ವಕ್ಫ್​ ತಿದ್ದುಪಡಿ ಮಸೂದೆಗೆ ವಿಪಕ್ಷದವರಿಂದಲೇ ಬೆಂಬಲ: ಕೇಂದ್ರ ಸಚಿವ ಕಿರಣ್​ ರಿಜಿಜು ಸ್ಫೋಟಕ ಹೇಳಿಕೆ! Waqf Bill

Waqf Bill
Published on

Waqf Bill : ಇಂದು (ಏಪ್ರಿಲ್​ 02) ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ- 2024 ಮಂಡನೆಗೂ ಮುನ್ನ, ಸ್ಫೋಟಕ ಹೇಳಿಕೆ ನೀಡಿದ ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಹಲವಾರು ವಿಪಕ್ಷ ಸದಸ್ಯರು ಸಾರ್ವಜನಿಕವಾಗಿ ಈ ಮಸೂದೆಯನ್ನು ವಿರೋಧಿಸುತ್ತಿದ್ದರು ಕೂಡ ಪ್ರೈವೆಟ್​ ಆಗಿ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಮಸೂದೆಯನ್ನು ವಿರೋಧಿಸುವವರು ತಮ್ಮ ರಾಜಕೀಯ ಕಾರಣಗಳಿಗಾಗಿ ಆ ರೀತಿ ಮಾಡುತ್ತಿದ್ದಾರೆ. ಆದರೆ, ಅನೇಕ ಕಾಂಗ್ರೆಸ್ ನಾಯಕರು ಮತ್ತು ವಿಪಕ್ಷಗಳು ಈ ಮಸೂದೆ ಅಗತ್ಯವಿದೆ ಎಂದು ಪ್ರೈವೆಟ್​ ಆಗಿ ಹೇಳುತ್ತಿದ್ದಾರೆ. ಕೇವಲ ಮತ ಬ್ಯಾಂಕ್‌ಗಾಗಿ ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ ಎಂದು ಕಿರಣ್​ ರಿಜಿಜು ಇಂದು ಲೋಕಸಭೆಯಲ್ಲಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಆಳ್ವಿಕೆಯಲ್ಲಿ ಪರಿಚಯಿಸಲಾಗುತ್ತಿರುವ ಈ ಮಸೂದೆಯನ್ನು ಜನರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಇದು ದೇಶದ ಬಡ ಮುಸ್ಲಿಮರನ್ನು ನೋಡಿಕೊಳ್ಳುತ್ತದೆ. ವಕ್ಫ್ ಮಂಡಳಿಯು ವರ್ಷಗಳಿಂದ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಡವರಿಗೆ ಸೇರಿದ ಆಸ್ತಿಯನ್ನು ಲೂಟಿ ಮಾಡುತ್ತಿರುವ ರೀತಿಯನ್ನು ಕೊನೆಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಿಜಿಜು ಅವರು ಹೇಳಿದರು.

ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಮುಖಂಡರು "ಮುಗ್ಧ ಮುಸ್ಲಿಮರನ್ನು" ದಾರಿ ತಪ್ಪಿಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ರಿಜಿಜು ಆರೋಪಿಸಿದರು. ಆ ತಪ್ಪುದಾರಿಯನ್ನು ಬಯಲಿಗೆ ಎಳೆಯುತ್ತೇವೆ ಎಂದರು. ಸಿಎಎ ಮುಸ್ಲಿಮರ ಪೌರತ್ವ ಸ್ಥಾನಮಾನವನ್ನು ಕಸಿದುಕೊಳ್ಳುತ್ತದೆ ಎಂಬ ನಿರೂಪಣೆಯನ್ನು ವಿಪಕ್ಷ ಸೃಷ್ಟಿಸಿತು, ಆದರೆ ಅದು ಎಂದಿಗೂ ಸಂಭವಿಸಲಿಲ್ಲ. ವಕ್ಫ್​ ಬಿಲ್​ ವಿಚಾರದಲ್ಲೂ ಅದೇ ಸುಳ್ಳು ನಿರೂಪಣೆಯನ್ನು ಹರಿಬಿಡುತ್ತಿದ್ದಾರೆ ಎಂದು ಕಿರಣ್ ರಿಜಿಜು ಹೇಳಿದರು.

ಅಂದಹಾಗೆ ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಆಡಳಿತವನ್ನು ಸುಧಾರಿಸಲು ಈ ಮಸೂದೆಯನ್ನು ತಿದ್ದುಪಡಿ ಮಾಡಲಾಗಿದೆ. ಆದರೆ, ವಿಪಕ್ಷಗಳಿಂದ ಭಾರಿ ಟೀಕೆಗಳನ್ನು ಎದುರಿಸಿದೆ. ಇದು ಸಂವಿಧಾನಬಾಹಿರ ಮತ್ತು ಮುಸ್ಲಿಮರ ಕಡೆಗೆ ತಾರತಮ್ಯವಾಗಿದೆ ಎಂದು ವಿಪಕ್ಷದವರು ವಾದಿಸಿದ್ದಾರೆ. ಈ ಮಸೂದೆಯನ್ನು ಆರಂಭದಲ್ಲಿ 2024, ಆಗಸ್ಟ್ ತಿಂಗಳಲ್ಲಿ ಲೋಕಸಭೆಯಲ್ಲಿ ಮಂಡಿಸಲಾಯಿತು. ಆದರೆ, ವಿಪಕ್ಷಗಳು ಮತ್ತು ವಿವಿಧ ಮುಸ್ಲಿಂ ಸಂಘಟನೆಗಳ ತೀವ್ರ ಪ್ರತಿಭಟನೆಯ ನಂತರ, ಅದನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲಾಯಿತು. ವಾರಗಳ ಕಾಲ ನಡೆದ ಚರ್ಚೆಗಳ ನಂತರ, ಜೆಪಿಸಿ ಈ ಮಸೂದೆಗೆ 14 ತಿದ್ದುಪಡಿಗಳನ್ನು ಅಂಗೀಕರಿಸಿತು ಮತ್ತು ವಿಪಕ್ಷದ ಸಂಸದರು ಪ್ರಸ್ತಾಪಿಸಿದ 44 ತಿದ್ದುಪಡಿಗಳನ್ನು ತಿರಸ್ಕರಿಸಿತು.

