ನಾವಿಕನಿಲ್ಲದ ದೋಣಿಯಂತಾಗಿರುವ ಪ್ರತಿಪಕ್ಷ ಬಿಜೆಪಿ: ನಾಯಕತ್ವ ಆಯ್ಕೆ ನನೆಗುದಿ, ಚಟುವಟಿಕೆಗಳಿಗೆ ಬೇಗುದಿ; ಸಂಘಟನಾತ್ಮಕ ಪ್ರವಾಸ, ಹೋರಾಟಗಳು ಮುಂದೂಡಿಕೆ

BJP symbol
Published on

ಬೆಂಗಳೂರು: ಸಭೆ ನಡೆಸಿ ರ್ಚಚಿಸುವುದು, ಕಾರ್ಯತಂತ್ರ ರೂಪಿಸುವುದು, ನಂತರ ಮುಂದೂಡುವುದು. ಪ್ರತಿಪಕ್ಷ ಬಿಜೆಪಿಯ ಸದ್ಯದ ಕಾರ್ಯಶೈಲಿಯಿದು. ಸಂಘಟನಾತ್ಮಕವಾಗಿ ಪುಟಿದೇಳಲಿದ್ದೇವೆ ಎಂಬ ರಾಜ್ಯ ನಾಯಕರು ಮಾತು ಗಳು ಕೃತಿಗೆ ಬರುವ ಲಕ್ಷಣಗಳಿಲ್ಲ.

ಪಕ್ಷದ ವರಿಷ್ಠರ ಸೂಚನೆ, ನಾಲ್ಕು ಗೋಡೆ ನಡುವಿನ ಸಭೆಗಳಿಗೆ ಸೀಮಿತವಾಗಿದೆ. ಜನರು ಹಾಗೂ ಕಾರ್ಯಕರ್ತರ ಬಳಿಗೆ ತೆರಳುವ ಕಾರ್ಯ ಚಟುವಟಿಕೆಗಳು ನಿರ್ಣಯದಲ್ಲೇ ಉಳಿದಿವೆ. ಜನರು ಏನಂದುಕೊಂಡಾರು, ಮಾಧ್ಯಮಗಳು ಟೀಕಿಸಿಯಾವು ಎಂಬ ಒತ್ತಡಕ್ಕೆ ಕಟ್ಟುಬಿದ್ದವರಂತೆ ನಾಯಕರ ವರ್ತನೆಯಿದ್ದು, ಮನಃಪೂರ್ವಕ ವಾಗಿ ತೊಡಗಿಸಿಕೊಂಡಿಲ್ಲ ಎನ್ನುವುದು ಕಾರ್ಯಕರ್ತರ ಬೇಸರ. ಪಕ್ಷದ ರಾಜ್ಯ ಸಂಘಟನೆ ನಾವಿಕನಿಲ್ಲದ ದೋಣಿಯಂತಾಗಿದೆ.

ನನೆಗುದಿ, ಬೇಗುದಿ: ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ಪಕ್ಷದ ರಾಜ್ಯ ಸಾರಥಿ ವಿಚಾರದಲ್ಲಿ ವರಿಷ್ಠರ ನಿರ್ಲಿಪ್ತ ಭಾವನೆಗೆ ತಕ್ಕಂತೆ ರಾಜ್ಯ ನಾಯಕರ ಸ್ಪಂದನೆಯಿದೆ. ಜನರ ಬಳಿಗೆ ತೆರಳುತ್ತೇವೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತುತ್ತೇವೆ ಎಂದು ಹೇಳಿಕೆಗಳನ್ನು ನೀಡಿ ಕೈತೊಳೆದುಕೊಂಡಿದ್ದಾರೆ.

