

ಬೆಂಗಳೂರು ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ‘ಬ್ರಹ್ಮಶ್ರೀ ನಾರಾಯಣಗುರು ಅವರ 170ನೇ ಜಯಂತಿ’ ಆಚರಣೆಯಲ್ಲಿ ಮಾತನಾಡಿದ ಅವರು, ನಿಗಮವನ್ನು ಈಗಾಗಲೇ ರಚನೆ ಮಾಡಲಾಗಿದೆ. ಆದೇಶ ಮಾತ್ರ ಬಾಕಿ ಇದ್ದು, ಶೀಘ್ರವೇ ಹೊರಡಿಸಲಾಗುವುದು ಎಂದು ಹೇಳಿದರು.
ಅದೇ ರೀತಿ ಸಮುದಾಯದ ಬೇಡಿಕೆಯಾಗಿರುವ ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 10 ಎಕರೆ ಜಾಗ, ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ 30 ಕೋಟಿ ರೂ. ಅನುದಾನ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ನೀಡಲಾಗುವುದು. ಕೆಪಿಎಸ್ಸಿ ಸದಸ್ಯತ್ವ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಖಾಲಿಯಾದ ನಂತರ ಅದನ್ನು ಭರ್ತಿ ಮಾಡುವ ವೇಳೆಗೆ ಈಡಿಗ ಸಮುದಾಯಕ್ಕೆ ಆದ್ಯತೆ ನೀಡಲಾಗುವುದು ಎಂಬ ಭರವಸೆ ನೀಡಿದರು.
ವಿದ್ಯಾವಂತ, ಮನುಷ್ಯರಾಗಿ:
ನಾರಾಯಣಗುರುಗಳ ಆದರ್ಶವನ್ನು ನಿಜವಾಗಿಯೂ ಪಾಲಿಸುವವರು ವಿದ್ಯಾವಂತರಾಗಬೇಕು, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು ಮತ್ತು ಮನುಷ್ಯರಾಗಿ ಬದುಕಬೇಕು. ಕಂದಾಚಾರ, ಮೌಢ್ಯಗಳಿಂದ ದೂರವಿರುವಂತೆ ಹೇಳಿದ್ದಾರೆ. ಅದಕ್ಕಾಗಿ ನಾರಾಯಣಗುರುಗಳು ನನಗೆ ಇಷ್ಟ. ಬಸವಾದಿ ಶರಣರ ಸಿದ್ಧಾಂತ ಕೂಡ ಇದೇ ಆಗಿತ್ತು ಎಂದರು.
ಶಿಕ್ಷಣದಿಂದ ಮಾತ್ರ ಸ್ವತಂತ್ರರಾಗಿರಲು ಸಾಧ್ಯ. ಸ್ವತಂತ್ರ ಆಲೋಚನೆ, ಚಿಂತನೆ ಮಾಡಲು ಸಾಧ್ಯವಾಗಲಿದೆ. ಆದರೆ, ಕೆಲವರು ವಿದ್ಯಾವಂತರಾಗಿದ್ದರೂ ಇಂದಿಗೂ ಗುಲಾಮರಾಗಿಯೇ ಮುಂದುವರಿಯುತ್ತಿದ್ದಾರೆ. ವಿದ್ಯೆ ಕಲಿಯಲು ಯಾವುದೇ ಜಾತಿ ಕೂಡ ಅಡ್ಡಿಯಾಗಲ್ಲ. ಇದಕ್ಕೆ ಸಂವಿಧಾನ ರಚಿಸಿದ ಅಂಬೇಡ್ಕರ್, ರಾಮಾಯಣದ ವಾಲ್ಮೀಕಿ, ಮಹಾಭಾರತದ ವ್ಯಾಸ, ಶಾಕುಂತಲಾ ನಾಟಕ ರಚಿಸಿದ ಕಾಳಿದಾಸ ಮತ್ತು ಅಸ್ಪೃಶ್ಯತೆ ವಿರುದ್ಧ ಹೋರಾಡಿದ ನಾರಾಯಣಗುರುಗಳೇ ಸಾಕ್ಷಿ ಎಂದು ಹೇಳಿದರು.
ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಹಿಂದಿನ ಸರ್ಕಾರ ನಿಗಮಗಳನ್ನು ರಚನೆ ಮಾಡಿದರು. ಆದರೆ, ಆದೇಶ ಹೊರಡಿಸಲಿಲ್ಲ. ಕೂಡಲೇ ಆದೇಶ ಹೊರಡಿಸಬೇಕು. ಜಿಲ್ಲೆ ಮತ್ತು ತಾಲ್ಲೂಕು ಹಂತದಲ್ಲಿ ಆಚರಿಸುತ್ತಿರುವ ನಾರಾಯಣಗುರುಗಳ ಜಯಂತಿಯನ್ನು ಶಾಲೆ-ಕಾಲೇಜುಗಳಲ್ಲಿಯೂ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸುವಂತೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರಿನ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರು ಗರ್ಥಿಕೆರೆಯ ನಾರಾಯಣ ಗುರು ಮಹಾ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ . ಎಂ.ತಿಮ್ಮೇಗೌಡ, ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್, ಪ್ರವಚನ ನೀಡಿದ ಡಾ. ಗಣೇಶ್ ಅಮೀನ್ ಸಂಕಮಾರ್ ಹಾಗೂ ಇಲಾಖೆಯ ನಿರ್ದೇಶಕಿ ಡಾ. ಧರಣಿ ದೇವಿ ಮಾಲಗತ್ತಿ ಉಪಸ್ಥಿತರಿದ್ದರು.