ಎಸ್ಸಿ-ಎಸ್ಟಿ ಮೀಸಲು ಹೆಚ್ಚಳಕ್ಕೆ ಸುಗ್ರೀವಾಜ್ಞೆ: ರಾಜ್ಯ ಸರ್ಕಾರದ ಮಾಹಿತಿ; ಕಾನೂನು ತೊಡಕಾಗದಂತೆ ಕ್ರಮ

Published on

ಬೆಂಗಳೂರು: ಶಿಕ್ಷಣ, ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ಪ್ರಮಾಣ ಹೆಚ್ಚಳ ನಿರ್ಧಾರದ ಫಲ ಶೀಘ್ರವೇ ಸಮುದಾಯಗಳಿಗೆ ಲಭಿಸಲಿದೆ. ಎಸ್​ಸಿಗೆ ಶೇ.15 ರಿಂದ 17 ಹಾಗೂ ಎಸ್​ಟಿಗೆ ಶೇ.3 ರಿಂದ 7ಕ್ಕೆ ಮೀಸಲು ಪ್ರಮಾಣ ಹೆಚ್ಚಿಸಲು ಸರ್ಕಾರ ಈಗಾಗಲೇ ತೀರ್ವನಿಸಿದೆ. ವಿಧಾನ ಮಂಡಲದ ಬೆಳಗಾವಿ ಅಧಿವೇಶನದವರೆಗೂ ಕಾಯದೆ ಸುಗ್ರೀವಾಜ್ಞೆ ಮೂಲಕ 2-3 ದಿನಗಳಲ್ಲಿ ಜಾರಿಗೊಳಿಸಿ, ಸಮುದಾಯಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ ಎಂದು ಸರ್ಕಾರ ತಿಳಿಸಿದೆ.

ಅಡಚಣೆ ನಿವಾರಣೆ: ಮೀಸಲು ಪ್ರಮಾಣ ಏರಿಕೆಗೆ ಕಾನೂನು ಅಡಚಣೆ ಉಂಟಾಗದಂತೆ ಕ್ರಮವಹಿಸಿದ್ದು, ಕಾನೂನು ಇಲಾಖೆ ಹಾಗೂ ತಜ್ಞರ ಜತೆಗೆ ಸಮಾಲೋಚಿಸಿ ಸಂಬಂಧಿಸಿದ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ. ಸುಗ್ರೀವಾಜ್ಞೆಯ ಪೂರ್ವ ಪ್ರಕ್ರಿಯೆಗಳು ಪೂರ್ಣಗೊಂಡು, ರಾಜ್ಯಪತ್ರದಲ್ಲಿ ಪ್ರಕಟವಾದ ಬೆನ್ನಲ್ಲೇ ಮೀಸಲು ಏರಿಕೆ ಅನುಷ್ಠಾನವಾಗಲಿದೆ.

ಮೀಸಲು ಸೌಲಭ್ಯ ಏರಿಕೆಯನ್ನು ಸಂವಿಧಾನದ ಷೆಡ್ಯೂಲ್ 9ಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೌಲಭ್ಯ ಕಲ್ಪಿಸುತ್ತಿದ್ದು, ಕಾನೂನು ತೊಡಕು ಎದುರಾಗದು ಎಂಬ ವಿಶ್ವಾಸವನ್ನು ಸರ್ಕಾರದ ಮೂಲಗಳು ವ್ಯಕ್ತಪಡಿಸಿವೆ.

