ಸ್ಫೋಟಕ ಸಾಮಗ್ರಿ ದಾಸ್ತಾನು ಕಟ್ಟಡಕ್ಕೆ ವಿರೋಧ

Published on

ಹೈಕೋರ್ಟ್​ ಸೂಚನೆ ಮೇರೆಗೆ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ

ವಿಜಯವಾಣಿ ಸುದ್ದಿಜಾಲ ಗುಡಿಬಂಡೆ

ತಾಲೂಕಿನ ಪುಲಸಾನಿವೊಡ್ಡು ಗ್ರಾಮದ ಸರ್ವೇ ನಂ. 34/5ರ 1 ಎಕರೆ 12 ಗುಂಟೆ ಜಮೀನಿನಲ್ಲಿ ಸ್ಫೋಟಕ ಸಾಮಗ್ರಿಗಳ ದಾಸ್ತಾನು ಕಟ್ಟಡ ನಿರ್ಮಾಣ ಸಂಬಂಧ ಹೈಕೋರ್ಟ್​ ಸೂಚನೆ ಮೇರೆಗೆ ಮಂಗಳವಾರ ಜಿಲ್ಲಾಧಿಕಾರಿ

ಪಿ.ಎನ್​.ರವೀಂದ್ರ ಸ್ಥಳ ಪರಿಶೀಲಿಸಿದರು.

ಸ್ಫೋಟಕ ಸಾಮಗ್ರಿಗಳ ದಾಸ್ತಾನು ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ನೀಡಬಾರದು ಎಂದು ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4&5 ಗ್ರಾಮಸ್ಥರು ನ್ಯಾಯಾಲಯದ ಮೊರೆಹೋಗಿದ್ದರು. ಗ್ರಾಮಸ್ಥರ ಸುರಕ್ಷತೆ ದೃಷ್ಟಿಯಿಂದ ಮತ್ತೊಮ್ಮೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದ್ದರಿಂದ ವಿವಿಧ ಇಲಾಖೆಗಳ ತಂಡಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಪಿ.ಎನ್​.ರವೀಂದ್ರ ತಿಳಿಸಿದರು.

ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿದ್ದರು. ವಿವಿಧ ಇಲಾಖೆಗಳಿಂದ ನೀಡಿದ್ದ ಎನ್​ಒಸಿ ಆಧಾರದ ಮೇಲೆ ದಾಸ್ತಾನು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಗ್ರಾಮಸ್ಥರು ನ್ಯಾಯಾಲಯದಲ್ಲಿ ರಿಟ್​ ಸಲ್ಲಿಸಿದ್ದರು. ನ್ಯಾಯಾಲಯವು ಮತ್ತೊಮ್ಮೆ ವಾದಿಗಳು ಮತ್ತು ಪ್ರತಿವಾದಿಗಳಿಗೆ ಅವಕಾಶ ಕೊಟ್ಟು ಎರಡೂ ಕಡೆಯವರ ಸಮಕ್ಷಮದಲ್ಲಿ ಜಿಲ್ಲಾಧಿಕಾರಿ ವೈಯಕ್ತಿಕವಾಗಿ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಈ ಮೇರೆಗೆ ತಹಸೀಲ್ದಾರ್​, ತಾಪಂ ಇಒ, ಲೋಕೋಪಯೋಗಿ, ಭೂ ಮಾಪನಾ, ಪರಿಸರ ಇಲಾಖೆ ಸೇರಿ ಇತರ ಇಲಾಖೆ ತಂಡ ಪರಿಶೀಲನೆ ನಡೆಸಿದ್ದು, ಎಲ್ಲವನ್ನು ರೆಕಾರ್ಡ್​ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.

ಗಲಾಟೆಯಾಗದಂತೆ ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿತ್ತು. ತಹಸೀಲ್ದಾರ್​ ಸಿಗ್ಬತ್​ವುಲ್ಲ, ತಾಲೂಕು ಪಂಚಾಯಿತಿ ಇಒ ನಾಗಮಣಿ, ಎಡಿಎಲ್​ ಆರ್​.ಸುಬ್ರಮಣಿ, ಲೋಕೋಪಯೋಗಿ ಇಲಾಖೆಯ ಪೂಜಪ್ಪ, ಗುಡಿಬಂಡೆ ಪೊಲೀಸ್​ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಗಣೇಶ್​, ರಮೇಶ್​, ಪೊಲೀಸ್​ ಸಿಬ್ಬಂದಿ, ಹಂಪಸಂದ್ರ ಗ್ರಾಪಂ ಪಿಡಿಒ ಮಮತಾ, ವಿವಿಧ ಇಲಾಖೆ ಅಧಿಕಾರಿಗಳು, ಪುಲಸಾನಿವೊಡ್ಡು, ನಲ್ಲಗೊಂಡಯ್ಯ ಗಾರಹಳ್ಳಿ, ಹಂಪಸಂದ್ರ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net