ಚೆನ್ನಕೊಪ್ಪ ಗ್ರಾಮದಲ್ಲಿ ಟೋಲ್‌ಗೇಟ್ ನಿರ್ಮಾಣಕ್ಕೆ ವಿರೋಧ

tollgate
ಚೆನ್ನಕೊಪ್ಪ ಗ್ರಾಮದಲ್ಲಿ ಟೋಲ್‌ಗೇಟ್ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರದಿಂದ ಸ್ಥಳ ಗುರುತಿಸುವ ಕಾರ್ಯ.
Published on

ಆನಂದಪುರ: ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಕೊಪ್ಪ ಗ್ರಾಮದಲ್ಲಿ ಟೋಲ್ ಗೇಟ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಆದರೆ ಜಾಗ ಸೂಕ್ತವಾದುದಲ್ಲ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ವಾಹನ ಚಾಲಕರಿಗೆ ಬಹು ದೂರದಿಂದಲೇ ಟೋಲ್ ಗೇಟ್ ಕಾಣುವಂತೆ ಇರಬೇಕು. ಟೋಲ್‌ನ ಹಿಂದಕ್ಕೆ ಮತ್ತು ಮುಂದಕ್ಕೆ ಕನಿಷ್ಠ ಎರಡು ಕಿ.ಮೀ ದೂರದವರೆಗೆ ಹೆದ್ದಾರಿ ನೇರವಾಗಿರಬೇಕು ಎಂಬ ನಿಯಮವೇ ಇದೆ. ಆದರೆ ಈ ನಿಮಯಗಳನ್ನು ಮೀರಿ ಚೆನ್ನಕೊಪ್ಪದಲ್ಲಿ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರಿ ಯೋಜನೆ ರೂಪಿಸಿದೆ.
ಶಿವಮೊಗ್ಗ- ಸಾಗರ ಮಾರ್ಗದಲ್ಲಿ ಚೆನ್ನಕೊಪ್ಪ ಮತ್ತು ತಂಗಳವಾಡಿ ಗ್ರಾಮದ ತಿರುವಿನ ಮಧ್ಯದಲ್ಲಿ ರಾಶಿ ಫಾರ್ಮ್ ಪಕ್ಕ ಟೋಲ್‌ಗೇಟ್ ಸ್ಥಾಪನೆಯಾಗಲಿದೆ. ಈ ಸ್ಥಳದಿಂದ ಹಿಂದೆ ಮತ್ತು ಮುಂದಕ್ಕೆ ಸುಮಾರು ಒಂದು ಕಿ.ಮೀ ದೂರದವರೆಗೆ ರಸ್ತೆ ಬದಿಯ ಜಾಗವನ್ನು ಹೆದ್ದಾರಿ ಪ್ರಾಧಿಕಾರ ವಶಪಡಿಸಿಕೊಳ್ಳಲಿದೆ.
ಶಿವಮೊಗ್ಗ-ಸಾಗರ ಮಾರ್ಗದಲ್ಲಿ ಹೆದ್ದಾರಿಯ ಮಧ್ಯ ಭಾಗದಿಂದ ಎಡ ಬದಿ 50 ಮೀಟರ್ ಮತ್ತು ಬಲ ಬದಿಯಲ್ಲಿ 30 ಮೀಟರ್ ಜಾಗ ವಶಪಡಿಸಿಕೊಳ್ಳಲು ಸರ್ವೇ ನಡೆಸಿ ಗುರುತು ಮಾಡಲಾಗಿದೆ. ಚೆನ್ನಕೊಪ್ಪ ಗ್ರಾಮದ ಈ ಸ್ಥಳದ ಸಮೀಪದಲ್ಲಿ ದೇವಾಲಯ, ಮಸೀದಿ, ಸರ್ಕಾರಿ ಶಾಲೆ, ಅಮ್ಮನಕೆರೆ ಇದೆ. ಟೋಲ್‌ಗೇಟ್‌ನಿಂದ ಇವುಗಳಿಗೆ ತೊಂದರೆಯಾಲಿದೆ. ಮುಖ್ಯವಾಗಿ ಜನವಸತಿ ಪ್ರದೇಶ ಮತ್ತು ಕೃಷಿ ಜಮೀನುಗಳು