

ಬೆಳಗಾವಿ: ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಬಸನಗೌಡ ಯತ್ನಾಳ್ ಟೀಂ ಜತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸಮಾಲೋಚನೆ ನಡೆಸಿದ್ದಾರೆ. ವಿಧಾನಸಭೆ ಮೊಗಸಾಲೆಯಲ್ಲಿ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಕರೆದು ಮಾತನಾಡಿದ ಅಶೋಕ, ಪಕ್ಷದ ಬೆಳವಣಿಗೆ ಬಗ್ಗೆ, ನೋಟಿಸ್ ವಿಚಾರ ಸೇರಿ ವಿವಿಧ ವಿಚಾರಗಳ ಬಗ್ಗೆ ಸಮಾಲೋಚಿಸಿದರು.
ಪಕ್ಷದ ವರಿಷ್ಠರು ನಮಗೆ ನೋಟಿಸ್ ಕೊಟ್ಟರೂ ಯಾವುದೇ ಕ್ರಮದ ವಿಚಾರ ಇದ್ದಂತಿಲ್ಲ, ಹೀಗಾಗಿ ನಮ್ಮ ದಾರಿ ನಮ್ಮದು. ಆದರೆ ನಿಮ್ಮ ಜತೆಗೆ ನಾವಿರುತ್ತೇವೆ. ಅಧ್ಯಕ್ಷರ ಜತೆ ಹೆಜ್ಜೆ ಹಾಕಲು ಸಾಧ್ಯವೇ ಇಲ್ಲ ಎಂದು ಯತ್ನಾಳ್ ಹೇಳಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಕಲಾಪ ಹಾಗೂ ಶಾಸಕಾಂಗ ಸಭೆಯಲ್ಲಿ ಭಾಗವಹಿಸುವಂತೆ ಅಶೋಕ್ ಇದೇ ವೇಳೆ ಕೋರಿದ್ದಾರೆ. ಈ ವೇಳೆ ಅಶೋಕ್ ಜತೆ ಕೆಲವೊಂದು ವಿಚಾರಗಳನ್ನು ರಹಸ್ಯವಾಗಿ ಚರ್ಚಿಸಿದ್ದಾರೆ. ಇತ್ತ ಮತ್ತೊಂದು ಕಡೆ ಶಿಸ್ತುಕ್ರಮದ ಭೀತಿಯಲ್ಲಿರುವ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಜತೆ ಚರ್ಚೆ ನಡೆಸಿದ ಅಶೋಕ್, ಒಟ್ಟಾಗಿರುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.