ಸಂಸತ್ತಿನಲ್ಲಿ ವಿಪಕ್ಷದ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಅಪಮಾನ: ಗೋಯಲ್

goyal
Published on

ನವದೆಹಲಿ : ಮುಂಗಾರು ಅಧಿವೇಶನದ ಮೊದಲ ದಿನ ಉಭಯಸದನಗಳಲ್ಲಿ ಗದ್ದಲ ಉಂಟುಮಾಡಿ ಕಲಾಪಗಳು ಮುಂದೂಡಲ್ಪಡುವಂತೆ ಮಾಡಿದ ವಿರೋಧಪಕ್ಷಗಳ ನಡವಳಿಕೆಯನ್ನು ರಾಜ್ಯಸಭೆಯ ಬಿಜೆಪಿ ನಾಯಕ ಪಿಯೂಶ್​ ಗೋಯಲ್ ಖಂಡಿಸಿದ್ದಾರೆ. ವಿಪಕ್ಷಗಳ ವಿರೋಧದಿಂದಾಗಿ ಇಂದಿನ ಲೋಕಸಭಾ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತಾದರೆ, ರಾಜ್ಯಸಭಾ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು.

"ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಡೆಗಳಲ್ಲಿ ದುರದೃಷ್ಟಕರ ಪರಿಸ್ಥಿತಿ ನೋಡಿದೆವು. ರಾಜ್ಯಸಭೆಯಲ್ಲಂತೂ, ಅಧ್ಯಕ್ಷರ ಭಾಷಣಕ್ಕೂ ಅಡ್ಡಿಪಡಿಸಲಾಯಿತು" ಎಂದಿರುವ ಗೋಯಲ್​, "ಸಚಿವ ಸಂಪುಟ ಸೇರಿರುವ ದಲಿತರು, ಒಬಿಸಿ, ಎಸ್​ಸಿ-ಎಸ್​ಟಿ, ಈಶಾನ್ಯ ರಾಜ್ಯಗಳ ಪ್ರತಿನಿಧಿಗಳು ಮತ್ತು ಮಹಿಳೆಯರನ್ನು ಪರಿಚಯಿಸುವ ಕಾರ್ಯಕ್ಕೆ ಅಡಚಣೆ ಉಂಟುಮಾಡಿದ್ದಾರೆ. ಪ್ರತಿಪಕ್ಷದ ಸಂಸದರು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ನಿಲ್ಲಿಸಿದರು. ಇದು ಪ್ರಜಾಪ್ರಭುತ್ವ ಮತ್ತು ಭಾರತದ ಜನರಿಗೆ ಮಾಡಿದ ಅವಮಾನ. ಇದನ್ನು ನಾವು ಖಂಡಿಸುತ್ತೇವೆ" ಎಂದು ಗೋಯಲ್​ ಸುದ್ದಿಗಾರರಿಗೆ ಹೇಳಿದರು.

ವಿರೋಧಪಕ್ಷಗಳ ಸಂಸದರು ರೈತ ಪ್ರತಿಭಟನೆ, ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ ಮತ್ತು ಕೋವಿಡ್​ 19 ನಿರ್ವಹಣೆ ಮುಂತಾದ ವಿಚಾರಗಳ ಕುರಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯಸಭೆಯಲ್ಲಿ ಕಾಂಗ್ರೆಸ್​ ಬೆಲೆ ಏರಿಕೆ ಬಗ್ಗೆ ಸಸ್ಪೆಂಷನ್ ಆಫ್ ಬಿಸಿನೆಸ್ ನೋಟೀಸನ್ನು ನೀಡಿದೆ ಮತ್ತು ಇತರ ಪಕ್ಷಗಳು ರೈತರ ವಿಚಾರದಲ್ಲಿ ನೋಟೀಸು ನೀಡಿವೆ. ಸರ್ಕಾರದ ಪರವಾಗಿ ಆರಂಭವಾಗುವ ಕಲಾಪಗಳನ್ನು ಬಿಟ್ಟು ತಾವು ಎತ್ತಿರುವ ವಿಚಾರಗಳ ಬಗ್ಗೆ ಕಲಾಪದಲ್ಲಿ ಚರ್ಚೆಯಾಗಬೇಕು ಎಂಬುದು ಅವರ ವಾದವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net