ವೆಜ್ ಬಿರಿಯಾನಿ ಆರ್ಡರ್ ಮಾಡಿದ್ರೆ ಸಿಕಿದ್ದು ಚಿಕನ್! ಬೆಂಗಳೂರು ಏರ್‌ಪೋರ್ಟ್ ರೆಸ್ಟೋರೆಂಟ್‌ನಲ್ಲಿ ಭಾರಿ ಎಡವಟ್ಟು | Bengaluru Airport Veg Biryani

Bengaluru Airport Taste of India Restaurant Veg Biryani Chicken Controversy
ಬಿಲ್‌ನಲ್ಲಿ ವೆಜ್, ಪ್ಲೇಟ್‌ನಲ್ಲಿ ಚಿಕನ್! ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಘಟನೆ
Published on: 

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಗೆ ತೀವ್ರ ಆಘಾತಕಾರಿ ಅನುಭವವಾಗಿದೆ. ಸಂಪೂರ್ಣ ಸಸ್ಯಾಹಾರಿ ಕುಟುಂಬವೊಂದಕ್ಕೆ ವೆಜ್ ಬಿರಿಯಾನಿ ಬದಲಿಗೆ ಚಿಕನ್ ಬಿರಿಯಾನಿ ನೀಡಿದ ಘಟನೆ ಟರ್ಮಿನಲ್ 1ನಲ್ಲಿ ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಗೇಟ್ 16–17ರ ಬಳಿ ಇರುವ 'ಟೇಸ್ಟ್ ಆಫ್ ಇಂಡಿಯಾ' (Taste of India) ರೆಸ್ಟೋರೆಂಟ್‌ಗೆ ಪಿಯೂಷ್ ಅಗ್ರವಾಲ್ ಎಂಬ ಪ್ರಯಾಣಿಕರು ತಮ್ಮ ಕುಟುಂಬದೊಂದಿಗೆ ತೆರಳಿದ್ದರು. ಸಂಪೂರ್ಣ ಸಸ್ಯಾಹಾರಿಯಾದ ಈ ಕುಟುಂಬವು ವೆಜ್ ಬಿರಿಯಾನಿ ಆರ್ಡರ್ ಮಾಡಿತ್ತು. ರೆಸ್ಟೋರೆಂಟ್‌ ನೀಡಿದ ಬಿಲ್‌ನಲ್ಲೂ 'ವೆಜ್ ಬಿರಿಯಾನಿ' ಎಂದೇ ನಮೂದಿಸಲಾಗಿತ್ತು.

ವೆಜ್​ ಬದಲು ಚಿಕನ್ ಬಿರಿಯಾನಿ

ಆದರೆ, ಸಿಬ್ಬಂದಿ ವೆಜ್​ ಬಿರಿಯಾನಿ ಬದಲು ಚಿಕನ್ ಬಿರಿಯಾನಿ ತಂದುಕೊಟ್ಟಿದ್ದಾರೆ. ಅದನ್ನು ವೆಜ್ ಬಿರಿಯಾನಿ ಎಂದೇ ಭಾವಿಸಿದ ಕುಟುಂಬದ ಸದಸ್ಯರು ಮತ್ತು ಮಕ್ಕಳು ಸೇವಿಸಿದ್ದಾರೆ. ತಿಂದ ನಂತರ ಅದರಲ್ಲಿ ಚಿಕನ್ ತುಂಡುಗಳು ಇರುವುದು ಕಂಡುಬಂದಿದ್ದು, ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ತಮ್ಮ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಪ್ಪು ಒಪ್ಪಿಕೊಂಡ ಸಿಬ್ಬಂದಿ

ಘಟನೆ ನಡೆದ ತಕ್ಷಣ ಗ್ರಾಹಕ ಪಿಯೂಷ್ ಅಗ್ರವಾಲ್ ಅವರು ರೆಸ್ಟೋರೆಂಟ್‌ನ ಮ್ಯಾನೇಜರ್ ಹಾಗೂ ಚೆಫ್ ಜತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಿಬ್ಬಂದಿ ತಾವೇ ತಪ್ಪಾಗಿ ವೆಜ್ ಬದಲು ಚಿಕನ್ ಬಿರಿಯಾನಿ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಇಡೀ ಸಂಭಾಷಣೆಯ ವಿಡಿಯೋವನ್ನು ಪಿಯೂಷ್ ತಮ್ಮ ಎಕ್ಸ್​ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಏನಾಗ್ತಿದೆ ಪೋಲೆಂಡ್​ನಲ್ಲಿ? ಅತ್ಯುನ್ನತ ಕೋರ್ಟ್​ನ ಅಧ್ಯಕ್ಷರು ಸಸ್ಪೆಂಡ್​! ರಾಷ್ಟ್ರಪತಿಗಳ ವಿದೇಶಿ ಪ್ರವಾಸ ರದ್ದು; ಬೀದಿಗಿಳಿದ ಪ್ರತಿಭಟನಾಕಾರರು | Poland

ವಿವಿಧ ಪ್ರಾಧಿಕಾರಗಳಿಗೆ ದೂರು

ರೆಸ್ಟೋರೆಂಟ್‌ನ ಈ ನಿರ್ಲಕ್ಷ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಹಕರು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಬೆಂಗಳೂರು ಏರ್‌ಪೋರ್ಟ್ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರಕ್ಕೆ ಅಧಿಕೃತ ದೂರು ನೀಡಿದ್ದಾರೆ.