ವಿಕೆಟ್​ ಕಿತ್ತು ಅತಿಯಾಗಿ ವರ್ತಿಸಿದ ಎಲ್​ಎಸ್​ಜಿ ಮಿಸ್ಟರಿ ಸ್ಪಿನ್ನರ್ ದಿಗ್ವೇಶ್ ಸಿಂಗ್ ರಾಠಿಗೆ ಬಿಸಿಸಿಐ ಬಿಗ್​ ಶಾಕ್​! BCCI ​

BCCI
Published on

BCCI : ಲಖನೌ ಸೂಪರ್ ಜೈಂಟ್ಸ್ (ಎಲ್​ಎಸ್​ಜಿ) ತಂಡದ ಮಿಸ್ಟರಿ ಸ್ಪಿನ್ನರ್​ ದಿಗ್ವೇಶ್ ಸಿಂಗ್ ರಾಠಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೊಡ್ಡ ಆಘಾತ ನೀಡಿದೆ. ವಿಕೆಟ್ ಪಡೆದ ನಂತರ ಅತಿಯಾಗಿ ವರ್ತಿಸಿದ್ದಕ್ಕೆ ದಂಡ ವಿಧಿಸಲಾಗಿದೆ. ಪಂದ್ಯ ಶುಲ್ಕದ ಶೇ. 25 ರಷ್ಟು ಕಡಿತಗೊಳಿಸುವುದರ ಜೊತೆಗೆ, ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.

ಐಪಿಎಲ್-2025ರ ಭಾಗವಾಗಿ ಮಂಗಳವಾರ (ಏಪ್ರಿಲ್​ 01) ಲಖನೌ ಮತ್ತು ಪಂಜಾಬ್ ವಿರುದ್ಧ 13ನೇ ಐಪಿಎಲ್​ ಪಂದ್ಯ ನಡೆಯಿತು. ಉತ್ತರ ಪ್ರದೇಶದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತ ಲಖನೌ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಐಡೆನ್ ಮಾರ್ಕ್ರಾಮ್ (18 ಎಸೆತಗಳಲ್ಲಿ 28 ರನ್​), ನಿಕೋಲಸ್ ಪೂರನ್ (30 ಎಸೆತಗಳಲ್ಲಿ 44 ರನ್​), ಆಯುಷ್ ಬಡೋನಿ (33 ಎಸೆತಗಳಲ್ಲಿ 41 ರನ್​), ಮತ್ತು ಅಬ್ದುಲ್ ಸಮದ್ (12 ಎಸೆತಗಳಲ್ಲಿ 27 ರನ್​) ಉತ್ತಮ ಪ್ರದರ್ಶನ ನೀಡಿದರು.

ಲಖನೌ ತಂಡ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು. ಪಂಜಾಬ್ ಪರ ಅರ್ಷದೀಪ್ ಸಿಂಗ್ ಮೂರು ವಿಕೆಟ್‌ಗಳೊಂದಿಗೆ ಅಗ್ರ ಬೌಲರ್ ಆಗಿ ಮಿಂಚಿದರೆ, ಲಾಕಿ ಫರ್ಗುಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಜಾನ್ಸೆನ್ ಮತ್ತು ಯಜುವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು.

ಲಖನೌ ನೀಡಿದ ಗುರಿಯನ್ನು ಪಂಜಾಬ್​ ಬೆನ್ನಟ್ಟಲು ಪ್ರಾರಂಭಿಸಿದ ಕೂಡಲೇ, ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ತಮ್ಮ ವಿಕೆಟ್ ಕಳೆದುಕೊಂಡರು. ಲಖನೌ ಸ್ಪಿನ್ನರ್ ದಿಗ್ವೇಶ್ ರಾಠಿ ಎಸೆದ ಚೆಂಡನ್ನು ಶಾರ್ಟ್ ಬಾಲ್ ಆಡುವಾಗ ಬ್ಯಾಟ್‌ನ ಮೇಲಿನ ಅಂಚಿಗೆ ಚೆಂಡು ತಾಗಿತು. ಸರಿಯಾಗಿ ಕನೆಕ್ಟ್ ಆಗದಿದ್ದಕ್ಕೆ ಚೆಂಡು ಗಾಳಿಯಲ್ಲಿ ಹಾರಿತು. ಈ ವೇಳೆ ಮಿಡ್‌ಫೀಲ್ಡ್‌ನಿಂದ ಓಡಿ ಬಂದ ಫೀಲ್ಡರ್ ಶಾರ್ದೂಲ್ ಠಾಕೂರ್‌ ಕ್ಯಾಚ್ ಹಿಡಿದರು.

