ಗುಂಡ್ಲುಪೇಟೆ : ತಾಲೂಕಿನ ಕೃಷಿಕರಿಗೆ ಸಾವಯವ ಕೃಷಿ ಮತ್ತು ಗೋತಳಿ ಸಂರಕ್ಷಣೆಯ ಬಗ್ಗೆ ಸೆ.8ರಂದು ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಕೆ.ಎಲ್.ಮಹದೇವಸ್ವಾಮಿ ಹೇಳಿದರು.
ಈಗಾಗಲೇ ಮಿತಿ ಮೀರಿದ ರಾಸಾಯನಿಕ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಳಾಗಿದ್ದು ಭೂ ಫಲವತ್ತತೆ ನಾಶವಾಗಿದೆ. ಆದ್ದರಿಂದ ರಾಸಾಯನಿಕಮುಕ್ತ ಬೆಳೆ ಬೆಳೆದು ಸಮಾಜದ ಉತ್ತಮ ಆರೋಗ್ಯ ಕಾಪಾಡುವ ಅಗತ್ಯ ಹೆಚ್ಚಾಗಿದೆ. ಆದ್ದರಿಂದ ಎಲ್ಲರೂ ಸಾವಯವ ಕೃಷಿಗೆ ಮರಳುವುದರಿಂದ ಭೂಮಿಯ ಫಲವತ್ತತೆ ನಾಶ ತಡೆಗಟ್ಟಲು ದೇಸಿ ಹಸುಗಳ ಸಾಕಣೆ ಮತ್ತು ನೈಸರ್ಗಿಕ ಕೃಷಿಗೆ ಒತ್ತುಕೊಟ್ಟು ಆರೋಗ್ಯವಂತ ಮತ್ತು ಸುಭಿಕ್ಷ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯು ಸೋಮವಾರ ಬೆಳಗ್ಗೆ 9 ಗಂಟೆಗೆ ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಶ್ರೀ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಂದ ನೈಸರ್ಗಿಕ ಕೃಷಿ ಮತ್ತು ನಾಟಿಹಸುಗಳ ಸಾಕಣೆ ಮಹತ್ವದ ಬಗ್ಗೆ ಕಾರ್ಯಾಗಾರ ಆಯೋಜಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿಯಲ್ಲಿ ಆಸಕ್ತರಾಗಿರುವ ತಾಲೂಕಿನ ಪಡಗೂರು ಪಡಗೂರು ಅಡವಿಮಠದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ, ಮೂಡಗೂರು ಮಠದ ಶ್ರೀ ಇಮ್ಮಡಿ ಉದ್ದಾನಸ್ವಾಮೀಜಿ, ದೇಪಾಪುರ ಮಠದ ಶ್ರೀ ಬಸವಣ್ಣಸ್ವಾಮೀಜಿ ಹಾಗೂ ಕಬ್ಬಹಳ್ಳಿ ಮಠದ ಶ್ರೀ ಗುರುಸಿದ್ದಸ್ವಾಮೀಜಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸಾವಯವ ಮತ್ತು ರಾಸಾಯನಿಕಮುಕ್ತ ಕೃಷಿಗೆ ಪೂರಕ ಮಾಹಿತಿ ಅಗತ್ಯ ವಸ್ತು ದೊರಕಿಸಲು ಸಾವಯವ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಆದ್ದರಿಂದ ನಮ್ಮ ಸಮಾಜದ ಒಳಿತಿಗೆ, ವಿಷಮುಕ್ತ ಭೂಮಿ ಮತ್ತು ವಿಷಮುಕ್ತ ಆಹಾರ ಎಂಬ ಘೋಷ ವಾಕ್ಯದೊಂದಿಗೆ ತಾಲೂಕಿನ ಎಲ್ಲ ರೈತರು ಭಾಗವಹಿಸಬೇಕು. ಮಧ್ಯಾಹ್ನ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಸಿಎಸ್‌ಪಿ ಶಿವಪ್ರಕಾಶ್(ರವಿ), ಜಿಲ್ಲಾ ಉಪಾಧ್ಯಕ್ಷ ನಾಗೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ದೊಡ್ಡತುಪ್ಪೂರು ಶಶಿಕುಮಾರ್, ವೀರಭದ್ರಸ್ವಾಮಿ, ಪ್ರಕಾಶ್, ಸ್ವಾಮಿ, ಶಾಂತಪ್ಪ, ಬಸವಣ್ಣ ಇದ್ದರು.