3 ಸಾವಿರ ಕೋಟಿ ಹೊರೆ ತಪ್ಪಿಸಲು ‘ಸುಗ್ರೀವಾಜ್ಞೆ’ ಗುರಾಣಿ

Vidhanasoudha
Published on

ಬೆಂಗಳೂರು: ಬೆಂಗಳೂರಿನಲ್ಲಿರುವ ಮೈಸೂರು ಅರಸರಿಗೆ ಸೇರಿದ ಅರಮನೆ ಮೈದಾನದ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಸುಪ್ರಿಂಕೋರ್ಟ್ ಆದೇಶದಂತೆ ಸ್ವತ್ತಿನ ಮಾಲಿಕರಿಗೆ ಮೂರು ಸಾವಿರ ಕೋಟಿ ರೂ. ಮೌಲ್ಯದ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ಕೊಡುವುದನ್ನು ತಪ್ಪಿಸಿಕೊಳ್ಳಲು ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದೆ.

ಶುಕ್ರವಾರ ನಡೆದ ತುರ್ತು ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ತರುವ ನಿರ್ಣಯ ಮಾಡಿದ್ದು, ತಕ್ಷಣವೇ ಅಧಿಕಾರಿಗಳು ರಾಜಭವನಕ್ಕೆ ತೆರಳಿ ಸಂಪುಟ ಸಭೆಯ ನಿರ್ಣಯವನ್ನು ರಾಜ್ಯಪಾಲರಿಗೆ ತಲುಪಿಸಿದರು.

ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ, ಬೆಂಗಳೂರು ಅರಮನೆ (ಅರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ಕ್ಕೆ ಸಂಬಂಧಪಟ್ಟ ಸಿವಿಲ್ ಅಪೀಲುಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿಯಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ವಿತರಿಸಿದ್ದಲ್ಲಿ ರಾಜ್ಯದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಈ ಕಾರಣಕ್ಕೆ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದರು.

ಬೆಂಗಳೂರು ಅರಮನೆ ಮೈದಾನದ ಒಟ್ಟು 472 ಎಕರೆ 16 ಗುಂಟೆ ಜಾಗಕ್ಕೆ ಬೆಂಗಳೂರು ಅರಮನೆ (ಅರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ ಕಂಡಿಕೆ 8 ಮತ್ತು 9ರಲ್ಲಿ ಪರಿಹಾರವಾಗಿ 11 ಕೋಟಿ ರೂ. ನಿಗದಿಗೊಳಿಸಲಾಗಿತ್ತು. ಈ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ರಾಜ್ಯ ಉಚ್ಛ ನ್ಯಾಯಾಲಯವು ಎತ್ತಿಹಿಡಿದಿತ್ತು. ಬಳಿಕ ಅರಮನೆ ಉತ್ತರಾಧಿಕಾರಿಯವರು ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಆದರೆ, 1996ರ ಈ ಕಾಯ್ದೆಗೆ ಸರ್ವೋಚ್ಛ ನ್ಯಾಯಾಲಯದಿಂದ ಯಾವುದೇ ತಡೆಯಾಜ್ಞೆ ಇಲ್ಲ. ಇಷ್ಟರ ನಡುವೆ 2024ರ ಡಿಸೆಂಬರ್ 10ರಂದು ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಮತ್ತು ಇತರೆ ಪ್ರಕರಣಗಳಲ್ಲಿ ಕರ್ನಾಟಕ ಸ್ಟಾಂಪ್ ಕಾಯ್ದೆಯ ಸೆಕ್ಷನ್ 45ಬಿ ಗೆ ಅನುಗುಣವಾಗಿ ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಹ ಪ್ರದೇಶಗಳಿಗೆ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಬೆಂಗಳೂರು ಅರಮನೆ ಜಾಗವನ್ನು ಮೌಲ್ಯೀಕರಿಸಿ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ನೀಡುವಂತೆ ಕೋರ್ಟ್ ನಿರ್ದೇಶಿಸಿತು.

ಕೇವಲ 2 ಕಿ.ಮೀ ರಸ್ತೆ ಅಭಿವೃದ್ಧಿಗೆ 3014.00 ಕೋಟಿ ರೂ. ಅಂದರೆ ಪ್ರತಿ ಎಕರೆಗೆ 200 ಕೋಟಿ ರೂ. ಪರಿಹಾರ ನೀಡಿದರೆ ಆರ್ಥಿಕ ಪರಿಸ್ಥಿತಿ ಗಂಡಾಂತರ ಉಂಟಾಗಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗದೇ ಪ್ರಗತಿ ವಿರೋಧವಾದ ಕ್ರಮವಾಗುತ್ತದೆ ಎಂದು 1996ರ ಕಾಯ್ದೆಗೆ ಪೂರಕವಾದ ಈ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಮಂಡಿಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net