ಒಟ್ಟು ಒಂಬತ್ತು ಎಸೆತಗಳನ್ನು ಎದುರಿಸಿದ ಪ್ರಿಯಾಂಶ್ 8 ರನ್‌ಗಳ ವೈಯಕ್ತಿಕ ಸ್ಕೋರ್‌ನೊಂದಿಗೆ ಡಗೌಟ್​ ತಲುಪಿದರು. ಆದರೆ, ಅವರು ಕ್ರೀಸ್ ತೊರೆಯುತ್ತಿದ್ದಂತೆ, ಹತ್ತಿರಕ್ಕೆ ಓಡಿ ಬಂದ ದಿಗ್ವೇಶ್ ರಾಠಿ, ಅತಿಯಾಗಿ ವರ್ತಿಸಿದರು. ಅಂಗೈಯಲ್ಲಿ ಏನೋ ಬರೆಯುತ್ತಿರುವಂತೆ ಸನ್ನೆ ಮಾಡಿ ವಿಕೆಟ್​ ಅನ್ನು ಸಂಭ್ರಮಿಸಿದರು. ಈ ಹಿನ್ನೆಲೆಯಲ್ಲಿ ದಿಗ್ವೇಶ್ ರಾಠಿ ಅವರ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಐಪಿಎಲ್ ಆಡಳಿತ ಮಂಡಳಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಈ ಸಂಬಂಧ ಐಪಿಎಲ್ ಮಾಧ್ಯಮ ಸಲಹಾ ಸಮಿತಿ ಹೇಳಿಕೆ ನೀಡಿದೆ.

ದಿಗ್ವೇಶ್ ಸಿಂಗ್ ರಾಠಿ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಾರೆ. ಮ್ಯಾಚ್ ರೆಫರಿಯ ನಿರ್ಧಾರದಂತೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪಂದ್ಯ ಶುಲ್ಕದಲ್ಲಿ ಶೇ. 25 ರಷ್ಟು ಕಡಿತಗೊಳಿಸಲಾಗಿದೆ ಮತ್ತು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ ಎಂದು ಹೇಳಿದೆ.

ಅಂದಹಾಗೆ ದೆಹಲಿಯ ದಿಗ್ವೇಶ್ ಸಿಂಗ್ ರಾಠಿ, ಈ ವರ್ಷ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಲಖನೌ ಪಂದ್ಯದ ಸಮಯದಲ್ಲಿ ವಿಶಾಖಪಟ್ಟಣದಲ್ಲಿ ಪದಾರ್ಪಣೆ ಮಾಡಿದ ಬಲಗೈ ಸ್ಪಿನ್ನರ್, ತಮ್ಮ ಮೊದಲ ಪಂದ್ಯದಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಇಲ್ಲಿಯವರೆಗೆ, ಅವರು ಮೂರು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಪಂದ್ಯದ ವಿಷಯಕ್ಕೆ ಬಂದರೆ, ಪ್ರಿಯಾಂಶ್ ಆರ್ಯ ವಿಕೆಟ್ ಪಡೆದ ನಂತರವೂ ಲಖನೌ ತಂಡದ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಮತ್ತೊಬ್ಬ ಆರಂಭಿಕ ಆಟಗಾರ ಪ್ರಭ್‌ಸಿಮ್ರಾನ್ ಸಿಂಗ್ (34 ಎಸೆತಗಳಲ್ಲಿ 69 ರನ್​) ಅರ್ಧಶತಕ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ ( 30 ಎಸೆತಗಳಲ್ಲಿ ಔಟಾಗದೆ 52 ರನ್​) ಮತ್ತು ನೆಹಾಲ್ ವಾಧೇರಾ (25 ಎಸೆತಗಳಲ್ಲಿ ಔಟಾಗದೇ 43 ರನ್​) ಅದ್ಭುತ ಇನ್ನಿಂಗ್ಸ್ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. 16.2 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಎಂಟು ವಿಕೆಟ್‌ಗಳಿಂದ ಜಯಗಳಿಸಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net