾಸಕರಿಂದ ದೇಣಿಗೆ ಸಂಗ್ರಹ ಸೇರಿ ಸಾರ್ವಜನಿಕರ ಸಹಭಾಗಿತ್ವದಲ್ಲಿಯೇ ದೇವಸ್ಥಾನ ಅಭಿವೃದ್ಧಿ ಕೈಗೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ಇದಕ್ಕೆ ಪೂರಕವಾಗಿಯೇ ಪ್ರವಾಸೋದ್ಯಮ ಇಲಾಖೆಯು ಅಭಿವೃದ್ಧಿ ನೀಲನಕ್ಷೆ ರೂಪಿಸಿದೆ.
ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಕ್ರಿ.ಶ. 3ನೇ ಶತಮಾನ ಅಥವಾ 9ನೇ ಶತಮಾನಕ್ಕೆ ಸೇರಿರುವ ಅಂದಾಜು 1 ರಿಂದ 21ನೇ ಶತಮಾನದ ಹಿಂದಿನ ದೇವಸ್ಥಾನವೆಂದು ಇತಿಹಾಸದ ಉಲ್ಲೇಖಗಳಿವೆ. ಪ್ರತಿ ವರ್ಷ ಸುಮಾರು 1.50 ಕೋಟಿ ಭಕ್ತರು ದೇವಿಯ ದರ್ಶನ ಮಾಡುತ್ತಾರೆ. ಈ ದೇವಾಲಯಕ್ಕೆ ಮಹಾರಾಷ್ಟ್ರದಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ವರ್ಷದ 12 ತಿಂಗಳು ಪ್ರತಿ ಮಂಗಳವಾರ, ಶುಕ್ರವಾರ, ಶನಿವಾರ, ಪ್ರತಿ ಹುಣ್ಣೀವೆ ಹಾಗೂ ರಜಾ ದಿನಗಳಲ್ಲಿ ಹಾಗೂ ಹೊಸ್ತಿಲ ಹುಣ್ಣಿವೆ, ಬನದ ಹುಣ್ಣಿವೆ, ಭಾರತ ಹುಣ್ಣಿವೆ, ದವನದ ಹುಣ್ಣಿವೆ, ನವರಾತ್ರಿ ಹಾಗೂ ಶ್ರಾವಣಮಾಸದಲ್ಲಿ ಭಕ್ತಾದಿಗಳು ದರ್ಶನಕ್ಕೆ ಆಗಮಿಸುತ್ತಿರುವುದು ವಿಶೇಷ ಎನ್ನಲಾಗಿದೆ.
ಯಲ್ಲಮ್ಮಗುಡ್ಡ ದಾಸೋಹ ಸಂಪ್ರದಾಯ ಆರಂಭ: ಪ್ರಪ್ರಥಮ ಬಾರಿಗೆ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅನ್ನದಾಸೋಹ, ಮೇವು ದಾಸೋಹ ಸೇರಿ ವಿವಿಧ ಹೊಸ ದಾಸೋಹ ಸಂಪ್ರದಾಯ ಆರಂಭಗೊಳ್ಳುತ್ತಿವೆ. ಭಕ್ತರ ದೇಣಿಗೆಯಲ್ಲಿ ವರ್ಷಪೂರ್ತಿ ಅನ್ನದಾಸೋಹ ನಡೆಸುವುದು.ಸಾವಿರಾರೂ ಜಾನುವಾರಗಳಿಗೆ ಮೇವು ದಾಸೋಹ ಆರಂಭಿಸುತ್ತಿದೆ. ಈಗಾಗಲೇ ಭಕ್ತರು ಕಟ್ಟಡ ನಿರ್ಮಾಣ, ಕುಡಿಯುವ ನೀರು, ಅನ್ನದಾಸೋಹ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಮುಂದೆ ಬಂದಿದ್ದಾರೆ. ಅಲ್ಲದೆ, ವಸತಿ ಭವನದಲ್ಲಿನ ಕೊಠಡಿಗಳನ್ನು ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಪಿಪಿ ಮಾದರಿಯ ಯೋಜನೆ ವಿಶೇಷತೆ: ದೇವಸ್ಥಾನ ಸಮೀಪ ಎಣ್ಣೆ ಹೊಂಡ ನಿರ್ಮಾಣ, ಒಂದೇ ಕಡೆ ಲಕ್ಷಕ್ಕೂ ಅಧಿಕ ಭಕ್ತರಿಗೆ ಪಡ್ಡಲಗಿ ತುಂಬುವ ವ್ಯವಸ್ಥೆ, ಹೈಟೆಕ್ ಸಾರ್ವಜನಿಕ ಶೌಚಗೃಹಗಳ ನಿರ್ಮಾಣ, ಜಾನುವಾರಗಳಿಗೆ ಕುಡಿಯುವ ನೀರು, ಕೊಟ್ಟಿಗೆ ವ್ಯವಸ್ಥೆ, ವಾಹನಗಳಿಗೆ, ಚಕ್ಕಡಿಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯ, ದೇವಸ್ಥಾನದಿಂದ ಹೆದ್ದಾರಿ ಸಂಪರ್ಕಕ್ಕೆ ರಿಂಗ್ ರೋಡ್ ನಿರ್ಮಾಣ, 500 ಜನ ಸಾಮರ್ಥ್ಯದ ಭಕ್ತರ ವಸತಿ ಭವನಗಳು ನಿರ್ಮಾಣ, ಇಪ್ಪತ್ತು ಎಕರೆಯಲ್ಲಿ ಬೃಹತ್ ಸಾರಿಗೆ ಬಸ್ ನಿಲ್ದಾಣ ಮತ್ತು ಡಿಪೋ ನಿರ್ಮಾಣಕ್ಕೆ ಯೀಜಿಸಲಾಗಿದೆ.
ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ಸಿದ್ದಪಡಿಸಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ. ಈಗಾಗಲೇ ದೇವಸ್ಥಾನಕ್ಕೆ ಸಚಿವರಾದ ಎಚ್.ಕೆ.ಪಾಟೀಲ, ಸತೀಶ ಜಾರಕಿಹೊಳಿ ಹಾಗೂ ರಾಮಲಿಂಗಾರೆಡ್ಡಿ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಿಪಿಪಿ ಮಾದರಿಯಲ್ಲಿಯೇ ಸಾಕಷ್ಟು ಯೋಜನೆಗಳು ಜಾರಿಗೊಳ್ಳಲಿವೆ. -ವಿಶ್ವಾಸ ವೈದ್ಯ, ಶಾಸಕ https://www.vijayavani.net/indigo-fixes-rates-per-seat-front-row-to-cost-up-to-rs-2000