ವಕ್ಫ್ ಆಸ್ತಿಗಳ ಆಡಳಿತವನ್ನು ಸುಧಾರಿಸಲು, ದಕ್ಷತೆಯನ್ನು ಹೆಚ್ಚಿಸಲು ಮತ್ತು ರಾಜ್ಯ ವಕ್ಫ್ ಮಂಡಳಿಗಳು ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ತಿದ್ದುಪಡಿಗಳು ಅಗತ್ಯವೆಂದು ಸರ್ಕಾರ ವಾದಿಸುತ್ತದೆ. ಮಸೂದೆಯ ಪ್ರಮುಖ ನಿಬಂಧನೆಗಳಲ್ಲಿ ವಕ್ಫ್ ಕಾಯ್ದೆಯನ್ನು ಮರುನಾಮಕರಣ ಮಾಡುವುದು, ವಕ್ಫ್‌ನ ವ್ಯಾಖ್ಯಾನಗಳನ್ನು ನವೀಕರಿಸುವುದು, ನೋಂದಣಿ ಪ್ರಕ್ರಿಯೆಯನ್ನು ಸುಧಾರಿಸುವುದು ಮತ್ತು ವಕ್ಫ್ ದಾಖಲೆಗಳ ನಿರ್ವಹಣೆಯನ್ನು ಸುಗಮಗೊಳಿಸಲು ತಂತ್ರಜ್ಞಾನವನ್ನು ಪರಿಚಯಿಸುವುದು ಸೇರಿವೆ.

ಸರ್ಕಾರದ ಭರವಸೆಗಳ ಹೊರತಾಗಿಯೂ, ಮಸೂದೆಯು ವಿಶೇಷವಾಗಿ ವಿಪಕ್ಷಗಳಿಂದ ಬಲವಾದ ಪ್ರತಿರೋಧವನ್ನು ಎದುರಿಸಿದೆ. ವಕ್ಫ್ ಆಸ್ತಿಗಳ ಮೇಲಿನ ನಿಯಂತ್ರಣ ಮತ್ತು ಸ್ಥಳೀಯ ಆಡಳಿತದ ಮೇಲೆ ಸಂಭಾವ್ಯ ಪರಿಣಾಮಗಳು ಸೇರಿದಂತೆ ಹಲವಾರು ನಿಬಂಧನೆಗಳ ಬಗ್ಗೆ ವಿಪಕ್ಷಗಳು ಕಳವಳ ವ್ಯಕ್ತಪಡಿಸಿದೆ. ಚರ್ಚೆಗೆ ನಿಗದಿಪಡಿಸಿದ ಸಮಯದ ಬಗ್ಗೆಯೂ ವಿಪಕ್ಷಗಳು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿವೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಚರ್ಚೆಗೆ ಕೇವಲ ಎಂಟು ಗಂಟೆಗಳನ್ನು ನಿಗದಿಪಡಿಸಿದೆ. ಆದರೆ, ವಿಪಕ್ಷಗಳು ಹನ್ನೆರಡು ಗಂಟೆಗಳನ್ನು ಕೋರಿತ್ತು. ಹೀಗಾಗಿ ವಿಪಕ್ಷಗಳ ಪ್ರತಿಭಟನೆಗೆ ಕಾರಣವಾಗಿದೆ.

ಮಸೂದೆಯ ಕುರಿತು ಚರ್ಚೆಗೆ ಎಂಟು ಗಂಟೆಗಳನ್ನು ನಿಗದಿಪಡಿಸಿರುವ ಬಿಜೆಪಿ ನೇತೃತ್ವದ ಕೇಂದ್ರವು, ತನ್ನ ಬಹುಮತದ ಕಾರಣದಿಂದಾಗಿ ಮಸೂದೆಯು ಅಂಗೀಕಾರವಾಗುವ ವಿಶ್ವಾಸವನ್ನು ಹೊಂದಿದೆ. ಆದರೆ, ಕಾಂಗ್ರೆಸ್ ನೇತೃತ್ವದ ವಿಪಕ್ಷವು ತೀವ್ರ ಪ್ರತಿರೋಧವನ್ನು ಒಡ್ಡುವುದಾಗಿ ಪ್ರತಿಜ್ಞೆ ಮಾಡಿದೆ. 543 ಸದಸ್ಯರ ಲೋಕಸಭೆಯಲ್ಲಿ ಎನ್‌ಡಿಎ ಪ್ರಸ್ತುತ 293 ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 240 ಸದಸ್ಯರನ್ನು ಹೊಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net