ನಾಯಕತ್ವ ವಿಷಯ ನನೆಗುದಿಗೆ ಬಿದ್ದ ಪರಿಣಾಮ ಚಟುವಟಿಕೆಗಳಿಗೆ ಬೇಗುದಿ ಅನುಭವಿಸುತ್ತಿದ್ದು, ತಳಮಟ್ಟದ ಸಂಘಟನಾ ಕಾರ್ಯ ಬಹುತೇಕ ಸ್ತಬ್ಧವಾಗಿದೆ. ವಿಧಾನಸಭೆ ಚುನಾವಣೆ ಸೋಲಿನ ನಂತರ ಮೊದಲ ಬಾರಿಗೆ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ತೆಗೆದುಕೊಂಡ ಹಲವು ನಿರ್ಣಯಗಳು ಜಾರಿಯಾಗಿಲ್ಲ.

ಮುಂದೂಡಿಕೆ: ಇದಕ್ಕೂ ಮುನ್ನ ಭಾರಿಮಳೆ, ನೆರೆಪೀಡಿತ ಪ್ರದೇಶಕ್ಕೆ ಭೇಟಿ ಬಗ್ಗೆ ಚರ್ಚೆಯಾಯಿತು. ಯಾರೊಬ್ಬರೂ ಆಸಕ್ತಿ ತೋರಿಸದ ಕಾರಣ ತಂಡಗಳ ರಚನೆ, ಪ್ರವಾಸಕ್ಕೆ ಮುಂದೂಡಿಕೆಯಾಯಿತು. ಬಾಕಿ ಬಿಲ್ ಪಾವತಿಗೆ ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಇದೇ ವಿಷಯ ಮುಂದಿಟ್ಟುಕೊಂಡು ರಾಜ್ಯಪಾಲರ ಬಳಿಗೆ ಹೋಗುತ್ತೇವೆ ಎಂದ ನಾಯಕರು ನಂತರ ಕೈಬಿಟ್ಟರು. ಕೋರ್ ಕಮಿಟಿ ನಿರ್ಣಯದ ಪ್ರಕಾರ ಕಾವೇರಿ ಜಲ ವ್ಯಾಜ್ಯದಲ್ಲಿ ಸರ್ಕಾರ ತಳೆದ ನಿಲುವು ಖಂಡಿಸಿ ಬೆಂಗಳೂರಿನಲ್ಲಿ ಆ.28ಕ್ಕೆ ಬೃಹತ್ ಹೋರಾಟ ನಡೆಯಬೇಕಾಗಿತ್ತು. ಅಲ್ಲದೆ, ಬರಗಾಲ ನಿರ್ಲಕ್ಷ್ಯ, ಅಭಿವೃದ್ಧಿ ಕುಂಠಿತ, ಬೆಲೆಗಳ ಏರಿಕೆ ಇತ್ಯಾದಿ ವಿಷಯಗಳನ್ನೆತ್ತಿಕೊಂಡು ಸೆ.1 ರಿಂದ 8ರವರೆಗೆ ವಿವಿಧ ಹಂತದ ಹೋರಾಟ ನಡೆಯಲಿದೆ ಎಂದಿತ್ತು. ಇದುವರೆಗೆ ಯಾವುದೇ ಸುಳಿವಿಲ್ಲ. ಹೋರಾಟಗಳಿಗೆ ಕಾರ್ಯಕರ್ತರು, ಜನರನ್ನು ಸೇರಿಸುವುದು. ಪೂರ್ವ ತಯಾರಿ ಖರ್ಚು-ವೆಚ್ಚ ಭರಿಸಲು ಬಹುತೇಕ ನಾಯಕರ ಮೀನಮೇಷವೇ ಮುಂದೂಡಿಕೆಗೆ ಕಾರಣವೆಂಬ ಅನುಮಾನವಿದೆ.

ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ನಾವು ಪಕ್ಷದಲ್ಲೇ ಇದ್ದೇವೆ. ನಮಗೆ ಪಕ್ಷ ಸರಿಯಾದ ಗೌರವ ಕೊಟ್ಟಿದೆ. ಗಾಳಿ ಸುದ್ದಿ ಹಬ್ಬಿಸೋದು ಸರಿಯಲ್ಲ. | ಬೈರತಿ ಬಸವರಾಜ, ಮಾಜಿ ಸಚಿವ

ಬಿ.ಎಲ್.ಸಂತೋಷ್ ಭಾಗಿ ಕೌತುಕ

ಲೋಕಸಭೆ ಚುನಾವಣೆ ಪೂರ್ವ ತಯಾರಿ ಭಾಗವಾಗಿ ನಡೆಯಲಿರುವ ಬೂತ್ ಪರಿಶೀಲನಾ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾಗಿಯಾಗಲಿದ್ದು, ಸಾಕಷ್ಟು ಕೌತುಕಕ್ಕೆ ಕಾರಣವಾಗಿದೆ. ಸೆ.1ರಿಂದ ಪ್ರಾರಂಭವಾಗಲಿರುವ ಮತದಾರ ಚೇತನ ಅಭಿಯಾನಕ್ಕೆ ಸ್ಪಷ್ಟ ದಿಕ್ಸೂಚಿ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸದ, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೂ ಪಾಲ್ಗೊಳ್ಳಲಿದ್ದಾರೆ. ಬೂತ್ ಪರಿಶೀಲನೆ ಉದ್ದೇಶ, ಮತದಾರರ ಯಾದಿ ಪರಿಷ್ಕರಣೆ, ಬೂತ್ ಸಮಿತಿಗಳ ಪುನರ್ ರಚನೆ ಮುಂತಾದವುಗಳ ಮಾಹಿತಿಯನ್ನು ಬಿ.ಎಲ್.ಸಂತೋಷ್ ಹಂಚಿಕೊಳ್ಳುವ ನಿರೀಕ್ಷೆಯಿದೆ. ಪೂರ್ವನಿಗದಿತ ಕಾರ್ಯಕ್ರಮಗಳಿಗೆ ಒಪ್ಪಿಕೊಂಡಿರುವ ಕಾರಣ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ, ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಡಲಿರುವ ಮಾಜಿ ಬಸವರಾಜ ಬೊಮ್ಮಾಯಿ ಈ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವರ್ಗಾವಣೆ ಸಾಧನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ 100 ದಿನದ ಸಾಧನೆ ಎಂದರೆ ಅದು ವರ್ಗಾವಣೆ ಮಾತ್ರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ ಎಲ್ಲ ಸ್ಥಗಿತವಾಗಿವೆ. ನಮ್ಮ ಕಾಲದ ಕೆಲಸಗಳನ್ನೆಲ್ಲ ಸ್ಥಗಿತ ಮಾಡಿದ್ದಾರೆ ಎಂದರು. ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆಗೆ ಕಾಂಗ್ರೆಸ್ ಲೇವಡಿ ವಿಚಾರ ಕುರಿತ ಪ್ರಶ್ನೆಗೆ, ಪ್ರತಿಪಕ್ಷದ ನಾಯಕನ ಆಯ್ಕೆಗೂ ಚಾರ್ಜ್​ಶೀಟ್​ಗೂ ಸಂಬಂಧವಿಲ್ಲ. ನೂರು ದಿನದ ವೈಫಲ್ಯ ಏನು ಎಂಬುದನ್ನು ಚಾರ್ಜ್​ಶೀಟ್​ನಲ್ಲಿ ಹೇಳಲಾಗಿದೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಮೊದಲು ಉತ್ತರ ಕೊಡಬೇಕು. ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ. ಅಧಿಕೃತ ವಿರೋಧ ಪಕ್ಷವಾಗಿ ನಾವು ಕೇಳಿದ್ದಕ್ಕೆ ಉತ್ತರ ಕೊಡಲಿ. ಯಾವುದೋ ನೆಪ ಹೇಳಿ ಜಾರಿಕೊಳ್ಳಬಾರದು ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net