

ಕರೊನಾ ವೈರಸ್ ಹಾವಳಿ ಜಗತ್ತಿನ 110ಕ್ಕೂ ಅಧಿಕ ದೇಶಗಳಿಗೆ ವ್ಯಾಪಿಸಿರುವುದು ಗೊತ್ತಿರುವಂಥದ್ದೇ. ಚೀನಾ ಮತ್ತು ಇಟಲಿ ಎರಡೂ ದೇಶಗಳು ತುಂಬ ಪ್ರಭಾವಿತಗೊಂಡಿದ್ದು, ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಚೀನಾದಲ್ಲಿ ಪರಿಸ್ಥಿತಿ ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿದೆಯಾದರೂ, ಇಟಲಿ ತತ್ತರಿಸಿದೆ. ಅಮೆರಿಕ ಕೂಡ ಸ್ತಬ್ಧವಾಗಿದೆ. ಕರೊನಾ ಹಾವಳಿಗೆ ಈಗ ಯುರೋಪ್ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಭಾರತ ಸೇರಿ ಸಾರ್ಕ್ ರಾಷ್ಟ್ರಗಳು ಕೂಡ ಕರೊನಾ ಹಾವಳಿಗೆ ಒಳಗಾಗಿವೆ. ಆದರೆ, ಭಾರತ ತಕ್ಷಣ ಕ್ರಮಗಳನ್ನು ಕೈಗೊಂಡ ಫಲ ಸೋಂಕಿತರ ಸಂಖ್ಯೆ ತೀರಾ ವಿಕೋಪಕ್ಕೆ ಹೋಗದೆ ಈವರೆಗೆ 117ರ ಆಸುಪಾಸಿನಲ್ಲಿದೆ. ಈ ಪೈಕಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿವೆ. ದೇಶದ 18ಕ್ಕೂ ಹೆಚ್ಚು ರಾಜ್ಯಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಒಂದು ವಾರದವರೆಗೆ (ಕೆಲ ರಾಜ್ಯಗಳಲ್ಲಿ ಮಾರ್ಚ್ 31ರವರೆಗೆ) ಶಾಲಾ-ಕಾಲೇಜು, ಮಾಲ್, ಬಾರ್-ರೆಸ್ಟೋರೆಂಟ್ಗಳನ್ನು ಬಂದ್ ಮಾಡಲಾಗಿದೆ.
ಕರೊನಾ ಹಾವಳಿ ವಿರುದ್ಧ ಸಂಘಟಿತ ಹೋರಾಟ ಅಗತ್ಯವೆಂದು ಅರಿತ ಭಾರತ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಯ (ಸಾರ್ಕ್) ಎಲ್ಲ ನಾಯಕರ ಜತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿದ್ದು, ಜಂಟಿ ಕಾರ್ಯತಂತ್ರ ರೂಪಿಸಲಾಗಿದೆ. ಮುಖ್ಯವಾಗಿ, ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಆರೋಗ್ಯ ಸೌಲಭ್ಯಗಳ ಕೊರತೆ ಆಗದಂತೆ ನೋಡಿಕೊಳ್ಳಲು ‘ತುರ್ತ ನಿಧಿ’ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಭಾರತ -ಠಿ; 73.95 ಕೋಟಿ ದೇಣಿಗೆ ನೀಡಲಿದೆ. ಕರೊನಾಕ್ಕೆ ಸಂಬಂಧಿಸಿದ ಬೆಳವಣಿಗೆಗಳಿಂದ ಹಲವು ರಾಷ್ಟ್ರಗಳು ಭಯಭೀತಗೊಂಡಿದ್ದು, ಇಂಥ ಸಂದಿಗ್ಧ ಹೊತ್ತಲ್ಲಿ ಮುಂದಾಳತ್ವ ವಹಿಸಿಕೊಂಡಿರುವ ಪ್ರಧಾನಿ ಮೋದಿ ‘ಸೋಂಕನ್ನು ಎದುರಿಸಲು ತಯಾರಾಗಿ, ಭಯ ಪಡಬೇಡಿ’ ಎಂಬ ಸ್ಥೈರ್ಯವನ್ನು ತುಂಬಿರುವುದು ವಿಶೇಷ. ಏನೇ ಆಪತ್ತುಗಳು ಸಂಭವಿಸಲಿ, ನೈಸರ್ಗಿಕ ವಿಕೋಪಗಳಾಗಲಿ ನೆರವಿಗೆ, ಪರಿಹಾರಕ್ಕೆ ಭಾರತ ಮೊದಲು ಮುಂದಾಗುವುದಲ್ಲದೆ, ಆ ಕೆಲಸಗಳು ಪರಿಣಾಮಕಾರಿಯಾಗಿ ನಡೆಯುವಂತೆ ಮಾರ್ಗದರ್ಶನವನ್ನೂ ಮಾಡುತ್ತದೆ. ಕೆಲ ವರ್ಷಗಳ ಹಿಂದಷ್ಟೇ ನೇಪಾಳ ಭೀಕರ ಭೂಕಂಪಕ್ಕೆ ನಲುಗಿದಾಗ ಮೊದಲು ನೆರವಿಗೆ ಧಾವಿಸಿದ್ದು ಭಾರತವೇ. ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಕೈಗೊಂಡಿರುವ ಪುನರ್ ನಿರ್ವಣದ ಕಾಮಗಾರಿಗಳು ಕೂಡ ಗಮನಾರ್ಹ. ಸಂಕಷ್ಟಗಳು ಒಂದಿಲ್ಲ ಒಂದು ರೂಪದಲ್ಲಿ ಬರುತ್ತವೆ. ಆ ಹೊತ್ತಲ್ಲಿ ಆತ್ಮಸ್ಥೈರ್ಯ, ಹೋರಾಟದ ಮನೋಬಲ ಕಳೆದುಕೊಳ್ಳದೆ ಪರಿಹಾರದ ಮಾರ್ಗದಲ್ಲಿ ದೃಢ ಹೆಜ್ಜೆ ಇಡುವುದು ಭಾರತೀಯರಿಗೆ ಸ್ವಭಾವತಃ ಕರಗತವಾಗಿಬಿಟ್ಟಿದೆ. ಹಾಗಾಗಿಯೇ, ಕರೊನಾ ಹೊತ್ತಲ್ಲೂ ಅದೇ ಕಳಕಳಿ ತೋರಲಾಗಿದೆ. ಸರ್ಕಾರದ ಕೆಲ ಕ್ರಮಗಳಿಂದ ಜನಸಾಮಾನ್ಯರ ದೈನಂದಿನ ಜೀವನಕ್ಕೆ ಹಲವು ಅನಾನುಕೂಲಗಳಾಗಿದ್ದರೂ; ಇಂದಿನ ಸ್ಥಿತಿಯಲ್ಲಿ ಅದು ಅನಿವಾರ್ಯ ಕ್ರಮ ಎಂಬುದನ್ನು ಒಪ್ಪಿಕೊಂಡು ಸಾಮಾನ್ಯ ಜನರು ಕೂಡ ಸಹಕಾರ ನೀಡಿದ್ದಾರೆ. ಮೋದಿಯವರ ಮಾತಿಗೆ ಸಾರ್ಕ್ ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿದ್ದು, ಸೀಮಿತ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಮತ್ತು ಕರೊನಾ ಪರಿಸ್ಥಿತಿಯನ್ನು ಒಟ್ಟಾಗಿ ಎದುರಿಸುವ ಬದ್ಧತೆ ವ್ಯಕ್ತಪಡಿಸಿವೆ.
ಸಾರ್ಕ್ ರಾಷ್ಟ್ರಗಳಲ್ಲಿ ಈವರೆಗೆ ನೂರಾರು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ, ಸಾರ್ಕ್ ಪ್ರದೇಶ ವಿಶ್ವ ಜನಸಂಖ್ಯೆಯ ಐದನೇ ಒಂದು ಭಾಗ ಹೊಂದಿರುವುದರಿಂದ ಹೆಚ್ಚು ಜಾಗರೂಕವಾಗಿರುವುದು, ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತದ ನೇತೃತ್ವ ಮತ್ತು ಉಳಿದ ರಾಷ್ಟ್ರಗಳ ಸಹಕಾರ ಸ್ವಾಗತಾರ್ಹ. ಒಟ್ಟಾರೆ, ಸದ್ಯದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿ, ಗೆಲ್ಲುವುದು ಅನಿವಾರ್ಯವಾಗಿದ್ದು, ಆ ನಿಟ್ಟಿನಲ್ಲಿ ಒಟ್ಟಿಗೆ ಸಾಗಬೇಕಿದೆ.