

ಬೆಂಗಳೂರು: ಡಿಪ್ಲೊಮಾ ಪಿಯುಸಿಗೆ ತತ್ಸಮಾನವೋ ಅಲ್ಲವೋ ಎಂಬ ಗೊಂದಲಕ್ಕೆ ಸರ್ಕಾರವೇ ತೆರೆ ಎಳೆದಿದೆ. 3 ವರ್ಷದ ಡಿಪ್ಲೊಮಾ, ಐಟಿಐ ಹಾಗೂ ವೃತ್ತಿಶಿಕ್ಷಣ ಕೋರ್ಸ್ಗಳ (ಜೆಓಸಿ) ವಿದ್ಯಾರ್ಹತೆಯನ್ನೂ ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
ಡಿಪ್ಲೊಮಾ, ಜೆಓಸಿ, ಐಟಿಐ ವಿದ್ಯಾರ್ಹತೆಯನ್ನು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಿ, ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಲಿಖಿತ ಸೂಚನೆ ನೀಡಿದ್ದಾರೆ. ಎಲ್ಲ ಸರ್ಕಾರಿ ಹುದ್ದೆಗಳ ಆಯ್ಕೆಗೂ ಇದೇ ಮಾನದಂಡ ಅನ್ವಯಿಸುತ್ತದೆ.
ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಪಿಯುಸಿ ತತ್ಸಮಾನವಾಗಿರುತ್ತದೆ. 3 ವರ್ಷಗಳ ಡಿಪ್ಲೊಮಾ, ಜೆಓಸಿಯನ್ನು 2018, 2019, 2020ರ ಅಭ್ಯರ್ಥಿಗಳಿಗೆ ಹಾಗೂ 2015ಕ್ಕಿಂತ ಹಿಂದಿನಿಂದಲೂ ಪೂರ್ವಾನ್ವಯ ವಾಗುವಂತೆ ಪಿಯುಸಿ ತತ್ಸಮಾನತೆಯನ್ನು ಸರ್ಕಾರದ ಆದೇಶಗಳನ್ವಯ ನೀಡಬಹುದಾಗಿದೆ. ಐಟಿಐ ಅಭ್ಯರ್ಥಿಗಳು 2020-21ರಲ್ಲಿ ಪಿಯುಸಿ ಅಥವಾ ಎನ್ಐಒಎಸ್ (ಒಂದು ಭಾಷಾ ಕೋರ್ಸ್) ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಬಹುದಾಗಿದೆ.
2015ಕ್ಕಿಂತ ಮುಂಚೆ ಡಿಪ್ಲೊಮಾ ಪಡೆದ ಅಭ್ಯರ್ಥಿಗಳಿಗೆ ಕೆಪಿಎಸ್ಸಿ ವತಿಯಿಂದ ನಡೆಯುವ ಇಲಾಖೆ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ತೇರ್ಗಡೆ ಹೊಂದಬೇಕು ಎಂದು ಸೂಚಿಸಿರುವುದರಿಂದ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪಡೆದ 3 ವರ್ಷಗಳ ಡಿಪ್ಲೊಮಾ ಅಭ್ಯರ್ಥಿಗಳನ್ನು 2015ಕ್ಕಿಂತ ಹಿಂದಿನಿಂದಲೇ ಪೂರ್ವಾನ್ವಯವಾಗುವಂತೆ ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಬಹುದಾಗಿದೆ ಎಂದು ಒಳಾಡಳಿತ ಇಲಾಖೆ ಸ್ಪಷ್ಟಪಡಿಸಿದೆ.
ಕಾನ್ಸ್ಟೇಬಲ್ ಹುದ್ದೆಗೆ ಪಿಯುಸಿ ನಿಗದಿ: ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಪಿಯುಸಿ ಮತ್ತು ತತ್ಸಮಾನ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಈಗಾಗಲೆ ನೇಮಕಾತಿ ಹೊಂದಿ ಆದೇಶ ಪತ್ರದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಜೆಓಸಿ ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲು ಆದೇಶಿಸಿದೆ.
ಹುದ್ದೆ ಕೊಡಲು ನಿರಾಕರಿಸಿದ್ದ ಇಲಾಖೆ: ಕಾನ್ಸ್ಟೇಬಲ್ ಹುದ್ದೆಗೆ ನೇಮಕವಾಗಿದ್ದ ಕೆ.ಪಿ.ದೀಪ ಎಂಬುವರಿಗೆ ಆದೇಶ ಪತ್ರ ಕೊಡಲು ಇಲಾಖೆ ನಿರಾಕರಿಸಿತ್ತು. 3 ವರ್ಷದ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ ದೀಪ ಅವರನ್ನು ಪರಿಗಣಿಸಿರಲಿಲ್ಲ. ಕಾನ್ಸ್ಟೇಬಲ್ ಹುದ್ದೆಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆದ್ದರಿಂದ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ, ಪಿಯುಸಿಗೆ ತತ್ಸಮಾನವಾಗಿದ್ದು, ಪರಿಗಣಿಸುವಂತೆ ಡಿಜಿಪಿಗೆ ಸರ್ಕಾರ ಸೂಚನೆ ಕೊಟ್ಟಿದೆ.