ಕೆಪಿಸಿಎಲ್ ಉದ್ಯೋಗ ಕಡಿತ ವರದಿಗೆ ವಿರೋಧ | Union outrage

K P C E U
Published on

ಬೆಂಗಳೂರು: ಗರಿಷ್ಠ ಕಾರ್ಯಕ್ಷಮತೆ, ಕನಿಷ್ಠ ಮಾನವ ಬಳಕೆ, ಯಾಂತ್ರೀಕರಣ ಹೆಸರಿನಲ್ಲಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್)ವು ಗೊತ್ತು ಗುರಿಯಿಲ್ಲದ, ಅವೈಜ್ಞಾನಿಕವಾಗಿ ಹುದ್ದೆಗಳ ಕಡಿತದ ಉತ್ಸುಕತೆ ತೋರಿಸಿದೆ ಎಂದು ನಿಗಮದ ನೌಕರ, ಕಾರ್ಮಿಕರ ವಲಯ ತೀವ್ರವಾಗಿ ವಿರೋಧಿಸಿವೆ.

ಮೆಗಾವಾಟ್, ಮಾನವ ಅನುಪಾತ 0.897 ರಿಂದ 0.611ಕ್ಕೆ ಇಳಿಸಲು, ಅಂದರೆ ಒಟ್ಟು ನೌಕರರ ಸಂಖ್ಯೆ 8166ರಿಂದ 5572ಕ್ಕೆ ಇಳಿಕೆಗೆ ಉದ್ದೇಶಿತ ನಿಗಮದ ಉನ್ನತಮಟ್ಟದ ಸಮಿತಿ ಎರಡನೇ ಆವೃತ್ತಿ (ಎಚ್‌ಎಲ್‌ಸಿ 2.0)ಯ ಕರಡು ವರದಿಗೆ ನೌಕರರು ವ್ಯಗ್ರರಾಗಿದ್ದಾರೆ.

ಪ್ರಸ್ತಾವಿತ ಕರಡು ವರದಿಗೆ ನಿಗಮದ ವಿವಿಧ ಸಂಘ-ಸಂಸ್ಥೆಗಳಿಗೆ ಆಕ್ಷೇಪಣೆ/ ಸಲಹೆ ಸಲ್ಲಿಸಲು ಸೆ.12ರವರೆಗೆ ಅವಕಾಶ ಕೊಟ್ಟಿದ್ದರೂ ಸಂಘಟನೆಗಳು ವಿರೋಧಿಸಿವೆ. ಸಮಗ್ರ, ನಿಖರವಾದ ವಿವರ ಒದಗಿಸಬೇಕು ಎಂದು ಪಟ್ಟು ಹಿಡಿದಿವೆ.

ನಿಗಮದ ಯೋಜನೆ, ಕಚೇರಿ ಹುದ್ದೆಗಳ ಪೂರ್ಣ ವಿವರವನ್ನು ನೀಡಿದ ನಂತರವೇ ಅಧಿಕೃತವಾಗಿ ಆಕ್ಷೇಪಣೆ ಸಲ್ಲಿಸಲು ಕೆಪಿಸಿಎಲ್ ನೌಕರರ ಸಂಘ ನಿರ್ಧರಿಸಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೆ.12ರಂದು ಪತ್ರ ಬರೆದಿದ್ದು, ಕಾರ್ಮಿಕ ವೃಂದ ಬಲದ ವಿವರ ನೀಡುವಂತೆ ಸಂಘಪ್ರಧಾನ ಕಾರ್ಯದರ್ಶಿ ಎಚ್.ಎಸ್. ಗೋವಿಂದರಾಜು ಕೋರಿದ್ದಾರೆ.

ವಿದ್ಯುತ್ ಸ್ಥಾವರಗಳ ಕಾರ್ಯಕ್ಷಮತೆಯಲ್ಲಿ ಕಾರ್ಮಿಕರ ಕೊಡುಗೆ ದೊಡ್ಡದಿದೆ. ಆದರೆ ಎಚ್‌ಎಲ್‌ಸಿ 2.0 ಕರಡು ವರದಿಯಲ್ಲಿ ನ್ಯೂನತೆಗಳು ಗಂಭೀರ, ಗಮನಾರ್ಹ ಸಂಖ್ಯೆಯಲ್ಲಿವೆ ಎಂದು ಸಂಘ ತನ್ನ ನಿಲುವು ಸಮರ್ಥಿಸಿಕೊಂಡಿದೆ.

ಆಕ್ಷೇಪಕ್ಕೆ ಕಾರಣ

ಮೆಗಾ, ಮಾನವ ಅನುಪಾತ ಕಡಿತವೇ ಪ್ರಧಾನವಾಗಿರುವ ಕರಡು ವರದಿಯಲ್ಲಿ ವಿವರಿಸಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಜಾಸ್ತಿ ಎನ್ನುವುದು ನಿಗಮದ ನೌಕರ ವಲಯದ ಆಕ್ಷೇಪಕ್ಕೆ ಮೊದಲ ಕಾರಣ.

ನಿಗಮದ ಮಾನವ ಸಂಪನ್ಮೂಲ ಬಲವು ಪಿರಮಿಡ್ ದಲ್ಲಿರಬೇಕು. ಕೆಲಸ ಮಾಡುವ ವೃಂದ ಬಲ ಹೆಚ್ಚು, ಸಾಂಸ್ಥಿಕ ವೃಂದ ಬಲ ಕಡಿಮೆಯಿರಬೇಕು.

ಸಿದ್ಧವಾದ ಕರಡು ಪ್ರಸ್ತಾವನೆಯಲ್ಲಿ ಕಾಲಾಳುಗಿಂತ ಮೇಲಾಳುಗಳ ಹೆಚ್ಚಿದ್ದಾರೆ. ಎಚ್‌ಎಲ್‌ಸಿ 1.0 ದಲ್ಲಿ ಒಟ್ಟೂ ಕಾರ್ಮಿಕ ವೃಂದದ ಬಲ 4426, ಕಾರ್ಪೋರೇಟ್ ಉದ್ಯೋಗಿಗಳ ಸಂಖ್ಯೆ 3736, ಈ ಅನುಪಾತವು 0.84 ಇತ್ತು.

ಎಚ್.ಎಲ್.ಸಿ. 2.0 ಪ್ರಕಾರ ಕಾರ್ಮಿಕ ವೃಂದ ಬಲ 2,900, ಕಾರ್ಪೋರೇಟ್ ವೃಂದ ಬಲ 2668, ಈ ಅನುಪಾತವು 0.92 ಆಗಿದೆ. ಆದರೆ ಪ್ರತಿ ಮೆಗಾ ವಾಟ್‌ಗೆ 0.611 ಮಾನವ ಬಲ ಎಂದು ಮೇಲ್ನೋಟಕ್ಕೆ ಬಿಂಬಿಸಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net