ಹಾಳಾಗಲಿದೆ ಎಂದು ಸ್ಥಳೀಯರು ಟೋಲ್ ಗೇಟ್‌ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಭಾಗದ ಬಹುತೇಕ ರೈತ ಕುಟುಂಬಗಳು ಶರಾವತಿ ಯೋಜನೆಯಿಂದ ಜಮೀನು ಕಳೆದುಕೊಂಡು ವಲಸೆ ಬಂದವರು. ಈ ಪ್ರದೇಶಕ್ಕೆ ಬಂದು ನೆಲೆಯಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಂತೆ ಜಮೀನು ಮತ್ತು ಮನೆ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಲಾಭಕ್ಕಿಂತ ನಷ್ಟವೇ ಹೆಚ್ಚು: ಚೆನ್ನಕೊಪ್ಪದಲ್ಲಿ ಟೋಲ್‌ಗೇಟ್ ನಿರ್ಮಾಣದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಚೆನ್ನಕೊಪ್ಪ ಮಸೀದಿ ಪಕ್ಕದಿಂದ ಸಾಗುವ ರಸ್ತೆ ಸುತ್ತುಬಳಸಿ ಗಿಳಾಲಗುಂಡಿ ಮೂಲಕ ಸಾಗಲಿದೆ. ಅಲ್ಲದೆ ಆಚಾಪುರ ಗ್ರಾಪಂ ಎದುರಿನಿಂದ ಸಾಗುವ ರಸ್ತೆ ಲಕ್ಕವಳ್ಳಿ, ಕೆರೆಹಿತ್ತಲು ಮೂಲಕ ಗಿಳಾಲಗುಂಡಿ ಸೇರುತ್ತದೆ. ಟೋಲ್‌ಗೆ ಹಣ ಕಟ್ಟುವುದನ್ನು ತಪ್ಪಿಸಿಕೊಂಡು ವಾಹನ ಚಾಲಕರು ಈ ಮಾರ್ಗದಲ್ಲಿ ಸುಲಭವಾಗಿ ಸಂಚರಿಸುವ ಸಾಧ್ಯತೆಯಿದೆ. ಹೊಸಕೊಪ್ಪ ಮೂಲಕ ಸಾಗುವ ರಸ್ತೆ ತಂಗಳವಾಡಿ ಬಳಿ ಹೆದ್ದಾರಿಯನ್ನು ಸಂಪರ್ಕಿಸುತ್ತದೆ. ಈ ಮಾರ್ಗದ ಮೂಲಕ ಟೋಲ್‌ಗೇಟ್ ತಪ್ಪಿಸಿಕೊಂಡು ವಾಹನಗಳು ಶಿವಮೊಗ್ಗ ಕಡೆಗೆ ಸಾಗಬಹುದು. ಈ ರೀತಿ ಎರಡ್ಮೂರು ಕಡೆ ಒಳ ರಸ್ತೆ ಇರುವ ಚೆನ್ನಕೊಪ್ಪದಲ್ಲಿ ಟೋಲ್‌ಗೇಟ್ ನಿರ್ಮಿಸಿದರೆ ನಷ್ಟವೇ ಅಧಿಕ.
ಚೆನ್ನಕೊಪ್ಪದಲ್ಲಿ ಟೋಲ್‌ಗೇಟ್ ಸ್ಥಾಪನೆ ಬೇಡವೇ ಬೇಡ. ಜನವಸತಿ ಇಲ್ಲದ ಪ್ರದೇಶದಲ್ಲಿ ಈ ಯೋಜನೆ ನಡೆಯಲಿ. ಈ ಸ್ಥಳದಲ್ಲಿ ಒಳ ದಾರಿಗಳಿವೆ. ಅಲ್ಲದೇ ಶರಾವತಿ ಯೋಜನೆಯಿಂದ ನಿರಾಶ್ರಿತರಾಗಿ ಬಂದ ಕುಟುಂಬಗಳು ಇಲ್ಲಿದ್ದು ಮತ್ತೊಮ್ಮೆ ನೆಲೆ ಕಳೆದುಕೊಳ್ಳಲಿದ್ದಾರೆ ಎನ್ನುತ್ತಾರೆ ಗಿಳಾಲಗುಂಡಿ ನಿವಾಸಿ ಗಜೇಂದ್ರ ಗೌಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net