ಅ.20ರ ಸಂಪುಟ ಸಭೆಗೆ ಪ್ರಸ್ತಾವನೆ?: ಸುಗ್ರೀವಾಜ್ಞೆ ಪ್ರಸ್ತಾವನೆ ಅ.20ರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಗಳಿದ್ದು, ಕಾನೂನು ಇಲಾಖೆ ಜತೆಗೆ ಸಮಾಜ ಕಲ್ಯಾಣ ಇಲಾಖೆ ಸಮಾಲೋಚಿಸಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಪ್ರಸ್ತಾವನೆಗೆ ಸಮ್ಮತಿ

ಕಲಬುರಗಿ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ನಿರ್ಧರಿಸಿರುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಅದರ ಲಾಭವನ್ನು ಶೋಷಿತ ಸಮುದಾಯಗಳ ಜನರು ನಿರಾತಂಕವಾಗಿ ಪಡೆಯಬಹá-ದಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಹೇಳಿದ್ದಾರೆ. ಮೀಸಲಾತಿ ಶೇ.50ಕ್ಕಿಂತ ಹೆಚ್ಚಾಗಬಾರದು. ಆದರೆ, ಎರಡ್ಮೂರು ರಾಜ್ಯಗಳಲ್ಲಿ ಶೇ.69 ಮೀಸಲಾತಿ ನೀಡಲಾಗಿದೆ. ಷೆಡ್ಯೂಲ್-9ರಡಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಅವಕಾಶ ಇರುವುದರಿಂದ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಅದರಡಿ ಸೇರಿಸಿ ಅನುಮೋದನೆ ನೀಡಲಾಗುವುದು ಎಂದರು.

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ಒಳಮೀಸಲಾತಿ ಕಲ್ಪಿಸುವ ಕುರಿತು ಸಿದ್ದರಾಮಯ್ಯ ಸಿಎಂ ಅಗಿದ್ದಾಗ ಚಕಾರವೆತ್ತಲಿಲ್ಲ. ಸಂಪುಟದ ಮುಂದೆ ಬಂದ ಪ್ರಸ್ತಾವನೆ ವಿರೋಧಿಸಿದವರು ಯಾರು ಎಂದು ಕಲಬುರಗಿಯಲ್ಲಿ ನಿಂತು ಹೆಸರು ಬೇರೆ ಕೇಳಬೇಕೇ? ಈಗ ಅವರೆಲ್ಲ ಇಲ್ಲದ್ದನ್ನು ಮಾತನಾಡುತ್ತಾರೆ. | ಎ. ನಾರಾಯಣ ಸ್ವಾಮಿ ಕೇಂದ್ರ ಸಾಮಾಜಿಕ ನ್ಯಾಯ ಸಚಿವ

ಆಯೋಗ ರಚಿಸಲಿ: ವೀರಶೈವ ಜಂಗಮರು, ಬೇಡ ಜಂಗಮರು ಪರಿಶಿಷ್ಟ ಜಾತಿ, ಪಂಗಡ ಪ್ರಮಾಣಪತ್ರಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿರುವುದರಿಂದ ಸತ್ಯಾಸತ್ಯತೆ ಅರಿಯುವುದರ ಜತೆಗೆ ಅಧ್ಯಯನ ನಡೆಸಲು ಅಗತ್ಯವೆನಿಸಿದರೆ ಆಯೋಗ ರಚನೆ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ನಾರಾಯಣಸ್ವಾಮಿ ಸಲಹೆ ನೀಡಿದರು.

ಬೇಡ ಜಂಗಮರು ಮಾಂಸಾಹಾರಿಗಳು. ಬೇಡ ಜಂಗಮ ಎಂದು ಇತರರು ಮೀಸಲಾತಿ ಕೇಳುತ್ತಿರುವ ಕುರಿತು ಕಾರಣ ಕೇಳಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಎಸ್ಸಿ ಆಯೋಗ ನೋಟಿಸ್ ನೀಡಿದೆ. ಬೇಡ ಜಂಗಮರ ಸಂಖ್ಯೆ ರಾಜ್ಯದಲ್ಲಿ ಬೆರಳೆಣಿಕೆಯಷ್ಟಿತ್ತು. ಆದರೀಗ ಅಂಕಿ-ಸಂಖ್ಯೆ ಕೇಳಿದರೆ 80-90 ಸಾವಿರ ಇದೆ ಎನ್ನುತ್ತಾರೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net