ವಾರ್ಸಾ: ಪೋಲೆಂಡ್‌ನ ರಾಜಕೀಯ ಮತ್ತು ನ್ಯಾಯಾಂಗ ವಲಯದಲ್ಲಿ ತಡರಾತ್ರಿ ಭಾರಿ ಹೈಡ್ರಾಮಾ ಸೃಷ್ಟಿಯಾಗಿದೆ. ನಿನ್ನೆ (ಅ.30) ಸಂಜೆ 6 ಗಂಟೆಗೆ ಪೋಲೆಂಡ್‌ನ ಸಂವಿಧಾನಿಕ ಪೀಠದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಒಂದು ಸಣ್ಣ ಪೋಸ್ಟ್ ಇದೀಗ ದೇಶಾದ್ಯಂತ ಸಂಚಲನ ಮೂಡಿಸಿದೆ.
ಅತ್ಯುನ್ನತ ನ್ಯಾಯಾಲಯದ ಪೀಠದ ಅಧ್ಯಕ್ಷ ಬೊಗ್ಡಾನ್ ಸ್ವಿಜ್ಕೋವ್ಸ್ಕಿ ಮತ್ತು ಉಪಾಧ್ಯಕ್ಷರನ್ನು ಅಮಾನತುಗೊಳಿಸಲಾಗಿದೆ ಎಂದು ಪೀಠದ ಹಿರಿಯ ನ್ಯಾಯಮೂರ್ತಿ ಅನ್ನಾ ಕೊರ್ವಿನ್-ಪಿಯೋಟ್ರೋವ್ಸ್ಕಾ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ.
ದೇಶದಲ್ಲಿ ಈ ಉದ್ವಿಗ್ನತೆ ಸೃಷ್ಟಿಯಾಗುತ್ತಿದ್ದಂತೆಯೇ, ಸೆನೆಗಲ್‌ಗೆ ಅಧಿಕೃತ ಭೇಟಿಯಲ್ಲಿದ್ದ ಪೋಲೆಂಡ್ ರಾಷ್ಟ್ರಪತಿ ಕ್ಯಾರೋಲ್ ನಾವ್ರೊಸ್ಕಿ (Karol Nawrocki) ತಮ್ಮ ವಿಮಾನವನ್ನು ಮಾರ್ಗಮಧ್ಯದಲ್ಲೇ ವಾಪಸ್ ತಿರುಗಿಸುವಂತೆ ಹೇಳಿ, ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಇತ್ತ ಘಟನೆ ತಿಳಿಯುತ್ತಿದ್ದಂತೆಯೇ ನೂರಾರು ಬಲಪಂಥೀಯ ಕಾರ್ಯಕರ್ತರು ನ್ಯಾಯಾಲಯದ ಎದುರು ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅಮಾನತು ಪ್ರಕ್ರಿಯೆಯು ಸಂವಿಧಾನಬಾಹಿರ ಮತ್ತು ಕಾನೂನುಬದ್ಧವಾಗಿ ವಿರುದ್ಧ ನಿರ್ಧಾರ ಎಂದು ಸಂವಿಧಾನಿಕ ಪೀಠವು ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ಪ್ರಧಾನಿ ಡೊನಾಲ್ಡ್ ಟಸ್ಕ್ ನೇತೃತ್ವದ ಸರ್ಕಾರವು, ಸಂವಿಧಾನಾತ್ಮಕ ದಂಗೆ ಎಸಗುತ್ತಿದೆ ಎಂದು ಕೋರ್ಟ್ ನೇರ ಆರೋಪ ಮಾಡಿದೆ. ಪ್ರತಿಭಟನೆ ತೀವ್ರಗೊಂಡು, ಪೊಲೀಸರು ಹಾಗೂ ವಿರೋಧ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದ್ದು, ಅನೇಕರನ್ನು ಬಂಧಿಸಲಾಗಿದೆ.
ಪೋಲೆಂಡ್‌ನ ಅತ್ಯುನ್ನತ ನ್ಯಾಯಾಲಯವಾದ ಸಂವಿಧಾನಿಕ ಪೀಠವು ದೇಶದ ಕಾನೂನುಗಳು ಮತ್ತು ಸರ್ಕಾರದ ನಿರ್ಧಾರಗಳು ಸಂವಿಧಾನಕ್ಕೆ ಬದ್ಧವಾಗಿವೆಯೇ ಎಂಬುದನ್ನು ನಿರ್ಧರಿಸುತ್ತದೆ. ಪ್ರಸ್ತುತ, ಯುರೋಪಿಯನ್ ಯೂನಿಯನ್ (EU) ಪರ ನಿಲುವು ಹೊಂದಿರುವ ಪ್ರಧಾನಿ ಡೊನಾಲ್ಡ್ ಟಸ್ಕ್ ನೇತೃತ್ವದ ಸರ್ಕಾರ ಮತ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಬಲಪಂಥೀಯ ರಾಷ್ಟ್ರಪತಿ ಕ್ಯಾರೋಲ್ ನಾವ್ರೊಸ್ಕಿ ಅವರ ನಡುವೆ ನ್ಯಾಯಾಂಗದ ನಿಯಂತ್ರಣಕ್ಕಾಗಿ ನಿಕಟ ಸ್ಪರ್ಧೆ ಭುಗಿಲೆದ್ದಿದೆ.
ಹಿಂದಿನ ಆಡಳಿತಾರೂಢ 'ಲಾ ಅಂಡ್ ಜಸ್ಟಿಸ್' (PiS) ಪಕ್ಷವು ತನ್ನ ರಾಜಕೀಯ ಹಿತಾಸಕ್ತಿಗೆ ತಕ್ಕಂತೆ ನಿಯಮಗಳನ್ನು ಗಾಳಿಗೆ ತೂರಿ ನ್ಯಾಯಾಧೀಶರನ್ನು ನೇಮಕ ಮಾಡಿದೆ ಎಂದು ಟಸ್ಕ್ ಸರ್ಕಾರ ಆರೋಪಿಸುತ್ತಿದೆ. ಪ್ರಸ್ತುತ, ಹೊಸ ಸರ್ಕಾರವು ಆ ಅವಧಿಯಲ್ಲಿ ನೇಮಕಗೊಂಡ ನ್ಯಾಯಾಧೀಶರನ್ನು ಹುದ್ದೆಯಿಂದ ತೆಗೆದುಹಾಕಲು ಮುಂದಾಗಿದ್ದು, ಈ ರಾಜಕೀಯ ಸಂಘರ್ಷ ಈಗ ಬೀದಿಗೆ ಬಂದಿದೆ ಎಂದು ಅಂತಾರಾಷ್ಟ್ರೀಯ ವರದಿಗಳು ತಿಳಿಸಿವೆ,(ಏಜೆನ್ಸೀಸ್).